ಸಿಬಿಎಸ್​ಇ ತ್ರಿಭಾಷಾ ಸವಾಲು

ಸಿಬಿಎಸ್​ಇ ತ್ರಿಭಾಷಾ ಸವಾಲು
ಸಿಬಿಎಸ್​ಇ ತ್ರಿಭಾಷಾ ಸವಾಲು
Published on
ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್​ಇ) 2026-27ನೇ ಶೈಕ್ಷಣಿಕ ವರ್ಷ ಆರಂಭವಾದ ಬೆನ್ನಲ್ಲೇ ಒಂದು ಮಹತ್ವದ ಆದೇಶವನ್ನು ಹೊರಡಿಸಿದೆ. 2026ರ ಜುಲೈ 1ರಿಂದ ಜಾರಿಗೆ ಬರುವಂತೆ 9ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ (ಎನ್​ಇಪಿ) ಆಶಯದಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಶಾಲಾ ಹಂತದಲ್ಲಿ ಬಹುಭಾಷಾ ಸಂಸ್ಕೃತಿಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಮಹತ್ವದ ನಿರ್ಧಾರದ ಹಿನ್ನೆಲೆಯಲ್ಲಿ, ತ್ರಿಭಾಷಾ ಸೂತ್ರ ಎಂದರೇನು? ಅದರ ಇತಿಹಾಸವೇನು? ಇದರಿಂದ ಶೈಕ್ಷಣಿಕ ವಲಯದಲ್ಲಿ ಆಗಲಿರುವ ಬದಲಾವಣೆಗಳು ಮತ್ತು ಎದ್ದಿರುವ ವಿವಾದಗಳೇನು ಎಂಬಿತ್ಯಾದಿ ಅಂಶಗಳ ಸಮಗ್ರ ನೋಟ ಇಲ್ಲಿದೆ.
ಏನಿದು ತ್ರಿಭಾಷಾ ಸೂತ್ರ?
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸಿನ ಪ್ರಕಾರ, ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ಕಡ್ಡಾಯವಾಗಿ ಮೂರು ಭಾಷೆಗಳನ್ನು ಕಲಿಯಬೇಕು. ಈ ನಿಯಮದ ಅತ್ಯಂತ ಪ್ರಮುಖ ಅಂಶವೆಂದರೆ, ಕಲಿಯುವ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಜನ್ಮಜಾತ (ನೇಟಿವ್ ಟು ಇಂಡಿಯಾ) ಭಾಷೆಗಳಾಗಿರಬೇಕು. ಈ ಸೂತ್ರವು ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಆದಾಗ್ಯೂ, ಭಾಷೆಗಳ ಆಯ್ಕೆಯಲ್ಲಿ ರಾಜ್ಯ ಸರ್ಕಾರಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಯಾವುದೇ ಒಂದು ನಿರ್ದಿಷ್ಟ ಭಾಷೆಯನ್ನು ಬಲವಂತವಾಗಿ ಹೇರದೆ, ಪ್ರಾದೇಶಿಕ ಆಕಾಂಕ್ಷೆಗಳಿಗೆ ತಕ್ಕಂತೆ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ನಮ್ಯತೆಯನ್ನು (ಫ್ಲೆಕ್ಸಿಬಿಲಿಟಿ) ಈ ನೀತಿ ಒಳಗೊಂಡಿದೆ.
ಮೂಲ ಸೂತ್ರದ ಪ್ರಕಾರ ವಿದ್ಯಾರ್ಥಿಗಳು ಕಲಿಯಬೇಕಾದ ಮೂರು ಭಾಷೆಗಳು:
ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ
ಒಕ್ಕೂಟದ ಅಧಿಕೃತ ಭಾಷೆ (ಹಿಂದಿ ಅಥವಾ ಇಂಗ್ಲಿಷ್)
ಯಾವುದಾದರೂ ಒಂದು ಆಧುನಿಕ ಭಾರತೀಯ ಭಾಷೆ ಅಥವಾ ಯುರೋಪಿಯನ್ ಭಾಷೆ

