ಒಂದು ಶರಣಾಗು ಇಲ್ಲವೇ...ಕಿರಾತಕಿ ಸೋನಮ್ ರಘುವಂಶಿಗೆ​ ಎರಡು ಆಯ್ಕೆ ನೀಡಿದ ಸುಪ್ರೀಂ ಕೋರ್ಟ್​! Meghalaya Honeymoon Murder Case

ಒಂದು ಶರಣಾಗು ಇಲ್ಲವೇ...ಕಿರಾತಕಿ ಸೋನಮ್ ರಘುವಂಶಿಗೆ​ ಎರಡು ಆಯ್ಕೆ ನೀಡಿದ ಸುಪ್ರೀಂ ಕೋರ್ಟ್​! Meghalaya Honeymoon Murder Case
ಒಂದು ಶರಣಾಗು ಇಲ್ಲವೇ...ಕಿರಾತಕಿ ಸೋನಮ್ ರಘುವಂಶಿಗೆ​ ಎರಡು ಆಯ್ಕೆ ನೀಡಿದ ಸುಪ್ರೀಂ ಕೋರ್ಟ್​! Meghalaya Honeymoon Murder Case
Published on

ಪ್ರಮುಖ ಮುಖ್ಯಾಂಶಗಳು

  • ಹನಿಮೂನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ
  • ಪೊಲೀಸರಿಗೆ ಶರಣಾಗಿ ಇಲ್ಲವೇ ಪಡೆದಿರುವ ಜಾಮೀನು ರದ್ದು ಮಾಡಿಕೊಳ್ಳಿ ಸೋನಮ್ಗೆ ಸುಪ್ರೀಂ ಕೋರ್ಟ್ ನೀಡಿತು ಎರಡು ಆಯ್ಕೆ
  • ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಎಒನ್ ಆರೋಪಿ ಸೋನಮ್ಗೆ ಜುಲೈ ಇಪ್ಪತ್ಮೂರರ ಗಡುವು
  • ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ಶರಣಾಗಲು ಸುಪ್ರೀಂ ಕೋರ್ಟ್ ಸೂಚನೆ
ನವದೆಹಲಿ: ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣದ ( Meghalaya Honeymoon Murder Case ) ಪ್ರಮುಖ ಆರೋಪಿ ಸೋನಮ್​ ರಘುವಂಶಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ತಕ್ಷಣವೇ ಪೊಲೀಸರಿಗೆ ಶರಣಾಗುವುದು ಅಥವಾ ಪಡೆದಿರುವ ಜಾಮೀನನ್ನು ರದ್ದುಗೊಳಿಸಿಕೊಳ್ಳುವುದು ಎಂಬ ಎರಡು ಆಯ್ಕೆಗಳನ್ನು ನೀಡಿದ್ದು, ಈ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಆರೋಪಿ ಪರ ವಕೀಲರಿಗೆ ಸೂಚಿಸಿದೆ.
2025ರಲ್ಲಿ ಮೇಘಾಲಯಕ್ಕೆ ಹನಿಮೂನ್​ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಸಪಾರಿ ಗ್ಯಾಂಗ್​ ಜೊತೆ ಸೇರಿಕೊಂಡು ತನ್ನ ಗಂಡ ರಾಜಾ ರಘುವಂಶಿಯನ್ನು ಕೊಲೆ ಮಾಡಿದ ಗಂಭೀರ ಆರೋಪ ಸೋನಮ್​ ರಘುವಂಶಿ ಮೇಲಿದೆ. ಈ ಪ್ರಕರಣದಲ್ಲಿ ಸೋನಮ್​ ಎ1 ಆರೋಪಿಯಾಗಿದ್ದಾರೆ.
ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಕೈಗೆತ್ತಿಕೊಂಡಿತು. ಈ ವೇಳೆ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿ ಸೋನಮ್​ ಸ್ವಯಂ ಪ್ರೇರಿತವಾಗಿ ಶರಣಾಗುವುದು ಸೂಕ್ತ ಎಂಬ ಸಲಹೆಯನ್ನು ನ್ಯಾಯಪೀಠ ನೀಡಿದ್ದು, ಸಾಕ್ಷ್ಯ ವಿಚಾರಣೆಯ ಬಳಿಕ ಜಾಮೀನು ಅರ್ಜಿಯನ್ನು ಮರುಪರಿಶೀಲಿಸುವುದಾಗಿ ತಿಳಿಸಿದೆ.
ವಿಚಾರಣೆ ವೇಳೆ ಪೀಠವು, "ನಿಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದೋ ನಾವು ಪ್ರಕರಣದ ಅರ್ಹತೆಯ ಆಧಾರದ ಮೇಲೆ ತೀರ್ಪು ಪ್ರಕಟಿಸುತ್ತೇವೆ, ಇಲ್ಲವೇ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ನೀವು ಶರಣಾಗುವಂತೆ ಆದೇಶಿಸಿ, ನಂತರ ಅರ್ಜಿಯನ್ನು ಪರಿಶೀಲಿಸುತ್ತೇವೆ. ಎರಡನೇ ಆಯ್ಕೆಯು ನಿಮಗೆ ಹೆಚ್ಚು ಅನುಕೂಲಕರವಾಗಬಹುದು, ಆದ್ದರಿಂದ ನಿಮ್ಮ ಕಕ್ಷಿದಾರರಿಂದ ಸೂಕ್ತ ಸಲಹೆ ಪಡೆದು ತಿಳಿಸಿ ಎಂದು ನ್ಯಾಯಾಲು ಸ್ಪಷ್ಟಪಡಿಸಿದೆ. ಒಂದು ವೇಳೆ ಆರೋಪಿ ಶರಣಾಗಲು ಒಪ್ಪಿದರೆ, ವಿಚಾರಣಾ ನ್ಯಾಯಾಲಯಕ್ಕೆ ಸಾಕ್ಷಿಗಳ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸಲು ನಿರ್ದೇಶನ ನೀಡುವುದಾಗಿಯೂ ನ್ಯಾಯಾಲಯ ಸೂಚಿಸಿದೆ.
ನ್ಯಾಯಾಲಯವು ತನ್ನ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಾ, ನಾವು ಎರಡೂ ಪಕ್ಷಗಳಿಗೆ ನ್ಯಾಯ ಒದಗಿಸಲು ಬಯಸುತ್ತೇವೆ. ನೀವು ಎರಡನೇ ಆಯ್ಕೆಯನ್ನು ಆಯ್ದುಕೊಂಡರೆ, ಸಾರ್ವಜನಿಕ ಸಾಕ್ಷಿಗಳ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿ ನಂತರ ನಿಮ್ಮ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಳ್ಳುತ್ತೇವೆ. ಇಲ್ಲವಾದಲ್ಲಿ ಅರ್ಹತೆಯ ಆಧಾರದ ಮೇಲೆ ವಿಚಾರಣೆ ನಡೆಸಲಿದ್ದೇವೆ ಎಂದು ತಿಳಿಸಿತು. ಅಲ್ಲದೆ ಈ ಕುರಿತು ಹೆಚ್ಚಿನ ವಾದದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠವು, ಸೂಕ್ತ ನಿರ್ಧಾರ ತಳೆದು ಜುಲೈ 23ರ ಗುರುವಾರದೊಳಗೆ ಕೋರ್ಟ್‌ಗೆ ತಿಳಿಸುವಂತೆ ಸೋನಮ್​ ಪರ ವಕೀಲರಿಗೆ ಸೂಚನೆ ನೀಡಿತು.
