ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಕೆ. ಇಳಂತಿರೈಯನ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದರು. ಈ ವೇಳೆ ಮಹತ್ವದ ಉಲ್ಲೇಖ ಮಾಡಿದ ನ್ಯಾಯಾಲಯ, 1967 ರಿಂದಲೂ ತಮಿಳುನಾಡು ರಾಜ್ಯವನ್ನು ಚಿತ್ರರಂಗದ ಹಿನ್ನೆಲೆಯುಳ್ಳ ನಾಯಕರೇ ಆಳುತ್ತಿದ್ದಾರೆ ಎಂದು ನೆನಪಿಸಿದ್ದಲ್ಲದೆ, ಸಾರ್ವಜನಿಕ ಸಭೆಯಲ್ಲಿ ರಾಧಾಕೃಷ್ಣನ್ ಮಾಡಿದ ಭಾಷಣದ ಶೈಲಿಯನ್ನು ಪ್ರಶ್ನಿಸಿದೆ. ತಿರುಚೆಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಧಾಕೃಷ್ಣನ್, ಆತೂರ್ ಟೌನ್ ಪಂಚಾಯಿತಿಯಲ್ಲಿ ನಡೆಯುತ್ತಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದರು. ಹೊಸ ಕಚೇರಿ ಕಟ್ಟಡದ ಪರಿಶೀಲನೆ ಮುಗಿಸಿ ಹೊರಬರುತ್ತಿದ್ದಂತೆ ಪೊಲೀಸರು, ಅವರನ್ನು ವಶಕ್ಕೆ ಪಡೆದರು. ಬಳಿಕ ಮುಂದಿನ ವಿಚಾರಣೆಗಾಗಿ ತೂತುಕುಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.