ಪಂಜಾಬ್​ ಕೈ ಪಾಳಯದಲ್ಲಿ ಮತ್ತೆ ಬಂಡಾಯದ ಬೇಗುದಿ!...ರಾಜೀನಾಮೆಗೆ ಮುಂದಾದ ಚರಣ್​​ಜಿತ್ ಸಿಂಗ್ ಚನ್ನಿ ಬೆಂಬಲಿಗರು | Charanjit Singh Channi

Charanjit Singh Channi > ರಾಜೀನಾಮೆಗೆ ಮುಂದಾದ ಚರಣ್​​ಜಿತ್ ಸಿಂಗ್ ಚನ್ನಿ ಬೆಂಬಲಿಗರು (ಸಂಗ್ರಹ ಚಿತ್ರ)
Charanjit Singh Channi > ರಾಜೀನಾಮೆಗೆ ಮುಂದಾದ ಚರಣ್​​ಜಿತ್ ಸಿಂಗ್ ಚನ್ನಿ ಬೆಂಬಲಿಗರು (ಸಂಗ್ರಹ ಚಿತ್ರ)
Published on
ಚಂಡೀಗಢ: ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಸನ್ನದ್ಧವಾಗುತ್ತಿರುವ ಬೆನ್ನಲ್ಲೇ, ಅಲ್ಲಿನ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಭಾರಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷದ ಇತ್ತೀಚಿನ ಪುನಾರಚನೆಯಿಂದ ತೀವ್ರ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ (Charanjit Singh Channi), ಹೈಕಮಾಂಡ್ ಮೇಲೆ ಒತ್ತಡ ಹೇರಲು ದೆಹಲಿಯತ್ತ ಮುಖ ಮಾಡಿದ್ದಾರೆ ಎಂದು ವರದಿಯಾಗಿದೆ.
ಚನ್ನಿ ನಿವಾಸದಲ್ಲಿ ನಡೆದ ಹಠಾತ್​ ಸಭೆಯಲ್ಲಿ ಹಲವು ಹಿರಿಯ ನಾಯಕರು, ತಮ್ಮ ಶಕ್ತಿ ಪ್ರದರ್ಶಿಸಲು ಮತ್ತು ಕಾಂಗ್ರೆಸ್ ನಾಯಕತ್ವಕ್ಕೆ ಬಿಸಿ ಮುಟ್ಟಿಸಲು ಪಕ್ಷದ ಹುದ್ದೆಗಳಿಗೆ ಸರಣಿ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚರಣ್​​ಜಿತ್ ಸಿಂಗ್ ಚನ್ನಿ ಮುನಿಸಿಗೆ ಅಸಲಿ ಕಾರಣವೇನು..?

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದ ಜಲಂಧರ್ ಸಂಸದ ಚರಣ್​​ಜಿತ್ ಸಿಂಗ್ ಚನ್ನಿ ಅವರಿಗೆ ಹೈಕಮಾಂಡ್ ಶಾಕ್ ನೀಡಿದೆ. ಹಳೆಯ ನಾಯಕತ್ವವನ್ನೇ ಮುಂದುವರಿಸಿರುವ ಕಾಂಗ್ರೆಸ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್​ರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಹಾಗೂ ಪ್ರತಾಪ್ ಸಿಂಗ್ ಬಾಜ್ವಾರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮುಂದುವರೆಸಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷೆಯಲಿದ್ದ ಚನ್ನಿಯನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿರ್ಧಾರದಿಂದ ಸಿಟ್ಟಾಗಿರುವ ಚನ್ನಿ ನಿನ್ನೆಯಿಂದ (ಗುರುವಾರ) ಯಾರ ಸಂಪರ್ಕಕ್ಕೂ ಸಿಗದೆ, ಇಂದು ತಮ್ಮ ಬೆಂಬಲಿಗರ ಮಹತ್ವದ ಸಭೆ ಕರೆದಿರುವುದು ಭಾರಿ ಸಂಚಲನ ಮೂಡಿಸಿದೆ.

ಮನೀಶ್ ತಿವಾರಿ ಟ್ವೀಟ್ ಬಾಂಬ್!

ಪಕ್ಷದ ಪುನಾರಚನೆಯಲ್ಲಿ ತಮಗೂ ಯಾವುದೇ ಪ್ರಮುಖ ಜವಾಬ್ದಾರಿ ಸಿಗದಿದ್ದಕ್ಕೆ ಮತ್ತೊಬ್ಬ ಹಿರಿಯ ನಾಯಕ ಮನೀಶ್ ತಿವಾರಿ ಎಕ್ಸ್​ ಖಾತೆಯಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ವ್ಯಕ್ತಿಗಳ ಮತ್ತು ಸಂಸ್ಥೆಗಳ ಒಳಗಿರುವ ಅಸುರಕ್ಷತಾ ಭಾವನೆಗೆ ನನ್ನ ಬಳಿ ಯಾವುದಾದರೂ ಮದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬರೆಯುವ ಮೂಲಕ ಪಕ್ಷದೊಳಗಿನ ಆಂತರಿಕ ಕಿತ್ತಾಟ ಮತ್ತು ನಾಯಕರ ದೌರ್ಬಲ್ಯವನ್ನು ಮಾರ್ಮಿಕವಾಗಿ ಅಣಕಿಸಿದ್ದಾರೆ. ಇದರ ಮರುದಿನವೇ ಚನ್ನಿ ಬಣ ಬಂಡಾಯದ ಬಾವುಟ ಹಾರಿಸಿದೆ.
ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಪಂಜಾಬ್ ಕೈ ಪಾಳಯದಲ್ಲಿ ಉಂಟಾಗಿರುವ ಈ ಬಿರುಕು ಮುಂಬರುವ ದಿನಗಳಲ್ಲಿ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net