ನಿಮಗೆ ತಾಕತ್ತಿದ್ದರೆ ಅಯೋಧ್ಯೆಯಿಂದ ನನ್ನ ವಿರುದ್ಧ ಸ್ಪರ್ಧಿಸಿ! ಅಖಿಲೇಶ್ ಯಾದವ್‌ಗೆ ಸಿಎಂ ಯೋಗಿ ಆದಿತ್ಯನಾಥ್ ಬಹಿರಂಗ ಸವಾಲು | Yogi Adityanath

ಅಯೋಧ್ಯೆ ಅಖಾಡದಲ್ಲಿ ನೇರ ಹಣಾಹಣಿಗೆ ಅಖಿಲೇಶ್‌ಗೆ ಪಂಥಾಹ್ವಾನ ನೀಡಿದ ಯೋಗಿ ಆದಿತ್ಯನಾಥ್!
ಅಯೋಧ್ಯೆ ಅಖಾಡದಲ್ಲಿ ನೇರ ಹಣಾಹಣಿಗೆ ಅಖಿಲೇಶ್‌ಗೆ ಪಂಥಾಹ್ವಾನ ನೀಡಿದ ಯೋಗಿ ಆದಿತ್ಯನಾಥ್!
Published on: 

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್​ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಗುರುವಾರ ಬಹಿರಂಗ ಸವಾಲು ಹಾಕಿದ್ದಾರೆ. ಅಖಿಲೇಶ್ ಯಾದವ್ ಈ ಸವಾಲನ್ನು ಸ್ವೀಕರಿಸಿ ನಾಮಪತ್ರ ಸಲ್ಲಿಸಿದರೆ, ತಾವೂ ಅಯೋಧ್ಯೆಯಿಂದಲೇ ನಾಮಪತ್ರ ಸಲ್ಲಿಸುವುದಾಗಿ ಯೋಗಿ ಘೋಷಿಸಿದ್ದಾರೆ.

ಅಖಿಲೇಶ್ ಯಾದವ್ ಈ ಹಿಂದೆ ನೀಡಿದ್ದ ಸವಾಲಿಗೆ ತಿರುಗೇಟು ನೀಡಿದ ಸಿಎಂ ಯೋಗಿ, ನೀವು ಅಯೋಧ್ಯೆಯಿಂದ ನಾಮಪತ್ರ ಸಲ್ಲಿಸಿದರೆ, ನಾನೂ ಅಲ್ಲಿಂದಲೇ ನಾಮಪತ್ರ ಸಲ್ಲಿಸುತ್ತೇನೆ. ನಿಮಗೆ ಧೈರ್ಯವಿದ್ದರೆ ನೇರ, ಮುಖಾಮುಖಿ ಸ್ಪರ್ಧೆ ನಡೆಯಲಿ ಎಂದು ಕಿಡಿಕಾರಿದ್ದಾರೆ.

ಚುನಾವಣೆಯಲ್ಲಿ ನೇರವಾಗಿ ಎದುರಿಸುವ ಧೈರ್ಯ ಅಖಿಲೇಶ್ ಯಾದವ್ ಅವರಿಗಿಲ್ಲ ಎಂದು ಟೀಕಿಸಿದ ಸಿಎಂ ಯೋಗಿ, ದುರ್ಬಲರು ಮಾತ್ರ ಹಿಂದಿನಿಂದ ದಾಳಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಎಸ್‌ಪಿ ನಾಯಕರು ಮಾಫಿಯಾ ಶಕ್ತಿಗಳನ್ನು ಅವಲಂಬಿಸಿದ್ದಾರೆ, ಯುವಕರ ಉದ್ಯೋಗಾವಕಾಶಗಳನ್ನು ಕಸಿದುಕೊಂಡಿದ್ದಾರೆ ಮತ್ತು ರಾಜ್ಯದಲ್ಲಿ ಮಹಿಳೆಯರು ಹಾಗೂ ವ್ಯಾಪಾರಿಗಳ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿದರು.

Also Read
ಅಯೋಧ್ಯೆಯಿಂದ ನಾಮಪತ್ರ ಸಲ್ಲಿಸುವಂತೆ ಯೋಗಿ ಆದಿತ್ಯನಾಥ್ ಮರುಸವಾಲು: ಬಿರುಗಾಳಿಗೆ ಎಲ್ಲರ ಅಹಂಕಾರ ಧೂಳೀಪಟ ಅಂದಿದ್ದೇಕೆ ಅಖಿಲೇಶ್..? | Akhilesh Yadav Vs CM Yogi
ಅಯೋಧ್ಯೆ ಅಖಾಡದಲ್ಲಿ ನೇರ ಹಣಾಹಣಿಗೆ ಅಖಿಲೇಶ್‌ಗೆ ಪಂಥಾಹ್ವಾನ ನೀಡಿದ ಯೋಗಿ ಆದಿತ್ಯನಾಥ್!

