'ಲೆಹರಾ ದೋ ತಿರಂಗಾ' ಮೆರವಣಿಗೆ ವೇಳೆ ಹೈಡ್ರಾಮಾ: ಯೂಟ್ಯೂಬರ್ ಸೋಗಿನಲ್ಲಿ ಬಂದು CRPF ಯೋಧನಿಗೆ ಕಪಾಳಮೋಕ್ಷ; ವಿಡಿಯೋ ವೈರಲ್​! Lehra Do Tiranga

ನವದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ 'ಲೆಹ್ರಾ ದೋ ತಿರಂಗಾ' ಮೆರವಣಿಗೆ ವೇಳೆ ಯೂಟ್ಯೂಬರ್ ಸೋಗಿನಲ್ಲಿ ಬಂದ ಮಹಿಳೆಯಿಂದ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಕಪಾಳಮೋಕ್ಷ. ದೆಹಲಿ ಪೊಲೀಸರಿಂದ ವಿಡಿಯೋ ಬಿಡುಗಡೆ.
Visuals of a woman assaulting a CRPF soldier at Connaught Place in Delhi
ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಸಿಆರ್‌ಪಿಎಫ್ ಯೋಧನ ಮೇಲೆ ಮಹಿಳೆ ಹಲ್ಲೆ ನಡೆಸುತ್ತಿರುವ ದೃಶ್ಯಾವಳಿ
Published on: 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಆಯೋಜಿಸಿದ್ದ 'ಲೆಹ್ರಾ ದೋ ತಿರಂಗಾ' ಮೆರವಣಿಗೆಯ ವೇಳೆ ಕರ್ತವ್ಯನಿರತ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ಶನಿವಾರ (ಅ.17) ಮಹತ್ವದ ವಿಡಿಯೋ ದೃಶ್ಯಾವಳಿಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಯೂಟ್ಯೂಬರ್ ಸೋಗಿನಲ್ಲಿ ಕಪಾಳಮೋಕ್ಷ!

ಶುಕ್ರವಾರ (ಅ. 16) ಸಂಜೆ ದೆಹಲಿಯ ಜನನಿಬಿಡ ಪಾಲಿಕಾ ಬಜಾರ್ ಹಾಗೂ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದ ಸುತ್ತಮುತ್ತ ಈ ಘಟನೆ ಸಂಭವಿಸಿದೆ. ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 6ರ ಬಳಿ ನಿಯೋಜನೆಗೊಂಡಿದ್ದ ಸಿಆರ್​​ಪಿಎಫ್​ ಪಡೆಯ ಭದ್ರತಾ ಸಿಬ್ಬಂದಿಯೊಬ್ಬರಿಗೆ ಯೂಟ್ಯೂಬರ್ ಸೋಗಿನಲ್ಲಿ ಬಂದ ಮಹಿಳೆಯೊಬ್ಬರು ಏಕಾಏಕಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಪ್ರತಿಭಟನೆಯನ್ನು ಕವರ್ ಮಾಡುವ ಸೋಗಿನಲ್ಲಿ ಬಂದ ಕೆಲವರು, ಭದ್ರತಾ ಸಿಬ್ಬಂದಿಯನ್ನು ಪ್ರಚೋದಿಸಿ ಹಲ್ಲೆ ನಡೆಸಲು ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ.

ಪ್ರತಿಭಟನೆಯ ಮುಸುಕಿನಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಅರೆಸೇನಾ ಸಿಬ್ಬಂದಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಇಲಾಖೆ ಗಂಭೀರ ಆರೋಪ ಮಾಡಿದೆ. ಪ್ರಸ್ತುತ ಮೆಟ್ರೋ ಹಾಗೂ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ತೀವ್ರ ಪರಿಶೀಲನೆಗೆ ಒಳಪಡಿಸಿದ್ದು, ಹಲ್ಲೆಯಲ್ಲಿ ಭಾಗಿಯಾದ ನಕಲಿ ಯೂಟ್ಯೂಬರ್‌ಗಳು ಮತ್ತು ಕಿಡಿಗೇಡಿ ಪ್ರತಿಭಟನಾಕಾರರನ್ನು ಗುರುತಿಸುವ ಕಾರ್ಯ ಭರದಿಂದ ಸಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.

ಏನಿದು 'ಲೆಹ್ರಾ ದೋ ತಿರಂಗಾ' ವಿವಾದ?

