ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ; ನಾಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಡಿಕೆಶಿಗೆ ಪಟ್ಟ? | CM Siddaramaiah

ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿವಿ ಸುದ್ದಿಗೋಷ್ಠಿ.
ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿವಿ ಸುದ್ದಿಗೋಷ್ಠಿ.
Published on
ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಕೊನೆಗೂ ಕೈಮಾಕ್ಸ್ ಹಂತ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರಿಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದ್ದು, ಡಿಸಿಎಂ ಡಿಕೆ ಶಿವಕುಮಾ‌ರ್ ನೂತನ ಮುಖ್ಯಮಂತ್ರಿಯಾಗಿ ಬಡ್ತಿ ಪಡೆಯುವ ಮುಹೂರ್ತ ಸನ್ನಿಹಿತವಾಗಿದೆ ಎಂಬ ಮಾತುಗಳು ಮಂಗಳವಾರ ರಾತ್ರಿ ಕಾಂಗ್ರೆಸ್ ವಲಯದಲ್ಲಿ ಹರಿದಾಡಿವೆ.
ನಾಯಕತ್ವ ವಿಚಾರವಾಗಿ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಆಹ್ವಾನಿಸಿದ್ದ ಪಕ್ಷದ ಹೈಕಮಾಂಡ್ ಮಂಗಳವಾರ ಇಬ್ಬರೂ ನಾಯಕರ ಜತೆ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಸುದೀರ್ಘ ಸಭೆ ನಡೆಸಿತು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಜತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಭೆಯ ಬಳಿಕ ರಾಹುಲ್ ಗಾಂಧಿ ಇಬ್ಬರೂ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. 
ಈ ಸಂದರ್ಭದಲ್ಲಿ ಉಭಯ ನಾಯಕರಿಗೆ ರಾಹುಲ್ ಗಾಂಧಿ ನಿರ್ದಿಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಎಲ್ಲ ಸಚಿವರೊಂದಿಗೆ ಉಪಾಹಾರ ಕೂಟ ನಡೆಸಲಿದ್ದು, ಬಳಿಕ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಮಂಗಳವಾರ ರಾಹುಲ್ ಗಾಂಧಿ ಜತೆ ಸಭೆ ಬಳಿಕ ದೆಹಲಿಯಲ್ಲಿ ಕೆ.ಜೆ. ಜಾರ್ಜ್‌ ನಿವಾಸದಲ್ಲಿ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ, ತಡರಾತ್ರಿ ಬೆಂಗಳೂರಿಗೆ ಮರಳಿದ ಬಳಿಕವೂ ಎಚ್‌ಎಎಲ್ ಏರ್‌ಪೋರ್ಟ್ ನಲ್ಲೇ ಇನ್ನಷ್ಟು ಸಚಿವರೊಂದಿಗೆ ಸಮಾಲೋಚಿಸಿದರು. 
ಇನ್ನೊಂದೆಡೆ ಡಿಕೆ ಶಿವಕುಮಾರ್ ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಮರಳಲಿದ್ದು, ಅವರೊಂದಿಗೆ ಸುರ್ಜೆವಾಲಾ ಕೂಡ ಆಗಮಿಸುವ ಸಾಧ್ಯತೆ ಇದೆ. ಮಂಗಳವಾರ ಸಂಜೆ ಸಿಎಂ-ಡಿಸಿಎಂ ಜತೆ ಕಿರುಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, 'ರಾಜ್ಯಸಭಾ ಚುನಾವಣೆಯ ಸಲುವಾಗಿ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲವೂ ಊಹಾಪೋಹ' ఎంబ 'ಅಧಿಕೃತ' ಹೇಳಿಕೆ ನೀಡಿದ್ದರು. ಆದರೆ, ವಾಸ್ತವದಲ್ಲಿ ನಾಯಕತ್ವ ಬದಲಾವಣೆಗೆ ವರಿಷ್ಠರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ತಡರಾತ್ರಿ ವೇಳೆಗೆ ಮೂಲಗಳಿಂದ ಖಚಿತ ಪಟ್ಟಿದೆ.

ನಾಳೆ ಸಚಿವರ ಜತೆ ಉಪಾಹಾರಕೂಟ

ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಡಿದೆ. 'ಪಕ್ಷ ಈಗಾಗಲೇ ನಿಮಗೆ ಅವಕಾಶ ನೀಡಿದ್ದು, ವಿಪಕ್ಷ ನಾಯಕರಾಗಿದ್ದೀರಿ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೀರಿ. ಈಗ ಬೇರೆಯವರಿಗೆ ಅವಕಾಶ ನೀಡುವ ಸಮಯ ಬಂದಿದೆ' ಎಂದು ರಾಹುಲ್ ಹೇಳಿದ್ದಾರೆನ್ನಲಾಗಿದೆ. ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಎಲ್ಲ ಸಚಿವರೊಂದಿಗೆ ಉಪಾಹಾರ ಕೂಟ ಆಯೋಜಿಸಿದ್ದು, ಬಳಿಕ ಮಹತ್ವದ ಬೆಳವಣಿಗೆ ನಡೆಯಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net