ಹೆಣಗಳ ಮಧ್ಯೆ ಎಣ್ಣೆ ಪಾರ್ಟಿ: ಶವಾಗಾರದಲ್ಲೇ ಫುಲ್ ಟೈಟ್ ಆದ ಸರ್ಕಾರಿ ವೈದ್ಯ; ವಿಡಿಯೋ ವೈರಲ್​ ಬೆನ್ನಲ್ಲೇ ಸಸ್ಪೆಂಡ್​ ಆದೇಶ! Doctor Suspended

ಮಹಾರಾಷ್ಟ್ರದ ಪುಣೆ ಆಸ್ಪತ್ರೆಯ ಶವಾಗಾರದಲ್ಲೇ ಕರ್ತವ್ಯದ ವೇಳೆ ಮದ್ಯ ಸೇವಿಸಿ ತೂರಾಡಿದ ಸರ್ಕಾರಿ ವೈದ್ಯನ ವಿಡಿಯೋ ವೈರಲ್. ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೇ ಡಾಕ್ಟರ್ ಅಮಾನತು. ಪೂರ್ಣ ವಿವರ ಇಲ್ಲಿದೆ.
A liquor bottle on a mortuary table, and a suspended government doctor.
ಶವಾಗಾರದ ಮೇಜಿನ ಮೇಲೆ ಮದ್ಯದ ಬಾಟಲಿ ಹಾಗೂ ಅಮಾನತುಗೊಂಡ ಸರ್ಕಾರಿ ವೈದ್ಯ
Published on: 

ಪುಣೆ: ಆಸ್ಪತ್ರೆ ಎಂದರೆ ಜನ ತಮ್ಮ ಜೀವ ಉಳಿಸಿಕೊಳ್ಳಲು ಬರುವ ಜಾಗ. ಇನ್ನು ಶವಾಗಾರ ಎಂದರೆ ದುಃಖದಲ್ಲಿ ಮುಳುಗಿದ ಕುಟುಂಬಗಳು ತಮ್ಮವರ ಶವ ಪಡೆಯಲು ಕಣ್ಣೀರು ಹಾಕುತ್ತಾ ನಿಲ್ಲುವ ಸೂಕ್ಷ್ಮ ಪ್ರದೇಶ. ಆದರೆ, ಇಲ್ಲೊಬ್ಬ ಸರ್ಕಾರಿ ಡಾಕ್ಟರ್ ಮಾಡಿರುವ ಕೆಲಸ ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಬೇಕಾದ ಜಾಗದಲ್ಲೇ, ಇವನು ಎಣ್ಣೆ ಪಾರ್ಟಿ ಮಾಡಿದ್ದು, ಫುಲ್​ ಟೈಟ್​ಆಗಿ ಮಲಗಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ಆಡಳಿತ ಮಂಡಳಿ ಇವನನ್ನು ಕೆಲಸದಿಂದ ಅಮಾನತುಗೊಳಿಸಿದೆ.

ಶವಾಗಾರದಲ್ಲಿ ನಡೆದಿದ್ದೇನು?

ಮಹಾರಾಷ್ಟ್ರದ ಪಿಂಪ್ರಿ-ಚಿನ್​ವಾಡ ಮಹಾನಗರ ಪಾಲಿಕೆ (PCMC) ವ್ಯಾಪ್ತಿಯ ಯಶವಂತರಾವ್ ಚವಾಣ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಗುರುವಾರ (ಅ.15) ರಾತ್ರಿ ಎಂದಿನಂತೆ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಳು ನಡೆಯುತ್ತಿದ್ದವು. ಹೊರಗಡೆ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿಡುತ್ತಾ ನಿಂತಿದ್ದರು. ಒಬ್ಬ ವ್ಯಕ್ತಿ ತನ್ನ ಸಂಬಂಧಿಕರ ಮರಣ ಪ್ರಮಾಣಪತ್ರ (Death Certificate) ಪಡೆಯಲು ರಾತ್ರಿಯಿಡೀ ಕಾಯುತ್ತಾ ಕುಳಿತಿದ್ದ. ಎಷ್ಟೊತ್ತಾದರೂ ಪ್ರಮಾಣಪತ್ರ ಸಿಗದಿದ್ದಾಗ, ಆತ ನೇರವಾಗಿ ಮರಣೋತ್ತರ ಪರೀಕ್ಷಾ ಕೊಠಡಿಯ ಬಳಿ ಹೋಗಿ ಇಣುಕಿ ನೋಡಿದ್ದಾನೆ. ಆಗ ಒಳಗಡೆ ಕಂಡ ದೃಶ್ಯ ಕಂಡು ಆತ ದಂಡು ಬಡಿದಿದ್ದಾನೆ.