ಇದೇ ವೇಳೆ, ಬಂಧನದ ಸರಿಯಾದ ಕಾರಣಗಳನ್ನು ತಿಳಿಸಿಲ್ಲ ಎಂಬ ವಾದವನ್ನು ಆರಂಭಿಕ ಹಂತದಲ್ಲೇ ಏಕೆ ಎತ್ತಲಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಬಂಧನದ ದಾಖಲೆಗಳಲ್ಲಿ ಕಂಡುಬಂದ ಸಣ್ಣ ಲಿಪಿಕ ದೋಷವು ಕೆಳ ನ್ಯಾಯಾಲಯಗಳು ನೀಡಿದ ಜಾಮೀನು ಆದೇಶವನ್ನು ಸಮರ್ಥಿಸಲು ಸಾಕೆ ಎಂಬ ಸಂಶಯ ವ್ಯಕ್ತಪಡಿಸಿದ ಪೀಠವು, ಕೊಲೆಗೆ ಸಂಬಂಧಿಸಿದ ನಿಯಮದ ಬದಲಾಗಿ ಬೇರೊಂದು ವಿಭಾಗವನ್ನು ಉಲ್ಲೇಖಿಸಿದ್ದು ಪ್ರಸ್ತುತ ಹಂತದಲ್ಲಿ ಪ್ರಕರಣದ ಮೇಲೆ ಹೇಗೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಪ್ರಶ್ನಿಸಿತು.
ಈ ಮೊದಲು ಶಿಲಾಂಗ್ ನ್ಯಾಯಾಲಯವು, ತನಿಖಾ ಸಂಸ್ಥೆಯು ಸೋನಮ್​ಗೆ ಅವರ ಬಂಧನದ ಆಧಾರಗಳನ್ನು ಸರಿಯಾಗಿ ತಿಳಿಸಲು ವಿಫಲವಾಗಿದೆ ಎಂದು ಗಮನಿಸಿ ಜಾಮೀನು ಮಂಜೂರು ಮಾಡಿತ್ತು. ಬಂಧನದ ಮೆಮೊ ಮತ್ತು ಕೇಸ್ ಡೈರಿ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಬಿಎನ್‌ಎಸ್ ಸೆಕ್ಷನ್ 103(1) ಬದಲಿಗೆ ಸೆಕ್ಷನ್ 403(1) ಎಂದು ತಪ್ಪಾಗಿ ನಮೂದಿಸಲಾಗಿತ್ತು. ಇದನ್ನು ಕೇವಲ ಬೆರಳಚ್ಚು ದೋಷ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೆಳ ನ್ಯಾಯಾಲಯ ಹೇಳಿತ್ತು.
ಮೇಘಾಲಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸೋನಮ್ ರಘುವಂಶಿಗೆ ತಮ್ಮ ಬಂಧನದ ಕಾರಣಗಳು ಸ್ಪಷ್ಟವಾಗಿ ತಿಳಿದಿದ್ದವು ಹಾಗೂ ಸೆಕ್ಷನ್ ನಮೂದಿಸುವಲ್ಲಿ ಆದ ದೋಷವು ಕೇವಲ ಮುದ್ರಣ ದೋಷವಾಗಿದೆಯೇ ಹೊರತು ಬಂಧನದ ಆಧಾರಗಳನ್ನು ಮುಚ್ಚಿಟ್ಟಂತೆ ಅಲ್ಲ ಎಂದು ವಾದಿಸಿದರು. ಇತರ ಸಹ ಆರೋಪಿಗಳನ್ನು ಪೊಲೀಸರು ಬಂಧಿಸಿದ ನಂತರವಷ್ಟೇ ಸೋನಮ್​ ಶರಣಾಗಿದ್ದರು ಎಂಬ ವಿಷಯವನ್ನು ಪ್ರಸ್ತಾಪಿಸಿದ ಅವರು, ಈ ತಾಂತ್ರಿಕ ವಿಷಯವನ್ನು ತಡವಾಗಿ ಎತ್ತಲಾಗಿದ್ದು ಇದು ಜಾಮೀನು ನೀಡಲು ಅರ್ಹವಲ್ಲ ಎಂದು ಹೇಳಿದರು.
ಆರೋಪಿ ಸೋನಮ್​ ಪರ ವಕೀಲರು, ಪ್ರಾಸಿಕ್ಯೂಷನ್ ಪ್ರಕರಣವು ಕೇವಲ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿದೆ ಮತ್ತು ಈ ಪ್ರಕರಣಕ್ಕೆ ಮಾಧ್ಯಮಗಳಲ್ಲಿ ಅನಗತ್ಯ ಪ್ರಚಾರ ಸಿಕ್ಕಿದೆ ಎಂದು ವಾದಿಸಿದರು.

