

Smit Machchhar: 'ಫ್ಲೈದುಬೈ'ನ FZ1073 ವಿಮಾನ ಘಟನೆಯಲ್ಲಿ ಕೋ-ಪೈಲಟ್ನ ಪಿತೂರಿಯ ಭೀಕರ ದಾಳಿಗೆ ಎದೆಗುಂದದೆ, 180 ಮಂದಿಯ ಜೀವ ಉಳಿಸುವ ಮೂಲಕ ಸಾಹಸ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಇಡೀ ಜಗತ್ತೇ ಕೊಂಡಾಡುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕರೆಯಲ್ಲಿ ಅವರೊಂದಿಗೆ ಮಾತನಾಡಿದ್ದಾರೆ.
180 ಜನರ ಜೀವ ಉಳಿಸಿ, ಸಾವು ಗೆದ್ದ ಸ್ಮಿತ್ ಮಚ್ಚಾರ್ ಜತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ ಪ್ರಧಾನಿ, ಇಡೀ ದೇಶವೇ ನಿಮಗಾಗಿ ಪ್ರಾರ್ಥಿಸುತ್ತಿದೆ. ನಿಮ್ಮ ಧೈರ್ಯ ಮತ್ತು ಸಾಹಸಕ್ಕೆ ಮೆಚ್ಚುಗೆ. ಶೀಘ್ರವೇ ಗುಣಮುಖರಾಗಿ ಬನ್ನಿ. ಭಾರತೀಯರು ಪ್ರಾಣ ತೆಗೆಯುವವರಲ್ಲ, ಇತರರನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧರಿರುವವರು ಎಂದು ದೇಶವು ಹೆಮ್ಮೆಯಿಂದ ಹೇಳಬಹುದು ಎಂದರು.
ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಮಚ್ಚಾರ್, "ನೀವು ನನ್ನ ದೊಡ್ಡ ಐಡಲ್ ಸರ್. ಹೀಗೆ ಕರೆಯುವ ಮೂಲಕ ನನ್ನನ್ನು ಪ್ರೋತ್ಸಾಹಿಸಿದ್ದೀರಿ. ಇದು ನನಗೆ ತುಂಬಾ ಹೆಮ್ಮೆಯ ಕ್ಷಣ ಎನಿಸುತ್ತಿದೆ. ಘಟನೆಯಲ್ಲಿ ತುಂಬಾ ಪೆಟ್ಟು ಬಿದ್ದಿವೆ. ಆದರೆ, ಇಂಥ ಕಠಿಣ ಸಮಯದಲ್ಲಿ ನಾನೇಗೆ ಎದ್ದು ವರ್ತಿಸಬೇಕು ಎಂಬುದನ್ನು ಅರಿತುಕೊಂಡೆ. ಆ ಕ್ಷಣ ನಾನು ನನ್ನ ಬದುಕಿಗಾಗಿ ಹೋರಾಡುತ್ತಿದ್ದೆ. ನಾನು ಕೆಳಗೆ ಬಿದ್ದಿದ್ದೆ. ನಾನೇನಾದರೂ ಎದ್ದೇಳದೇ ಹೋದರೆ ಖಂಡಿತ ಜೀವ ಕಳೆದುಕೊಳ್ಳುವೆ ಅನ್ನೋದು ಸ್ಪಷ್ಟವಾಯಿತು" ಎಂದಿದ್ದಾರೆ.
ಇನ್ನು ಇದೇ ವೇಳೆ ಮಚ್ಚಾರ್ ಅವರ ತಾಯಿಯೊಂದಿಗೂ ಮಾತನಾಡಿದ ಪ್ರಧಾನಿ, ನಿಮ್ಮ ಇಡೀ ಕುಟುಂಬಕ್ಕೆ ದೇಶದ ಸಂಪೂರ್ಣ ಬೆಂಬಲವಿದೆ. ಯಾವುದಕ್ಕೂ ಹೆದರಬೇಡಿ ಎಂಬ ಭರವಸೆ ನೀಡಿದರು. 'ನನ್ನ ಮಗನಿಗೆ ಬಾಲ್ಯದಿಂದಲೂ ಭಗವದ್ಗೀತೆ ಮತ್ತು ಹನುಮಾನ್ ಚಾಲಿಸಾ ಹೇಳಿಕೊಟ್ಟಿದ್ದೇನೆ' ಎಂದರು. ಇದಕ್ಕೆ ಉತ್ತರಿಸಿದ ಸ್ಮಿತ್, 'ಸಂಕಷ್ಟದಲ್ಲಿ ಹನುಮಾನ್ ಚಾಲಿಸಾ ಪಠಿಸುತ್ತೇನೆ. ಆ ಸಂದರ್ಭದಲ್ಲೂ ಪಠಿಸುತ್ತಲೇ ಇದ್ದೆ' ಎಂದು ಘಟನೆಯನ್ನು ವಿವರಿಸಿದ್ದಾರೆ.
ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ವಿಮಾನದ ಸಹ-ಪೈಲಟ್ (ಕೋ-ಪೈಲಟ್) ಕ್ಯಾಪ್ಟನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದನು. ವಿಮಾನವು ಇಸ್ರೇಲ್ ಸಮೀಪಿಸುತ್ತಿದ್ದಂತೆ ಕಾಕ್‌ಪಿಟ್ ಒಳಗೆ ಈ ಘಟನೆ ನಡೆದಿದ್ದು, ಇದರಿಂದ ವಿಮಾನವು ಕೆಲವೇ ಕ್ಷಣಗಳಲ್ಲಿ ಸಾವಿರಾರು ಅಡಿಗಳಷ್ಟು ಕೆಳಗೆ ಧುಮುಕಿತ್ತು.
ಕೂಡಲೇ ಎಚ್ಚೆತ್ತ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಧೈರ್ಯಪ್ರದರ್ಶಿಸಿ ಕಾಕ್‌ಪಿಟ್ ಪ್ರವೇಶಿಸಿ ಹಲ್ಲೆಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತದನಂತರ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದ್ದು, ಗಾಯಗೊಂಡ ಮುಖ್ಯ ಪೈಲಟ್ (ಭಾರತೀಯ ಮೂಲದ ಸ್ಮಿತ್ ಮಚ್ಛಾರ್) ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ,(ಏಜೆನ್ಸೀಸ್).