ಅರೇ, AI ಫೋಟೋನೂ ಸರಿಯಾಗಿ ಮಾಡೋಕೆ ಬರೋದಿಲ್ವೆ ನಿಮ್ಗೆ!: ಕಾಂಗ್ರೆಸ್​ ವಿರುದ್ಧ ಕಿರಣ್ ರಿಜಿಜು ಕಿಡಿ | Kiren Rijiju

ಅರೇ, AI ಫೋಟೋನೂ ಸರಿಯಾಗಿ ಮಾಡೋಕೆ ಬರೋದಿಲ್ವೆ ನಿಮ್ಗೆ!: ಕಾಂಗ್ರೆಸ್​ ವಿರುದ್ಧ ಕಿರಣ್ ರಿಜಿಜು ಕಿಡಿ
ಅರೇ, AI ಫೋಟೋನೂ ಸರಿಯಾಗಿ ಮಾಡೋಕೆ ಬರೋದಿಲ್ವೆ ನಿಮ್ಗೆ!: ಕಾಂಗ್ರೆಸ್​ ವಿರುದ್ಧ ಕಿರಣ್ ರಿಜಿಜು ಕಿಡಿ
Published on: 

ನವದೆಹಲಿ: ಇಲ್ಲಿನ ರಾಮಲೀಲಾ ಮೈದಾನದಲ್ಲಿ ಭಾನುವಾರ ಇಂಡಿಯಾ ಒಕ್ಕೂಟ ಆಯೋಜಿಸಿದ್ದ ಬೃಹತ್ ರ‍್ಯಾಲಿಯು ರಾಜಕೀಯ ಸಂಚಲನ ಸೃಷ್ಟಿಸುವುದರ ಜೊತೆಗೆ, ನಕಲಿ ಎಐ ಫೋಟೋ ಹಂಚಿಕೊಂಡಿರುವುದು ವಿವಾದಕ್ಕೂ ಕಾರಣವಾಗಿದೆ. ರ‍್ಯಾಲಿಯಲ್ಲಿ ಜನಸಾಗರವೇ ಹರಿದುಬಂದಿದೆ ಎಂದು ಬಿಂಬಿಸಲು ಕಾಂಗ್ರೆಸ್ ನಾಯಕರು ಎಐ (ಕೃತಕ ಬುದ್ಧಿಮತ್ತೆ) ಬಳಸಿ ನಕಲಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದ ಕಾಂಗ್ರೆಸ್ ಸಂಸದ ವಂಶಿ ಗದ್ದಮ್ ಹಾಗೂ ಮಾಜಿ ಸಂಸದ ಜಗದೀಶ್ ಠಾಕೂರ್ ಸೇರಿದಂತೆ ಹಲವು ಕಾಂಗ್ರೆಸ್ ಬೆಂಬಲಿಗರು ರಾಮಲೀಲಾ ಮೈದಾನದಲ್ಲಿ ಜನ ತುಂಬಿ ತುಳುಕುತ್ತಿರುವುದನ್ನು ತೋರಿಸುವ ಎಐ ಜನರೇಟೆಡ್ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವೇದಿಕೆಯ ಮೇಲಿರುವ ಭಂಗಿಯೂ ನೈಜ ಚಿತ್ರಕ್ಕಿಂತ ಭಿನ್ನವಾಗಿದೆ.

ಇದನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ಪಕ್ಷದ ಕಟ್ಟುಕಥೆಯ ತಂಡವು ರಾಮಲೀಲಾ ಮೈದಾನ ತುಂಬಿ ತುಳುಕುತ್ತಿತ್ತು ಎಂದು ತೋರಿಸಲು ಕನಿಷ್ಠ ಎಐ ನಕಲಿ ಫೋಟೋವನ್ನೂ ಸರಿಯಾಗಿ ಸಿದ್ಧಪಡಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಹಲವರು ಈ ಫೋಟೋ ನಕಲಿ ಎಂದು ಗುರುತಿಸಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Also Read
ನಾವು ಗೋಗರೆದ್ರೂ ಕೇಳದೆ ರ‍್ಯಾಲಿ ನಡೆಸಿದ್ರು: ದೆಹಲಿಯ ವ್ಯಾಪಾರ ವಲಯಕ್ಕಾದ 12 ಸಾವಿರ ಕೋಟಿ ನಷ್ಟಕ್ಕೆ ವಿಪಕ್ಷಗಳೇ ಕಾರಣ ಎಂದ ಸಿಟಿಐ! | Delhi Traders Loss
ಅರೇ, AI ಫೋಟೋನೂ ಸರಿಯಾಗಿ ಮಾಡೋಕೆ ಬರೋದಿಲ್ವೆ ನಿಮ್ಗೆ!: ಕಾಂಗ್ರೆಸ್​ ವಿರುದ್ಧ ಕಿರಣ್ ರಿಜಿಜು ಕಿಡಿ

ಬಿಜೆಪಿಯಿಂದ ಫ್ಲಾಪ್ ಶೋ ಟೀಕೆ!...

