ನಕಲಿ ಪಾಸ್‌ಪೋರ್ಟ್ ಪ್ರಕರಣ: ಚೋಟಾ ರಾಜನ್‌ಗೆ 7 ವರ್ಷ ಜೈಲು; 22 ವರ್ಷಗಳ ಕಾನೂನು ಹೋರಾಟದಲ್ಲಿ ಗೆದ್ದ ಸಿಬಿಐ! Chhota Rajan in Fake Passport Case
ಭೂಗತ ಪಾತಕಿ ಛೋಟಾ ರಾಜನ್‌ಗೆ 7 ವರ್ಷಗಳ ಜೈಲು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಕಲಿ ಪಾಸ್‌ಪೋರ್ಟ್ ಪ್ರಕರಣ
ಭೂಗತ ಪಾತಕಿ ಛೋಟಾ ರಾಜನ್‌ಗೆ 7 ವರ್ಷಗಳ ಜೈಲು
22 ವರ್ಷಗಳ ಕಾನೂನು ಹೋರಾಟದಲ್ಲಿ ಜಯಗಳಿಸಿದ ಸಿಬಿಐ
ನವದೆಹಲಿ: ಬಾಂಬೆ ಭೂಗತ ಜಗತ್ತಿನಲ್ಲಿ ಛೋಟಾ ರಾಜನ್ ಎಂದೇ ಕುಖ್ಯಾತಿ ಪಡೆದಿರುವ ರಾಜೇಂದ್ರ ಸದಾಶಿವ ನಿಕಲ್ಜೆಗೆ ಕಾನೂನಿನ ಕುಣಿಕೆ ಬಿಗಿಯುತ್ತಲೇ ಇದೆ. ನಕಲಿ ದಾಖಲೆಗಳನ್ನು ಬಳಸಿ ಪಾಸ್‌ಪೋರ್ಟ್ (Chhota Rajan in Fake Passport Case) ಪಡೆದುಕೊಂಡಿದ್ದ ಇತನಿಗೆ ಗುರುವಾರ (ಜು.30) ವಿಶೇಷ ಸಿಬಿಐ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ಹಾಗೂ 55,000 ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.ಬರೋಬ್ಬರಿ 22 ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟದ ಬಳಿಕ ಸಿಬಿಐ ಈ ಪ್ರಕರಣದಲ್ಲಿ ಯಶಸ್ಸನ್ನು ಸಾಧಿಸಿದೆ.
ತನಿಖಾ ಸಂಸ್ಥೆಯ ವರದಿ ಪ್ರಕಾರ, ಛೋಟಾ ರಾಜನ್ ಅಸಲಿ ಹೆಸರು ರಾಜೇಂದ್ರ ಅಲಿಯಾಸ್ ನಾನಾ ಅಲಿಯಾಸ್ ಛೋಟಾ ರಾಜನ್ (ಮುಂಬೈ ನಿವಾಸಿ ಸದಾಶಿವ್ ಅವರ ಮಗ). ಆದರೆ ಆತ ಕಾನೂನಿನ ಕಣ್ಣಿಗೆ ಮಣ್ಣೆ ಎರಚಲು ವಿಜಯ್ ಕದಮ್ ಎಂಬ ನಕಲಿ ಹೆಸರನ್ನು ಸೃಷ್ಟಿಸಿದ್ದ.
ಇದಕ್ಕಾಗಿ ಶಾಲೆ ಬಿಡುವ ಪ್ರಮಾಣಪತ್ರ (TC) ಮತ್ತು ಪಡಿತರ ಚೀಟಿಯಂತಹ (Ration Card) ನಕಲಿ ದಾಖಲೆಗಳನ್ನು ಚೆನ್ನೈ ಪಾಸ್‌ಪೋರ್ಟ್ ಕಚೇರಿಗೆ ಸಲ್ಲಿಸಿ ಭಾರತೀಯ ಪಾಸ್‌ಪೋರ್ಟ್ ಪಡೆದು ವಂಚನೆ ಎಸಗಿದ್ದನು.
2002ರಿಂದ ನಡೆದಿತ್ತು ಬೇಟೆ!
ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾರ್ಚ್ 19, 2002ರಂದೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು. ತನಿಖೆ ಆರಂಭಿಸಿದ ಎರಡೇ ವರ್ಷದಲ್ಲಿ ಅಂದರೆ ಜನವರಿ 22, 2004 ರಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.
ಪಾಸ್‌ಪೋರ್ಟ್ ಪಡೆದ ವ್ಯಕ್ತಿ ಬೇರೆ ಯಾರೂ ಅಲ್ಲ, ಮುಂಬೈನ ಕುಖ್ಯಾತ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಎಂಬುದು ತನಿಖೆಯಿಂದ ಹೊರಬಂದಿತ್ತು. ಸದ್ಯ ಈ ಡಾನ್ ದೆಹಲಿಯ ಹೈ-ಸೆಕ್ಯುರಿಟಿ ತಿಹಾರ್ ಜೈಲಿನಲ್ಲಿ ಇದ್ದು, ಈಗಾಗಲೇ ಇತರೆ ಗಂಭೀರ ಅಪರಾಧ ಹಾಗೂ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಬಾಲಿಯಲ್ಲಿ ಸಿಕ್ಕಿಬಿದ್ದ ರಾಜನ್!
ಅಪರಾಧ ಲೋಕದಲ್ಲಿ ದಶಕಗಳ ಕಾಲ ಮೆರೆದ ಛೋಟಾ ರಾಜನ್ ಕೊನೆಗೂ ಅಕ್ಟೋಬರ್ 25, 2015ರಂದು ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯ ಬಲೆಗೆ ಬಿದ್ದಿದ್ದನು. ಆಸ್ಟ್ರೇಲಿಯಾಕ್ಕೆ ತೆರಳಲು ವಿಮಾನ ಹತ್ತುವುದಕ್ಕಾಗಿ ಕಾಯುತ್ತಿದ್ದಾಗ ಪೊಲೀಸರು ಆತನನ್ನು ತಡೆದು ಹೆಸರು ಕೇಳಿದ್ದರು.
ಆ ಸಂದರ್ಭದಲ್ಲಿ ಆತನ ಬಳಿ ಇದ್ದ ಪಾಸ್‌ಪೋರ್ಟ್‌ನಲ್ಲಿ ಮೋಹನ್ ಕುಮಾರ್ ಎಂದು ನಮೂದಿಸಲಾಗಿತ್ತು. ಆದರೆ ವಿಚಾರಣೆಯ ವೇಳೆ ತಾನೇ ಅಸಲಿ ರಾಜೇಂದ್ರ ನಿಕಲ್ಜೆ ಎಂದು ಬಾಯಿಬಿಟ್ಟಿದ್ದ. ಭಾರತ ಸರ್ಕಾರದ ಕೋರಿಕೆಯ ಮೇರೆಗೆ ರೆಡ್ ಕಾರ್ನರ್ ನೋಟಿಸ್ ಜಾರಿಯಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪೊಲೀಸರ ಸುಳಿವಿನ ಮೇರೆಗೆ ಬಾಲಿ ಪೊಲೀಸರು ಈ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದರು, (ಏಜನ್ಸೀಸ್).