ನೀಟ್​​ ಪ್ರಶ್ನೆಪತ್ರಿಕೆ ಸೋರಿಕೆ ಘೋರ ಪಾಪ ಎಂದ ಪ್ರಧಾನಿ ಮೋದಿ: ಸಂಸತ್ತಿನಲ್ಲಿ ಚರ್ಚೆಗೆ ಕೇಂದ್ರ ಸರ್ಕಾರ ರೆಡಿ..! NEET

ನೀಟ್​​ ಪ್ರಶ್ನೆಪತ್ರಿಕೆ ಸೋರಿಕೆ ಘೋರ ಪಾಪ ಎಂದ ಪ್ರಧಾನಿ ಮೋದಿ: ಸಂಸತ್ತಿನಲ್ಲಿ ಚರ್ಚೆಗೆ ಕೇಂದ್ರ ಸರ್ಕಾರ ರೆಡಿ..! NEET
ನೀಟ್​​ ಪ್ರಶ್ನೆಪತ್ರಿಕೆ ಸೋರಿಕೆ ಘೋರ ಪಾಪ ಎಂದ ಪ್ರಧಾನಿ ಮೋದಿ: ಸಂಸತ್ತಿನಲ್ಲಿ ಚರ್ಚೆಗೆ ಕೇಂದ್ರ ಸರ್ಕಾರ ರೆಡಿ..! NEET
Published on