ಐತಿಹಾಸಿಕ ಹಿನ್ನೆಲೆ

ಭಾರತದ ಶಿಕ್ಷಣ ಪದ್ಧತಿಯಲ್ಲಿ ತ್ರಿಭಾಷಾ ಸೂತ್ರ ಹೊಸ ಪರಿಕಲ್ಪನೆಯೇನಲ್ಲ. ಇದರ ಇತಿಹಾಸ ಹಲವು ದಶಕಗಳಷ್ಟು ಹಳೆಯದು.
ಕೊಠಾರಿ ಆಯೋಗ (1964-66): ಅಧಿಕೃತವಾಗಿ ಶಿಕ್ಷಣ ಆಯೋಗ ಎಂದು ಕರೆಯಲ್ಪಡುವ ಕೊಠಾರಿ ಆಯೋಗ ದೇಶದಲ್ಲಿ ಮೊದಲ ಬಾರಿಗೆ ತ್ರಿಭಾಷಾ ಸೂತ್ರವನ್ನು ಪ್ರಸ್ತಾಪಿಸಿತು.
ರಾಷ್ಟ್ರೀಯ ಶಿಕ್ಷಣ ನೀತಿ 1968: ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಈ ಸೂತ್ರವನ್ನು ಅಧಿಕೃತವಾಗಿ ದೇಶದ ಶಿಕ್ಷಣ ಕ್ಷೇತ್ರಕ್ಕೆ ಅಳವಡಿಸಲು ಮುಂದಾಯಿತು. ದೇಶದ ಸಮಗ್ರತೆ ಮತ್ತು ಭಾಷಾ ವೈವಿಧ್ಯವನ್ನು ಕಾಯ್ದುಕೊಳ್ಳುವುದು ಇದರ उद्देश ಎಂದು ಆಗಿನ ಅಧಿಕಾರಸ್ಥರು ಪ್ರತಿಪಾದಿಸಿದರು.
ನಂತರದ ಪರಿಷ್ಕರಣೆಗಳು: 1986ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಜಾರಿಗೆ ಬಂದ ಶಿಕ್ಷಣ ನೀತಿಯಲ್ಲೂ ಇದನ್ನು ಪುನರುಚ್ಚರಿಸಲಾಯಿತು. ತದನಂತರ 1992ರಲ್ಲಿ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ನೀತಿಯನ್ನು ಮತ್ತಷ್ಟು ಪರಿಷ್ಕರಿಸಿತು. ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು ಇದರ ಹಿಂದಿನ ಉದ್ದೇಶ ಎಂದು ಹೇಳಿತು.

ಪ್ರಮುಖ ಬದಲಾವಣೆ

ಸಾಂವಿಧಾನಿಕ ನಿಬಂಧನೆಗಳು, ಜನರ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಏಕತೆಯನ್ನು ಗಮನದಲ್ಲಿಟ್ಟುಕೊಂಡು ತ್ರಿಭಾಷಾ ಸೂತ್ರವನ್ನು ಶಾಲಾ ಹಂತದ ಆರಂಭದಿಂದಲೇ ಜಾರಿಗೆ ತರಲು ರಾಷ್ಟ್ರೀಯ ಶಿಕ್ಷಣ ನೀತಿ 2020 ಒತ್ತು ನೀಡಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಸಿಬಿಎಸ್ಇ ಮಾಡಿರುವ ವರ್ಗೀಕರಣ ಅತ್ಯಂತ ಮಹತ್ವದ ಹಾಗೂ ಚರ್ಚಾಸ್ಪದ ಬದಲಾವಣೆಯೊಂದನ್ನು ತಂದಿದೆ.

ಇಂಗ್ಲಿಷ್ ಈಗ ವಿದೇಶಿ ಭಾಷೆ!

ಹೊಸ ಪಠ್ಯಕ್ರಮದ ಚೌಕಟ್ಟಿನಲ್ಲಿ ಇಂಗ್ಲಿಷ್ ಭಾಷೆಯನ್ನು ವಿದೇಶಿ ಭಾಷೆ (ಫಾರಿನ್ ಲ್ಯಾಂಗ್ವೇಜ್) ಎಂದು ವರ್ಗೀಕರಿಸಲಾಗಿದೆ. ತ್ರಿಭಾಷಾ ಸೂತ್ರದ ನಿಯಮದ ಪ್ರಕಾರ ಮೂರರಲ್ಲಿ ಎರಡು ಭಾಷೆಗಳು ಭಾರತೀಯ ಮೂಲದವೇ ಆಗಿರಬೇಕು. ಉಳಿದ ಒಂದು ಭಾಷೆಯ ಸ್ಥಾನದಲ್ಲಿ ಮಾತ್ರ ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರರ್ಥ, ಒಬ್ಬ ವಿದ್ಯಾರ್ಥಿ ಇಂಗ್ಲಿಷ್ ಭಾಷೆಯನ್ನು ಆಯ್ದುಕೊಂಡರೆ, ಆತ ಮತ್ತೊಂದು ವಿದೇಶಿ ಭಾಷೆಯನ್ನು (ಉದಾಹರಣೆಗೆ ಫ್ರೆಂಚ್ ಅಥವಾ ಜರ್ಮನ್) ಎರಡನೇ ಅಥವಾ ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಉಳಿದೆರಡೂ ಭಾಷೆಗಳು ಕಡ್ಡಾಯವಾಗಿ ಭಾರತೀಯ ಭಾಷೆಗಳೇ (ಉದಾಹರಣೆಗೆ ಕನ್ನಡ, ಹಿಂದಿ, ಸಂಸ್ಕೃತ ಇತ್ಯಾದಿ) ಆಗಿರಬೇಕು.