ನಾನು ಅಮಾಯಕಿ ಎಂದು ಸೋನಮ್​

ಮೇಘಾಲಯ ಹೈಕೋರ್ಟ್ ತಮಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದ್ದ ಸೋನಮ್, ಈ ಕುರಿತು ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ್ದಳು. ಕೇವಲ ಅನುಮಾನ ಹಾಗೂ ಸನ್ನಿವೇಶಗಳ ಆಧಾರದ ಮೇಲೆ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ನಡೆಸುತ್ತಿದ್ದು, ಬರಿ ಆರೋಪಗಳನ್ನೇ ಅಪರಾಧಕ್ಕೆ ಸಾಕ್ಷಿ ಎಂದು ಪರಿಗಣಿಸಲು ಸಾಧ್ಯವಿಲ್ಲ, ತಾನು ನಿರಪರಾಧಿಯಾಗಿದ್ದು, ಈ ಕೇಸ್‌ನಲ್ಲಿ ತನ್ನನ್ನು ಸುಳ್ಳಾಗಿ ಸಿಲುಕಿಸಲಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ತಿಳಿಸಿದ್ದಳು. ಆದರೆ, ಈಗ ಸುಪ್ರಿಂ ಕೋರ್ಟ್ ಸೋನಮ್​ಗೆ ಶರಣಾಗುವಂತೆ ಸೂಚನೆ ನೀಡಿದೆ. ​

ಕೊಲೆ ಪ್ರಕರಣದ ಹಿನ್ನೆಲೆ ಏನು?

ಮಧ್ಯಪ್ರದೇಶದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರು ಮೇ 2025ರಲ್ಲಿ ತಮ್ಮ ಪತ್ನಿ ಸೋನಮ್ ಜೊತೆ ಮೇಘಾಲಯಕ್ಕೆ ಹನಿಮೂನ್ ಪ್ರವಾಸ ಕೈಗೊಂಡಿದ್ದರು. ಆದರೆ, ನಾಂಗ್ರಿಯಾಟ್‌ನಲ್ಲಿನ ಹೋಮ್‌ಸ್ಟೇಯೊಂದರಿಂದ ಚೆಕ್-ಔಟ್ ಆದ ಬಳಿಕ ಈ ದಂಪತಿ ದಿಢೀರ್ ನಾಪತ್ತೆಯಾಗಿದ್ದರು. ತದನಂತರ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸೋಹ್ರಾದ 'ವೈಸಾವ್‌ಡಾಂಗ್ ಜಲಪಾತ'ದ ಬಳಿಯ ಕಣಿವೆಯೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹಾ ಹಾಗೂ ಇತರ ಕೆಲವು ಸಹಚರರೊಂದಿಗೆ ಸೇರಿ, ಪತಿಯನ್ನು ಕೊಲೆ ಮಾಡಲು ಮುಂಚಿತವಾಗಿಯೇ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು ಎಂದು ಮೇಘಾಲಯ ಪೊಲೀಸರು ಗಂಭೀರ ಆರೋಪ ಹೊರಿಸಿದ್ದಾರೆ. ಈಗಾಗಲೇ ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ನ್ಯಾಯಾಲಯಕ್ಕೆ 700ಕ್ಕೂ ಹೆಚ್ಚು ಪುಟಗಳ ಬೃಹತ್ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆ ಮಾಡಿದ್ದು, ಸದ್ಯ ಕೋರ್ಟ್‌ನಲ್ಲಿ ಸಾಕ್ಷಿಗಳ ವಿಚಾರಣೆಯೊಂದಿಗೆ ಪ್ರಕರಣದ ಸುದೀರ್ಘ ನ್ಯಾಯಾಂಗ ಪ್ರಕ್ರಿಯೆ ಚಾಲ್ತಿಯಲ್ಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net