ಶೇ. 5 ರಷ್ಟು ವಿಮಾನ ಕಡಿತಗೊಳಿಸಲು ಇಂಡಿಗೋಗೆ ಕೇಂದ್ರದ ಆದೇಶ: 115 ವಿಮಾನಗಳ ಹಾರಾಟಕ್ಕೆ ಬ್ರೇಕ್! IndiGo

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋಗೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ
  • ಶೇ.5 ರಷ್ಟು ಅಂದರೆ ಸುಮಾರು 115 ವಿಮಾನಗಳ ಹಾರಾಟ ಕಡಿತಗೊಳಿಸಲು ಸೂಚನೆ
  • ಇಂಡಿಗೋದ ಚಳಿಗಾಲದ ವೇಳಾಪಟ್ಟಿಯನ್ನು ಮೊಟಕುಗೊಳಿಸುತ್ತೇವೆಂದ ವಿಮಾನಯಾನ ಸಚಿವರು
ನವದೆಹಲಿ: ತಮ್ಮ ದೈನಂದಿನ ಹಾರಾಟದಲ್ಲಿ ಶೇ. 5ರಷ್ಟು ವಿಮಾನಗಳನ್ನು ಕಡಿತಗೊಳಿಸುವಂತೆ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ( IndiGo ) ಏರ್​ಲೈನ್ಸ್​ಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಶೇ.5 ರಷ್ಟು ಅಂದರೆ ಸುಮಾರು 115 ವಿಮಾನಗಳ ಹಾರಾಟ ಕಡಿತವಾಗಲಿದೆ.
ಇತ್ತೀಚೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಜಾರಿಗೆ ತಂದಿದ್ದ ಹೊಸ ನಿಯಮಗಳಿಂದ (ಈಗ ನಿಷೇಧಿಸಲಾಗಿದೆ) ಉಂಟಾದ ಸಿಬ್ಬಂದಿ ಕೊರತೆಯಿಂದ ಇತ್ತೀಚೆಗೆ ಇಂಡಿಗೋ ಏರ್​ಲೈನ್ಸ್​ ತೀವ್ರ ಬಿಕ್ಕಟ್ಟು ಎದುರಿಸಿದ್ದು ಗೊತ್ತೇ ಇದೆ. ವಿಮಾನಗಳನ್ನು ಹಾರಿಸಲು ಸಿಬ್ಬಂದಿ ಇಲ್ಲದೇ ಅನೇಕ ವಿಮಾನಗಳು ನಿಲ್ದಾಣಗಳಲ್ಲೇ ಬೀಡುಬಿಟ್ಟಿದ್ದವು. ಅನೇಕ ವಿಮಾನಗಳ ಹಾರಾಟವು ರದ್ದಾಯಿತು. ಇದರಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಿದರು. ಅಲ್ಲದೆ, ಇಂಡಿಗೋ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು. ಅಂತಿಮವಾಗಿ ಮಧ್ಯ ಪ್ರವೇಶ ಮಾಡಿದ ಕೇಂದ್ರ ಸರ್ಕಾರ, ಹೊಸ ನಿಯಮಗಳಿಗೆ ಕೊಕ್​ ನೀಡಿ, ಪರಿಸ್ಥಿತಿಯನ್ನು ಸುಧಾರಿಸಿತು. ಆದರೆ, ಇಂಡಿಗೋ ಏರ್​ಲೈನ್ಸ್​ನ ಬೇಜವಬ್ದಾರಿ ನಡೆಯಿಂದ ಸರ್ಕಾರ ಆಕ್ರೋಶಗೊಂಡು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ವಾರ್ನಿಂಗ್​ ನೀಡಿದೆ.
ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್​ ಮೋಹನ್​ ನಾಯ್ಡು ಮತ್ತೊಂದು ಎಚ್ಚರಿಕೆಯನ್ನು ಇಂಡಿಗೋ ಏರ್​ಲೈನ್ಸ್​ಗೆ ನೀಡಿದ್ದಾರೆ. ಅದೇನೆಂದರೆ,​ ಇಂಡಿಗೋ ಏರ್​ಲೈನ್ಸ್​ನ ಚಳಿಗಾಲದ ವಿಮಾನ ವೇಳಾಪಟ್ಟಿಯನ್ನು ಮೊಟಕುಗೊಳಿಸಿ, ಅದರ ಸ್ಲಾಟ್‌ಗಳನ್ನು ಇತರೆ ಆಪರೇಟರ್​ಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ. ನಾವು ಇಂಡಿಗೋದ ಮಾರ್ಗಗಳನ್ನು ಕಡಿತಗೊಳಿಸಲಿದ್ದೇವೆ. ಅವರು ಪ್ರಸ್ತುತ 2,200 ವಿಮಾನಗಳನ್ನು ನಿರ್ವಹಿಸುತ್ತಿದ್ದಾರೆ. ನಾವು ಖಂಡಿತವಾಗಿಯೂ ಅವುಗಳನ್ನು ಕಡಿತಗೊಳಿಸುತ್ತೇವೆ ಎಂದು ನಿನ್ನೆ ರಾತ್ರಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ನಾಯ್ಡು ಅವರು ಹೇಳಿದ್ದಾರೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇಂಡಿಗೋಗೆ ಶೇ. 5 ರಷ್ಟು ವಿಮಾನಗಳನ್ನು ಕಡಿಮೆ ಮಾಡಲು ಆದೇಶಿಸಿದೆ. ಇಂಡಿಗೋ ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುತ್ತದೆ. ಇದೀಗ ಸರ್ಕಾರದ ಆದೇಶದಿಂದ ಪ್ರತಿದಿನ ಸುಮಾರು 115 ವಿಮಾನಗಳನ್ನು ಕಡಿಮೆ ಮಾಡಲಾಗುತ್ತದೆ. ಇನ್ನು ಡಿಸೆಂಬರ್ 1 ರಿಂದ ಡಿಸೆಂಬರ್ 8 ರವರೆಗೆ ರದ್ದಾದ 7,30,655 ಪಿಎನ್‌ಆರ್‌ಗಳಿಗೆ 745 ಕೋಟಿ ರೂ. ಮರುಪಾವತಿಯನ್ನು ವಿಮಾನಯಾನ ಸಂಸ್ಥೆ ಪ್ರಕ್ರಿಯೆಗೊಳಿಸಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.
ನಿನ್ನೆ ರಾಜ್ಯಸಭೆಯಲ್ಲಿ ಇಂಡಿಗೋ ಬಿಕ್ಕಟ್ಟಿನ ವಿಚಾರವಾಗಿ ಮಾತನಾಡಿದ ನಾಯ್ಡು, ಪ್ರಯಾಣಿಕರ ಸುರಕ್ಷತಾ ನಿಯಮಗಳು ಹೊಸದಾಗಿ ಜಾರಿಗೆ ಬಂದ ನಂತರ ಇಂಡಿಗೋ ಆಂತರಿಕ ಬಿಕ್ಕಟ್ಟು ಎದುರಿಸಿತು. ಸಿಬ್ಬಂದಿಯ ಕೊರತೆಯ ಪರಿಣಾಮವಾಗಿ ಕಳೆದ ವಾರದಲ್ಲಿ ನೂರಾರು ವಿಮಾನಗಳು ರದ್ದಾಗಿವೆ ಎಂದರು. ಅಲ್ಲದೆ, ನಾವು ಪೈಲಟ್‌ಗಳು, ಸಿಬ್ಬಂದಿ ಮತ್ತು ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸುತ್ತೇವೆ. ಈ ವಿಚಾರದಲ್ಲಿ ನಾವು ಎಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ನಾವು ಸ್ಪಷ್ಟಪಡಿಸಿದ್ದೇವೆ ಎಂದು ನಾಯ್ಡು ಅವರು ಹೇಳಿದರು.
ಇಂಡಿಗೋ ಏರ್​ಲೈನ್ಸ್​ ತಮ್ಮ ಸಿಬ್ಬಂದಿ ಮತ್ತು ವೇಳಾಪಟ್ಟಿಯನ್ನು ಸರಿಯಾಗಿ ನಿರ್ವಹಿಸಬೇಕಾಗಿತ್ತು. ಇದನ್ನು ಮಾಡದೇ ಇದ್ದಿದ್ದರಿಂದ ಪ್ರಯಾಣಿಕರು ಬಹಳಷ್ಟು ತೊಂದರೆಗಳನ್ನು ಎದುರಿಸಿದರು. ನಾವು ಈ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸುತ್ತಿಲ್ಲ. ಬದಲಾಗಿ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ನಿಯಮ ಅನುಸರಣೆಯಲ್ಲಿ ಲೋಪ ಕಂಡುಬಂದರೆ, ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ನಾಯ್ಡು ಅವರು ಸದನಕ್ಕೆ ತಿಳಿಸಿದರು. ಇಂಡಿಗೋ ಬಿಕ್ಕಟ್ಟಿ ವಿಚಾರವಾಗಿ ಸರ್ಕಾರವು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ ಎಂದು ಇದೇ ವೇಳೆ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net