ಲಭ್ಯವಿರುವ ವಿದೇಶಿ ಭಾಷೆಗಳು

ಮಾಧ್ಯಮಿಕ ಹಂತದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಹೊರತಾಗಿ ಕೊರಿಯನ್, ಜಪಾನೀಸ್, ಫ್ರೆಂಚ್, ಜರ್ಮನ್ ಮತ್ತು ಸ್ಪ್ಯಾನಿಷ್ ಸೇರಿದಂತೆ ವಿವಿಧ ಜಾಗತಿಕ ಭಾಷೆಗಳನ್ನು ಕಲಿಯಲು ಎನ್‌ಇಪಿ ಅವಕಾಶ ನೀಡುತ್ತದೆ. ಆದರೆ ಸಿಬಿಎಸ್ಇಯ ಹೊಸ ಮಿತಿಯಿಂದಾಗಿ ಇಂಗ್ಲಿಷ್ ಜತೆಗೆ ಇವುಗಳನ್ನು ಕಲಿಯುವ ಅವಕಾಶ ಸೀಮಿತಗೊಳ್ಳಲಿದೆ.

ಪ್ರಾಯೋಗಿಕ ಸವಾಲುಗಳು

ಜುಲೈ 1ರಿಂದಲೇ ಈ ನೀತಿ ಅನುಷ್ಠಾನಕ್ಕೆ ತರಲು ಸಿಬಿಎಸ್ಇ ಆದೇಶಿಸಿದೆಯಾದರೂ, ಶಾಲೆಗಳ ಮುಂದೆ ಕೆಲವು ಪ್ರಾಯೋಗಿಕ ಸವಾಲುಗಳಿವೆ.
ಪಠ್ಯಪುಸ್ತಕಗಳ ಅಲಭ್ಯತೆ: 9ನೇ ತರಗತಿಯ ಹೊಸ ಆರ್3 (ಪರಿಷ್ಕೃತ 3ನೇ ಭಾಷೆ) ಪಠ್ಯಪುಸ್ತಕಗಳು ಇನ್ನು ಸಿದ್ಧವಾಗಿಲ್ಲ. ಅಲ್ಲಿಯವರೆಗೆ ವಿದ್ಯಾರ್ಥಿಗಳು ಅದೇ ಭಾಷೆಯ 6ನೇ ತರಗತಿಯ ಆರ್3 ಪಠ್ಯಪುಸ್ತಕಗಳನ್ನು (2026-27ರ ಆವೃತ್ತಿ) ಬಳಸಬೇಕೆಂದು ಮಂಡಳಿ ಸೂಚಿಸಿದೆ.
ಶಿಕ್ಷಕರ ಕೊರತೆ: ಭಾರತೀಯ ಮೂಲದ ಪ್ರಾದೇಶಿಕ ಭಾಷೆಗಳನ್ನು ಕಲಿಸಲು ಅರ್ಹ ಶಿಕ್ಷಕರ ಕೊರತೆ ಎದುರಾದರೆ, ತಾತ್ಕಾಲಿಕ ವ್ಯವಸ್ಥೆಯಾಗಿ ಆಯಾ ಭಾಷೆಯಲ್ಲಿ ಕನಿಷ್ಠ ಕಾರ್ಯನಿರ್ವಹಣಾ ಪ್ರಾವೀಣ್ಯ (ಫಂಕ್ಷನಲ್ ಪ್ರೊಫೀಷಿಯೆನ್ಸಿ) ಹೊಂದಿರುವ ಇತರ ವಿಷಯಗಳ ಶಿಕ್ಷಕರನ್ನೇ ಬಳಸಿಕೊಳ್ಳಲು ಶಾಲೆಗಳಿಗೆ ಅನುಮತಿ ನೀಡಲಾಗಿದೆ.