ರೋಡ್‌ಶೋ ವೇಳೆ ಬಾಲಕನ ಸಾವು: ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

ಬುಧವಾರ ಗೋರಖ್‌ಪುರದಲ್ಲಿ ನಡೆದ ಅಖಿಲೇಶ್ ಯಾದವ್ ಅವರ ರೋಡ್‌ಶೋ ವೇಳೆ 13 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಿಎಂ ಯೋಗಿ ಸಮಾಜವಾದಿ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಗೋರಖ್‌ಪುರ ಜಿಲ್ಲೆಯ ಕ್ಯಾಂಪಿಯರ್‌ಗಂಜ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸ್ಥಳೀಯ ಬಿಜೆಪಿ ನಾಯಕ ಓಂಕಾರ್ ಸಿಂಗ್ ಅವರ ಪುತ್ರ ಆರ್ಯವರ್ಧನ್ ರೋಡ್‌ಶೋ ವೇಳೆ ಜೆಸಿಬಿ ಹರಿದು ಮೃತಪಟ್ಟ ದಾರುಣ ಘಟನೆಯನ್ನು ಪ್ರಸ್ತಾಪಿಸಿದರು.

ಕೇವಲ 13 ವರ್ಷದ ಆ ಮುಗ್ಧ ಬಾಲಕ ಮಾಡಿದ ತಪ್ಪೇನು? ಆತ ಸಮಾಜವಾದಿ ಪಕ್ಷದ ರೋಡ್‌ಶೋಗೆ ಬಲಿಯಾಗಿದ್ದಾನೆ ಎಂದು ಯೋಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದ ಬಾಲಕನನ್ನು ಅತ್ಯಂತ ಕ್ರೂರ ರೀತಿಯಲ್ಲಿ ಬಲಿ ತೆಗೆದುಕೊಳ್ಳಲಾಗಿದೆ ಎಂದ ಅವರು, ಮಾಫಿಯಾ ಮತ್ತು ಗೂಂಡಾಗಿರಿಯನ್ನು ಬೆಂಬಲಿಸುವವರು ಬಾಲಕನ ಸಾವಿಗೆ ಸಂತಾಪವನ್ನೂ ಸೂಚಿಸಿಲ್ಲ ಎಂದು ಟೀಕಿಸಿದರು. ಮೃತ ಬಾಲಕನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದಾಗಿ ತಿಳಿಸಿದ ಯೋಗಿ, ಎಸ್‌ಪಿ ಗೂಂಡಾಗಿರಿ ಮತ್ತು ಅರಾಜಕತೆಯನ್ನು ಪ್ರೋತ್ಸಾಹಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

2027ರಲ್ಲಿ ಬಿಜೆಪಿಗೆ ಹೀನಾಯ ಸೋಲು: ಅಖಿಲೇಶ್ ಭವಿಷ್ಯ

ಮತ್ತೊಂದೆಡೆ, ಬುಧವಾರ ಗೋರಖ್‌ಪುರದಲ್ಲಿ 20 ಕಿ.ಮೀ. ಉದ್ದದ ಪಿಡಿಎ ರಥಯಾತ್ರೆ ನಡೆಸಿದ ಅಖಿಲೇಶ್ ಯಾದವ್, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಲೇ ಚುನಾವಣೆ ನಡೆದರೆ ಯೋಗಿ ಅವರ ಭದ್ರಕೋಟೆಯಾದ ಗೋರಖ್‌ಪುರದಲ್ಲೇ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ರಥಯಾತ್ರೆಗೆ ಸಿಕ್ಕ ಜನಬೆಂಬಲವನ್ನು ಉಲ್ಲೇಖಿಸಿದ ಅಖಿಲೇಶ್, ಈ ಭಾಗದಲ್ಲಿ ಬಿಜೆಪಿಯ ಹಿಡಿತ ಸಡಿಲವಾಗುತ್ತಿದೆ ಎಂದರು. ಇದೇ ವೇಳೆ ಬಿಜೆಪಿಯ ಸಾಂಸ್ಥಿಕ ನೇಮಕಾತಿಗಳನ್ನೂ ಪ್ರಶ್ನಿಸಿದ ಅವರು, ಐದು ಬಾರಿ ಶಾಸಕರಾಗಿರುವ ನಿತಿನ್ ನವೀನ್​ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮತ್ತು ಏಳು ಬಾರಿ ಲೋಕಸಭಾ ಸಂಸದರಾಗಿರುವ ಪಂಕಜ್ ಚೌಧರಿ ಅವರನ್ನು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿರುವ ಪಕ್ಷದ ಆಯ್ಕೆಯನ್ನು ಟೀಕಿಸಿದರು(ಏಜೆನ್ಸೀಸ್​).