

ನವದೆಹಲಿ: ಎಸ್ಐಆರ್ ವಿವಾದ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿವಾಸದ ಮುಂದೆ ಪ್ರತಿಭಟನೆ ಮತ್ತು ಗೋಡೆಯ ಮೇಲೆ ಗದ್ದಾರ್ ಜ್ಞಾನೇಶ್ ಎಂಬ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ(ಸೆ. 30) 20 ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಸೇರಿ ವಿವಿಧ ಸೆಕ್ಷನ್ಗಳ ಅಡಿ ಎಫ್ಐಆರ್ ದಾಖಲಿಸಲಾಗಿದೆ. ಮತ್ತು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸೋಮವಾರ ನವದೆಹಲಿಯ ವಿಜಯನಗರ ಪ್ರದೇಶದಲ್ಲಿರುವ ಕುಮಾರ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿ ಗೋಡೆ ಮೇಲೆ ಗದ್ದಾರ್ ಜ್ಞಾನೇಶ್(ದೇಶದ್ರೋಹಿ ಜ್ಞಾನೇಶ್) ಎಂದು ವಿವಾದಾತ್ಮಕವಾಗಿ ಬರೆದಿದ್ದರು. ಈ ಕುರಿತು ಸಬ್-ಇನ್ಸ್‌ಪೆಕ್ಟರ್ ಗೌರವ್ ಗುಪ್ತಾ ಅವರು ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ ಹರಿಪರ್ವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರಿನಲ್ಲಿ ಎಂಟು ಜನ ಮತ್ತು ಗುರುತಿಸಲಾಗದ 15–20 ಕಾಂಗ್ರೆಸ್ ಕಾರ್ಯಕರ್ತರನ್ನು ಹೆಸರಿಸಲಾಗಿದೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಾದ ಅನಿಲ್ ಯಾದವ್, ಮುಖೇಶ್ ಧಂಗರ್, ಮನೋಜ್ ಗೌರ್, ರಾಜೇಶ್ ಕುಮಾರ್, ರಾಜಾ ಗೌತಮ್ ಮತ್ತು ಪಂಕಜ್ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದು, ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 109(ಕೊಲೆ ಯತ್ನ), 121 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯ ನಿರ್ವಹಿಸದಂತೆ ತಡೆಯಲು ಸ್ವಯಂಪ್ರೇರಣೆಯಿಂದ ಗಂಭೀರ ಗಾಯಗೊಳಿಸುವುದು), 126(ತಪ್ಪಾದ ನಿರ್ಬಂಧ), 132(ಸಾರ್ವಜನಿಕ ಸೇವಕನ ವಿರುದ್ಧ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 191(ಬಲ ಅಥವಾ ಹಿಂಸಾಚಾರವನ್ನು ಬಳಸಿಕೊಂಡು ಕಾನೂನುಬಾಹಿರ ಸಭೆಯಿಂದ ಗಲಭೆ), 333(ಗಾಯ, ಹಲ್ಲೆ ಅಥವಾ ತಪ್ಪು ನಿರ್ಬಂಧವನ್ನು ಉಂಟುಮಾಡಲು ಸಿದ್ಧತೆಯ ನಂತರ ಮನೆ-ಅತಿಕ್ರಮಣ), 351(2) (ಕ್ರಿಮಿನಲ್ ಬೆದರಿಕೆ) ಮತ್ತು 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್ಐಆರ್ ಕುರಿತಂತೆ ಕಾಂಗ್ರೆಸ್ ನಗರ ಅಧ್ಯಕ್ಷ ಅಮಿತ್ ಸಿಂಗ್ ಪ್ರತಿಕ್ರಿಯಿಸಿದ್ದು, ಪ್ರತಿಭಟನೆಗೆ ಸಂಬಂಧಿಸಿದ ಸೆಕ್ಷನ್ಗಳಡಿ ಪ್ರಕರಣವನ್ನು ಸೀಮಿತಗೊಳಿಸಬೇಕಿತ್ತು. ಆದರೆ ಪೊಲೀಸರು ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಸುಳ್ಳು ಆರೋಪಗಳನ್ನು ಹಿಂಪಡೆಯುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).