ರಾಜಕೀಯ ವಿವಾದ

ಭಾರತದಲ್ಲಿ ತ್ರಿಭಾಷಾ ಸೂತ್ರದ ಅನುಷ್ಠಾನ ಮೊದಲಿನಿಂದಲೂ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ, ವಿಶೇಷವಾಗಿ ತಮಿಳುನಾಡಿನಲ್ಲಿ ಇದು ದೊಡ್ಡ ವಿವಾದ ಸೃಷ್ಟಿಸಿದೆ. 1937ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯದ ಮುಖ್ಯಸ್ಥರಾಗಿದ್ದ ಸಿ. ರಾಜಗೋಪಾಲಾಚಾರಿ ಅವರು ಶಾಲೆಗಳಲ್ಲಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿದಾಗ ಜಸ್ಟಿಸ್ ಪಾರ್ಟಿ ಮತ್ತು ಪೆರಿಯಾರ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ತದನಂತರ 1940ರಲ್ಲಿ ಈ ಆದೇಶವನ್ನು ಹಿಂಪಡೆಯಲಾಯಿತಾದರೂ, ಹಿಂದಿ ವಿರೋಧಿ ಭಾವನೆ ಮುಂದುವರಿಯಿತು.

ದ್ವಿಭಾಷಾ ನೀತಿ

1968ರಲ್ಲಿ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ತಂದಾಗ, ಇದನ್ನು ತಮಿಳು ಜನರ ಮೇಲೆ ಹಿಂದಿ ಹೇರಿಕೆ ಮಾಡುವ ಯತ್ನ ಎಂದು ತಮಿಳುನಾಡು ಕಠಿಣವಾಗಿ ವಿರೋಧಿಸಿತು. ಅಂದಿನ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ನೇತೃತ್ವದಲ್ಲಿ ತಮಿಳುನಾಡು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡಿತು. ಅಂದಿನಿಂದ ಇಂದಿನವರೆಗೂ ತಮಿಳುನಾಡಿನಲ್ಲಿ ಕೇವಲ ತಮಿಳು ಮತ್ತು ಇಂಗ್ಲಿಷ್ ಮಾತ್ರ ಬೋಧಿಸಲಾಗುತ್ತಿದೆ. ಭಾರತದಲ್ಲಿ ತ್ರಿಭಾಷಾ ಸೂತ್ರವನ್ನು ಎಂದಿಗೂ ಒಪ್ಪಿಕೊಳ್ಳದ ಏಕೈಕ ರಾಜ್ಯ ತಮಿಳುನಾಡು. ಇದುವರೆಗಿದ್ದ ಸರ್ಕಾರಗಳೆಲ್ಲವೂ ಕೇಂದ್ರದ ನೀತಿಯನ್ನು ಬಲವಾಗಿ ವಿರೋಧಿಸುತ್ತಾ ಬಂದಿವೆ.

ಅನುಷ್ಠಾನದ ಸಮಸ್ಯೆ

ಸಿಬಿಎಸ್ಇಯ ಈ ಹೊಸ ಆದೇಶ ವಿದ್ಯಾರ್ಥಿಗಳಲ್ಲಿ ಭಾರತೀಯ ಭಾಷೆಗಳ ಬಗೆಗಿನ ಒಲವನ್ನು ಹೆಚ್ಚಿಸುವ ಮತ್ತು ದೇಶದ ಜನರಲ್ಲಿ ಸಾಂಸ್ಕೃತಿಕ ಏಕತೆಯನ್ನು ಮೂಡಿಸುವ ಸದಾಶಯವನ್ನು ಹೊಂದಿದೆ. ಆದರೆ, ಇಂಗ್ಲಿಷ್ ಭಾಷೆಯನ್ನು ವಿದೇಶಿ ಭಾಷೆಯ ಪಟ್ಟಿಗೆ ಸೇರಿಸಿರುವುದರಿಂದ ಜಾಗತಿಕ ಮಟ್ಟದ ಇತರ ಭಾಷೆಗಳನ್ನು ಕಲಿಯಬಯಸುವ ವಿದ್ಯಾರ್ಥಿಗಳಿಗೆ ಆಯ್ಕೆಗಳು ಸೀಮಿತವಾಗಲಿವೆ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ, ಪಠ್ಯಪುಸ್ತಕ ಹಾಗೂ ಶಿಕ್ಷಕರ ಕೊರತೆ ನೀಗಿಸಿಕೊಂಡು ಶಾಲೆಗಳು ಜುಲೈ 1ರಿಂದ ಈ ನೀತಿಯನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಿವೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net