ಪ್ರಮುಖ ಮುಖ್ಯಾಂಶಗಳು

  • NEET ಅಕ್ರಮಕ್ಕೆ ಪ್ರಧಾನಿ ಮೋದಿ ಆಕ್ರೋಶ ಘೋರ ಪಾಪ ಎಂದ ಪ್ರಧಾನಿ ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಸಿದ್ಧ
  • ನೀಟ್ ಪರೀಕ್ಷೆ ಗೊಂದಲಕ್ಕೆ ಸಂಸತ್ತಿನಲ್ಲಿ ಸಿಗುತ್ತಾ ತೆರೆ ಚರ್ಚೆಗೆ ಸಿದ್ಧ ಎಂದ ಕೇಂದ್ರ ಸರ್ಕಾರ
  • ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೇಡಿಕೆ ರಾಜಕೀಯ ಪ್ರೇರಿತ ಎಂದ ಕೇಂದ್ರ ಸರ್ಕಾರಿ ಮೂಲಗಳು
  • ವಿಪಕ್ಷಗಳ ರಾಜೀನಾಮೆ ಒತ್ತಾಯಕ್ಕೆ ಕ್ಯಾರೇ ಎನ್ನದ ಕೇಂದ್ರ ಸಂಸತ್ತಿನಲ್ಲಿ ನೀಟ್ ಅಕ್ರಮದ ಬಗ್ಗೆ ಚರ್ಚೆಗೆ ಮುಂದು
ನವದೆಹಲಿ: ಒಂದೆಡೆ ನೀಟ್ ( NEET ) ಪರೀಕ್ಷೆಯ ಅಕ್ರಮ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ತೀವ್ರಗೊಳಿಸಿದ್ದರೆ, ಇತ್ತ ಕೇಂದ್ರ ಸರ್ಕಾರ ಇದಕ್ಕೆ ಪ್ರತ್ಯುತ್ತರ ನೀಡಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಯಾವುದೇ ರಾಜಿಯಿಲ್ಲ, ಪ್ರಕರಣ ಬಯಲಿಗೆ ಬಂದ ತಕ್ಷಣವೇ ನಾವು ಸಂಬಂಧಪಟ್ಟವರನ್ನು ಬಂಧನ ಮಾಡಿ, ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಸರ್ಕಾರದ ಮೂಲಗಳು ತಿರುಗೇಟು ನೀಡಿವೆ.
ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ವಿಷಯ ಹೊರಬರುತ್ತಿದ್ದಂತೆಯೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಘಟನೆಯ ನೈತಿಕ ಹೊಣೆ ಹೊರಲು ಹಿಂಜರಿಯದೆ, ಪರಿಸ್ಥಿತಿಯನ್ನು ಸರಿಪಡಿಸಲು ತಕ್ಷಣವೇ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡರು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸುವುದು, ಎನ್‌ಟಿಎ (NTA) ಉನ್ನತ ಮಟ್ಟದ ನಾಯಕತ್ವದಲ್ಲಿ ಬದಲಾವಣೆ ಮಾಡುವುದು ಹಾಗೂ ಪ್ರಕರಣದ ಆಳವಾದ ತನಿಖೆಗಾಗಿ ಸಿಬಿಐಗೆ ಒಪ್ಪಿಸುವಂತಹ ದಿಟ್ಟ ಹೆಜ್ಜೆಗಳನ್ನು ಇಡುವ ಮೂಲಕ ಸರ್ಕಾರವು ವಿದ್ಯಾರ್ಥಿಗಳ ಹಿತರಕ್ಷಣೆಗೆ ಸಕ್ರಿಯವಾಗಿ ಮತ್ತು ಬದ್ಧತೆಯಿಂದ ಸ್ಪಂದಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ವಿಪಕ್ಷ ನಾಯಕರು ಸಲ್ಲಿಸಿರುವ ಪ್ರಮುಖ ಬೇಡಿಕೆಯನ್ನು "ರಾಜಕೀಯ ಪ್ರೇರಿತ" ಎಂದು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಸರ್ಕಾರವು ಸಮಗ್ರ ತನಿಖೆಗಾಗಿ ಸಿಬಿಐಗೆ ಒಪ್ಪಿಸಿದ್ದು, ಈವರೆಗೆ 13ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿರುವ ಸರ್ಕಾರದ ಮೂಲಗಳು, ವಿಪಕ್ಷಗಳ ರಾಜೀನಾಮೆ ಒತ್ತಾಯಕ್ಕೆ ಕ್ಯಾರೇ ಎಂದಿಲ್ಲ.
ಈ ಪ್ರಕರಣ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು, ಪ್ರಶ್ನೆಪತ್ರಿಕೆ ಸೋರಿಕೆಯನ್ನು ಘೋರ ಪಾಪ ಎಂದು ಕರೆದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ದೇಶದಾದ್ಯಂತ ಹಾಗೂ ದೆಹಲಿಯ ಹೃದಯಭಾಗದಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ನಂತರ ಮೊದಲ ಬಾರಿಗೆ ಈ ವಿಷಯವಾಗಿ ಧ್ವನಿ ಎತ್ತಿದ ಪ್ರಧಾನಿಯವರು, ಯುವಜನರ ಭವಿಷ್ಯದ ಜೊತೆ ಯಾರೂ ಆಟವಾಡಲು ಸಾಧ್ಯವಾಗದಂತೆ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಈಗಾಗಲೇ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಈ ಸೂಕ್ಷ್ಮ ವಿಷಯವು "ಯಾವುದೇ ಪಕ್ಷದ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಎದುರಿಸಲು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಜೊತೆಗೆ, ಎನ್‌ಡಿಎ (NDA) ಸಂಸದರು ಯುವಜನರ ವಿಶ್ವಾಸವನ್ನು ಗೆಲ್ಲಬೇಕು ಮತ್ತು ಸದಾ ಜನರೊಂದಿಗೆ ಆತ್ಮೀಯತೆ ಹಾಗೂ ಪ್ರೀತಿಯಿಂದ ನಿಕಟ ಸಂಪರ್ಕದಲ್ಲಿರಬೇಕು ಎಂದು ಕಿವಿಮಾತು ಹೇಳಿದರು. ಅಲ್ಲದೆ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದು ಸ್ಪಷ್ಟಪಡಿಸಿರುವ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳನ್ನು ಹಾದಿತಪ್ಪಿಸುವುದು ಸುಲಭ, ಆದರೆ ಅವರಿಗೆ ಸರಿಯಾದ ದಾರಿ ತೋರಿಸುವುದು ಕಷ್ಟ ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತ, ನೀಟ್‌ ಪರೀಕ್ಷಾ ಅಕ್ರಮದ ವಿಚಾರವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯವನ್ನು ಶೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ವಿಪಕ್ಷಗಳ ಬೇಡಿಕೆಯಂತೆ ಸಂಸತ್ತಿನಲ್ಲಿ ನೀಟ್ ವಿಷಯದ ಕುರಿತು ಸುದೀರ್ಘ ಹಾಗೂ ವಿವರವಾದ ಚರ್ಚೆಗೆ ತಾವು ಸಂಪೂರ್ಣ ಸಿದ್ಧವೆಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಪ್ರಧಾನಮಂತ್ರಿಯವರ ಅಧಿಕೃತ ನಿವಾಸದ ಹೊರಗೆ ಧರಣಿ ನಡೆಸುತ್ತಿದ್ದಾಗ ದೆಹಲಿ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ಜೊತೆಗೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸೋಮವಾರ ನಡೆದ ಪೋಲಿಸ್‌ ಕ್ರಮದ ಕುರಿತು ಪ್ರಧಾನಿಯವರು ದೇಶದ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಈ ಪ್ರತಿಭಟನೆಯ ಕೇಂದ್ರಬಿಂದುವಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಬರೆದುಕೊಂಡಿರುವ ಸಚಿವರು, ಸಂಸತ್ತಿನಲ್ಲಿ ಸಮಗ್ರ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ ಮೇಲೆಯೂ, ಕಾಂಗ್ರೆಸ್ ಪ್ರಜಾಸತ್ತಾತ್ಮಕ ಚರ್ಚೆಯನ್ನು ಬಿಟ್ಟು ರಾಜಕೀಯ ನಾಟಕವಾಡಲು ಆಯ್ಕೆ ಮಾಡಿಕೊಂಡಿದೆ. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅವರ ಉದ್ದೇಶವಾಗಿರಲಿಲ್ಲ, ಬದಲಿಗೆ ರಾಜಕೀಯ ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳಲು ಗೊಂದಲ ಸೃಷ್ಟಿಸುವುದಷ್ಟೇ ಅವರ ಗುರಿಯಾಗಿತ್ತು ಎಂದು ತೀಕ್ಷ್ಣವಾಗಿ ಹರಿಹಾಯ್ದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net