ಮತ್ತೊಂದೆಡೆ, ರ‍್ಯಾಲಿಯಲ್ಲಿ 10 ಲಕ್ಷ ಜನ ಸೇರುವರೆಗೂ ಕಾಂಗ್ರೆಸ್ ಹೇಳಿಕೆ ನೀಡಿತ್ತು. ಆದರೆ ಮೈದಾನದ ಶೇ. 40ರಷ್ಟು ಭಾಗ ಖಾಲಿಯಿತ್ತು ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಸಂಸದ ಹಾಗೂ ವಕ್ತಾರ ಸಂಬಿತ್ ಪಾತ್ರಾ ಮಾತನಾಡಿ, ಕಾಂಗ್ರೆಸ್ 10 ಲಕ್ಷ ಜನರ ಗುಂಪು ಸೇರುತ್ತದೆ ಎಂದಿತ್ತು, ಆದರೆ ಮೈದಾನದ ಅರ್ಧದಷ್ಟು ಭಾಗ ಖಾಲಿಯಾಗಿತ್ತು. ಟ್ರಿಕ್ ಫೋಟೋಗಳಿಂದ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಬಿಜೆಪಿ ನಾಯಕರು ಮೈದಾನದ ಖಾಲಿ ಕುರ್ಚಿಗಳ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡು ಇದೊಂದು ಫ್ಲಾಪ್ ಶೋ ಎಂದು ಟೀಕಿಸಿದರು.

ಆರೋಪಗಳಿಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಮುಖಂಡರು ರ‍್ಯಾಲಿಯ ಡ್ರೋನ್ ದೃಶ್ಯಗಳು ಮತ್ತು ನಿಜವಾದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಲಕ್ಷಾಂತರ ಜನರು ಭಾಗವಹಿಸಿದ್ದರು ಎಂದು ಸಮರ್ಥಿಸಿಕೊಂಡರು.

ಸಿಇಸಿ ವಿರುದ್ಧ ವಿಪಕ್ಷಗಳ ಕಿಡಿ!

ರ‍್ಯಾಲಿಯಲ್ಲಿ ಮಾತನಾಡಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಮತ್ತು ಈ ಚುನಾವಣೆ ಅಕ್ರಮವಾಗಿದೆ, ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಯಿಂದ ಕೆಳಗಿಳಿದು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ತಿರುಗೇಟು ನೀಡಿರುವ ಸಂಬಿತ್ ಪಾತ್ರಾ, ಚುನಾವಣೆ ಮುಗಿದ ತಕ್ಷಣವೇ ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಬೇಕಿತ್ತು ಬಿಟ್ಟು ರಾಮಲೀಲಾ ಮೈದಾನದಲ್ಲಿ ಹೀಗೆ ಮಾತನಾಡಿದರೆ ಸಾಲದು, 2024ರ ಚುನಾವಣೆ ಅಕ್ರಮ ಎಂಬುದಕ್ಕೆ ದಾಖಲೆ ಅಥವಾ ಪಿಐಎಲ್ ತೋರಿಸಿ ಎಂದು ಸವಾಲು ಹಾಕಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ವಿರೋಧಿಸಿ ವಿಪಕ್ಷಗಳು ಈ ರ‍್ಯಾಲಿ ನಡೆಸಿವೆ. ಒಟ್ಟಿನಲ್ಲಿ, ರ‍್ಯಾಲಿಯ ಯಶಸ್ಸಿನ ಕುರಿತು ಎಐ ಫೋಟೋ ವಿವಾದ ಮತ್ತು ಬಿಜೆಪಿ-ಕಾಂಗ್ರೆಸ್ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪಗಳು ರಾಷ್ಟ್ರೀಯ ರಾಜಕಾರಣದಲ್ಲಿ ಸಣ್ಣ ಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿವೆ(ಏಜೆನ್ಸೀಸ್​).