ಮೇಜಿನ ಮೇಲೆ ಮದ್ಯದ ಬಾಟಲಿ, ಸೈಡ್ಸ್: ವೈದ್ಯ ಫುಲ್ ಟೈಟ್!

ಅಲ್ಲಿ ಕರ್ತವ್ಯದಲ್ಲಿದ್ದ ಡಾ. ವೈಭವ್ ಅವಿನಾಶ್ ಮ್ಹಾಸ್ಕೆ ಎನ್ನುವ ವೈದ್ಯ, ಕರ್ತವ್ಯದ ಸಮಯದಲ್ಲೇ ಗ್ಲಾಸ್‌ಗೆ ಎಣ್ಣೆ ಸುರಿದುಕೊಂಡು ಕುಡಿಯುತ್ತಿದ್ದ. ಮೇಜಿನ ಮೇಲೆ ನೀರಿನ ಬಾಟಲಿ, ತಿಂಡಿಗಳು ಹಾಗೂ ಮದ್ಯದ ಬಾಟಲಿಗಳನ್ನು ರಾಜಾರೋಷವಾಗಿ ಹರಡಿಕೊಂಡಿದ್ದ. ಜನ ಹೊರಗಡೆ ಹೆಣಕ್ಕಾಗಿ, ದಾಖಲೆಗಾಗಿ ಕಾದು ಸಾಯುತ್ತಿದ್ದರೆ, ಈ ಡಾಕ್ಟರ್ ಮಾತ್ರ ಫುಲ್ ಜಾಲಿ ಮೂಡ್​ನಲ್ಲಿದ್ದ. ಈ ದೃಶ್ಯ ನೋಡಿದ ಆ ವ್ಯಕ್ತಿ, ತನ್ನ ಮೊಬೈಲ್ ತೆಗೆದು ಈ ಕಳ್ಳಾಟವನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಿಗೆ ಹರಿದುಬರುತ್ತಿದ್ದಂತೆ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ.

Also Read
'ಲೆಹರಾ ದೋ ತಿರಂಗಾ' ಮೆರವಣಿಗೆ ವೇಳೆ ಹೈಡ್ರಾಮಾ: ಯೂಟ್ಯೂಬರ್ ಸೋಗಿನಲ್ಲಿ ಬಂದು CRPF ಯೋಧನಿಗೆ ಕಪಾಳಮೋಕ್ಷ; ವಿಡಿಯೋ ವೈರಲ್​! Lehra Do Tiranga
A liquor bottle on a mortuary table, and a suspended government doctor.

ಸಾರ್ವಜನಿಕರ ಆಕ್ರೋಶಕ್ಕೆ ಬೆದರಿದ ಆಡಳಿತ ಮಂಡಳಿ: ಡಾಕ್ಟರ್ ಸಸ್ಪೆಂಡ್!

ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಭಾರಿ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಎಚ್ಚೆತ್ತ ಪಿಂಪ್ರಿ-ಚಿನ್​ವಾಡ ಹೆಚ್ಚುವರಿ ಆಯುಕ್ತ ಕುಲದೀಪ್ ಜಂಗಮ್, ಆರೋಪಿ ವೈದ್ಯನಿಗೆ ನೋಟಿಸ್ ನೀಡಿ ಸಂಜೆಯೊಳಗೆ ಲಿಖಿತ ವಿವರಣೆ ನೀಡುವಂತೆ ತಾಕೀತು ಮಾಡಿದ್ದಾರೆ.

ಆದರೆ, ಪ್ರಕರಣದ ಗಂಭೀರತೆ ಮತ್ತು ವೈದ್ಯಕೀಯ ನೈತಿಕತೆಗೆ ಧಕ್ಕೆ ಬಂದಿರುವುದನ್ನು ಗಮನಿಸಿದ ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಸೂರ್ಯವಂಶಿ ಯಾವುದೇ ಮುಲಾಜಿಲ್ಲದೆ ಡಾ. ವೈಭವ್ ಮ್ಹಾಸ್ಕೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದು ಆಸ್ಪತ್ರೆ ಆಡಳಿತದ ಬೇಜವಾಬ್ದಾರಿಯನ್ನು ಎತ್ತಿ ತೋರಿಸಿದೆ. ದುಃಖದಲ್ಲಿರುವ ಕುಟುಂಬಗಳ ಜತೆ ಇಂತಹ ಅಸಭ್ಯ ನಡವಳಿಕೆ ತೋರಿದ ಈ 'ಮದ್ಯಪ್ರಿಯ' ವೈದ್ಯನಿಗೆ ಕೇವಲ ಅಮಾನತು ಸಾಲದು, ಸರ್ಕಾರಿ ಸೇವೆಯಿಂದಲೇ ವಜಾಗೊಳಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಜೋರಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net