ಹೆಚ್ಚುವರಿ ಕಾವೇರಿ ನೀರಿಗಾಗಿ ಪಟ್ಟು ಹಿಡಿದಿದ್ದ ತಮಿಳುನಾಡಿಗೆ ಸುಪ್ರೀಂ ಕೋರ್ಟ್​ನಲ್ಲಿ ಭಾರಿ ಮುಖಭಂಗ: ಅರ್ಜಿ ವಜಾ! Cauvery Water Dispute

ತನ್ನ ರಾಜ್ಯದ ನೀರಿನ ಕೊರತೆಯನ್ನು ನೀಗಿಸಲು ಕರ್ನಾಟಕದಿಂದ ಹೆಚ್ಚುವರಿಯಾಗಿ 11 ಟಿಎಂಸಿ (TMC) ಕಾವೇರಿ ನೀರನ್ನು ಬಿಡುಗಡೆ ಮಾಡಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ನ.20) ವಜಾಗೊಳಿಸಿದೆ.
Cauvery Water Dispute
ಹೆಚ್ಚುವರಿ ಕಾವೇರಿ ನೀರಿಗಾಗಿ ಪಟ್ಟು ಹಿಡಿದಿದ್ದ ತಮಿಳುನಾಡಿಗೆ ಸುಪ್ರೀಂ ಕೋರ್ಟ್​ನಲ್ಲಿ ಭಾರಿ ಮುಖಭಂಗ: ಅರ್ಜಿ ವಜಾ!
Published on: 

ನವದೆಹಲಿ: ಹೆಚ್ಚುವರಿ ಕಾವೇರಿ ನೀರಿಗಾಗಿ ಪಟ್ಟು ಹಿಡಿದಿದ್ದ ತಮಿಳುನಾಡಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಮುಖಭಂಗವಾಗಿದ. ದಶಕಗಳ ಜಲವಿವಾದದಲ್ಲಿ ( Cauvery Water Dispute ) ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದ್ದು, ನೆರೆಯ ರಾಜ್ಯದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದೆ.

ತನ್ನ ರಾಜ್ಯದ ನೀರಿನ ಕೊರತೆಯನ್ನು ನೀಗಿಸಲು ಕರ್ನಾಟಕದಿಂದ ಹೆಚ್ಚುವರಿಯಾಗಿ 11 ಟಿಎಂಸಿ (TMC) ಕಾವೇರಿ ನೀರನ್ನು ಬಿಡುಗಡೆ ಮಾಡಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ನ.20) ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ತಮಿಳುನಾಡು ಸಲ್ಲಿಸಿದ್ದ ಎರಡು ಮುಖ್ಯ ಅರ್ಜಿಗಳ ಜತೆಗೆ ಮೂರನೇ ಅರ್ಜಿಯನ್ನೂ ತಿರಸ್ಕರಿಸಿದೆ. ದಶಕಗಳಿಂದ ನಡೆಯುತ್ತಿರುವ ಕಾವೇರಿ ಜಲವಿವಾದದಲ್ಲಿ ಈ ತೀರ್ಪು ತಮಿಳುನಾಡು ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದರೆ, ಸಂಕಷ್ಟದ ನಡುವೆಯೂ ನೀರಿಗಾಗಿ ಹೋರಾಡುತ್ತಿದ್ದ ಕರ್ನಾಟಕಕ್ಕೆ ದೊಡ್ಡ ಮಟ್ಟದ ಕಾನೂನು ನಿರಾಳತೆ ತಂದಿದೆ.

Also Read
ಒಂದಲ್ಲ ಎರಡಲ್ಲ ಬರೋಬ್ಬರಿ 6 KG ಚಿನ್ನ ಧರಿಸಿ ಬಂದ ಬಂಗಾರದ ಮನುಷ್ಯ: ಒಟ್ಟು ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ..! Gold Man
Cauvery Water Dispute

ವಿಚಾರಣೆಯ ಸಂದರ್ಭದಲ್ಲಿ ತಮಿಳುನಾಡು ಸರ್ಕಾರವು, ನೀರಿನ ತೀವ್ರ ಕೊರತೆಯಿಂದಾಗಿ ತಮ್ಮ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಮತ್ತು ಬೆಳೆಗಳು ನಾಶವಾಗುತ್ತಿವೆ ಎಂದು ವಾದಿಸಿತ್ತು. ಅಲ್ಲದೆ, ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ಉದ್ದೇಶಪೂರ್ವಕವಾಗಿ ನೀರನ್ನು ತಡೆಹಿಡಿಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿತ್ತು. ಆದರೆ, ಈ ಆರೋಪಗಳನ್ನು ತಳ್ಳಿಹಾಕಿದ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತನ್ನ ರಾಜ್ಯದ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿತು. ಮಳೆಯ ಕೊರತೆಯಿಂದಾಗಿ ಕರ್ನಾಟಕದ ಹಲವು ಭಾಗಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಸ್ಥಳೀಯ ಕುಡಿಯುವ ನೀರು ಹಾಗೂ ಕೃಷಿಗೇ ನೀರಿನ ಅಭಾವವಿರುವುದರಿಂದ ಹೆಚ್ಚುವರಿ ನೀರು ಬಿಡುವುದು ಅಸಾಧ್ಯ ಎಂಬ ಕರ್ನಾಟಕದ ಸಮರ್ಥನೆಯನ್ನು ನ್ಯಾಯಪೀಠವು ಪರಿಗಣಿಸಿದೆ.

ಮತ್ತೊಂದೆಡೆ, ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ 'ಮೇಕೆದಾಟು' ಅಣೆಕಟ್ಟು ಯೋಜನೆಯ ವಿಚಾರವಾಗಿಯೂ ಉಭಯ ರಾಜ್ಯಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಸುಮಾರು 9,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯು ಬೆಂಗಳೂರಿನ ಕುಡಿಯುವ ನೀರಿನ ದಾಹವನ್ನು ನೀಗಿಸುವುದರ ಜತೆಗೆ ವಿದ್ಯುತ್ ಉತ್ಪಾದಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಆದರೆ, ಮೇಕೆದಾಟು ಯೋಜನೆಯಿಂದ ಕಾವೇರಿ ಡೆಲ್ಟಾ ಪ್ರದೇಶದ ನೀರಾವರಿ ಮತ್ತು ನದಿಯ ನೈಸರ್ಗಿಕ ಹರಿವಿಗೆ ಧಕ್ಕೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿರುವ ತಮಿಳುನಾಡು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.

Also Read
100 ರೂ.ಗೂ ಕಡಿಮೆ ಬೆಲೆಯ ಈ ತೆಂಗಿನಕಾಯಿ ಹರಾಜಾಗಿದ್ದು ಬರೋಬ್ಬರಿ 2.55 ಲಕ್ಷ ರೂ.ಗೆ! ಏಕಿಷ್ಟು ಡಿಮ್ಯಾಂಡ್​? ಇಲ್ಲಿದೆ ಅಚ್ಚರಿ ಕಾರಣ...Coconut Auction
Cauvery Water Dispute

ಕಾವೇರಿ ನೀರು ಬಿಡುಗಡೆಯ ವಿಳಂಬ ಹಾಗೂ ಮೇಕೆದಾಟು ಯೋಜನೆಯನ್ನು ವಿರೋಧಿಸಿ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ರೈತರು ವಿನೂತನ ಹಾಗೂ ತೀವ್ರ ಪ್ರತಿಭಟನೆ ನಡೆಸಿದ್ದರು. ಕಾವೇರಿ ನದಿಪಾತ್ರದ ಮರಳಿನಲ್ಲಿ ತಮ್ಮನ್ನು ತಾವು ಹೂತುಕೊಳ್ಳುವ ಮೂಲಕ ಪ್ರತಿಭಟನಾಕಾರರು ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದರು. ಆದರೆ, ರಾಜಕೀಯ ಒತ್ತಡ ಮತ್ತು ಪ್ರತಿಭಟನೆಗಳ ನಡುವೆಯೂ ಕಾನೂನು ಹೋರಾಟದಲ್ಲಿ ತಮಿಳುನಾಡಿಗೆ ನಿರಂತರವಾಗಿ ಹಿನ್ನಡೆಯಾಗುತ್ತಲೇ ಇದೆ.

ಕಾವೇರಿ ಜಲವಿವಾದದ ಇತಿಹಾಸವನ್ನು ಗಮನಿಸಿದರೆ, 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ತಮಿಳುನಾಡಿನ ನೀರಿನ ಪಾಲನ್ನು 192 ಟಿಎಂಸಿಯಿಂದ 177.25 ಟಿಎಂಸಿಗೆ ಇಳಿಸಿ, ಕರ್ನಾಟಕದ ಪಾಲನ್ನು ಹೆಚ್ಚಿಸಿತ್ತು. ತದನಂತರ 2023ರಲ್ಲೂ ಸಹ, ಪ್ರತಿದಿನ ಬಿಡುಗಡೆ ಮಾಡಬೇಕಾದ ಕಾವೇರಿ ನೀರಿನ ಪ್ರಮಾಣವನ್ನು 5,000 ಕ್ಯೂಸೆಕ್‌ನಿಂದ 7,200 ಕ್ಯೂಸೆಕ್‌ಗೆ ಹೆಚ್ಚಿಸುವಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಇದೀಗ ಮತ್ತೊಮ್ಮೆ 11 ಟಿಎಂಸಿ ಹೆಚ್ಚುವರಿ ನೀರಿನ ಬೇಡಿಕೆಯನ್ನೂ ಸುಪ್ರೀಂ ಕೋರ್ಟ್ ತಳ್ಳಿಹಾಕುವ ಮೂಲಕ ತಮಿಳುನಾಡಿನ ವಾದಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ, (ಏಜೆನ್ಸೀಸ್​).