ತಮ್ಮ ಸಂಘಟನೆಯ ಪ್ರಮುಖ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಶ್​ ರಂಕಾ ಅವರ ಬಂಧನವನ್ನು ವಿರೋಧಿಸಿ, ಅಭಿಜೀತ್ ದಿಪ್ಕೆ ನೇತೃತ್ವದ CJP ಶುಕ್ರವಾರ ಸಂಜೆ 5 ಗಂಟೆಗೆ ಕನ್ನಾಟ್ ಪ್ಲೇಸ್‌ನಲ್ಲಿ 'ಲೆಹ್ರಾ ದೋ ತಿರಂಗಾ' ಮೆರವಣಿಗೆಗೆ ಕರೆ ನೀಡಿತ್ತು. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಈ ಹಿಂದೆಯೇ ತೆಗೆದುಹಾಕಲಾಗಿದ್ದರೂ, ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಸೌರವ್ ದಾಸ್ ಮತ್ತು ಅಶುತೋಶ್​ ರಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ವಿವಾದಾತ್ಮಕ 'ಸ್ಪೆಷಲ್ ಇಂಟೆನ್ಸಿವ್ ರಿವಿಷನ್' (SIR) ಪ್ರಕ್ರಿಯೆಯನ್ನು ಹಿಂಪಡೆಯಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ CJP ಹಾಗೂ ವಿರೋಧ ಪಕ್ಷಗಳ ಒಕ್ಕೂಟವಾದ 'ಇಂಡಿಯಾ' (INDIA) ಬ್ಲಾಕ್ ರಾಜಧಾನಿಯಲ್ಲಿ ಪ್ರತ್ಯೇಕ ಹೋರಾಟಗಳನ್ನು ನಡೆಸುತ್ತಿವೆ.

Also Read
ಮನೆಗೊಂದು ಸರ್ಕಾರಿ ಕೆಲಸಕೊಡಿ: ಸೇವಾ ನಿವೃತ್ತಿಯನ್ನು 45 ವರ್ಷಕ್ಕೆ ಇಳಿಕೆ ಮಾಡಿ; ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅಭಿಮತ! H D Kumaraswamy
Visuals of a woman assaulting a CRPF soldier at Connaught Place in Delhi

ಮುಂಜಾಗ್ರತಾ ಬಂಧನ

ಕನ್ನಾಟ್ ಪ್ಲೇಸ್‌ನಲ್ಲಿ ನಡೆಯಬೇಕಿದ್ದ ಮೆರವಣಿಗೆ ಶಾಂತಿಭಂಗಕ್ಕೆ ಕಾರಣವಾಗಬಹುದು ಎಂಬ ಮುನ್ಸೂಚನೆಯೊಂದಿಗೆ, ಪೊಲೀಸರು ಕಾರ್ಯಕ್ರಮಕ್ಕೂ ಮುನ್ನವೇ CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಮುಖ್ಯಸ್ಥೆ ನೇಹಾ ಬೋರಾ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದರು.

ಪೊಲೀಸರ ಮಾಹಿತಿ ಪ್ರಕಾರ, ಪ್ರತಿಭಟನೆಗಾಗಿ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ಗೆ ತೆರಳದಂತೆ CJP ಸಂಸ್ಥಾಪಕರಿಗೆ ಮುಂಚಿತವಾಗಿಯೇ ಎರಡು ಬಾರಿ ಅಧಿಕೃತ ನೋಟಿಸ್ ಜಾರಿ ಮಾಡಲಾಗಿತ್ತು. ಅಲ್ಲದೆ, 50,000 ಮೊತ್ತದ ಬಾಂಡ್ ಪಡೆದು, ಒಂದು ವರ್ಷದವರೆಗೆ ಸಾರ್ವಜನಿಕ ಶಾಂತಿಗೆ ಧಕ್ಕೆ ತರಬಾರದು ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿತ್ತು. ಆದಾಗ್ಯೂ ಅವರು ನಿಯಮಗಳನ್ನು ಗಾಳಿಗೆ ತೂರಿದ್ದರು ಎನ್ನಲಾಗಿದೆ.

ಸದ್ಯ ವಶದಲ್ಲಿದ್ದ AISA ಮುಖ್ಯಸ್ಥೆ ನೇಹಾ ಬೋರಾ ಅವರನ್ನು ಶನಿವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗಿದ್ದು, CJP ಮುಖಂಡ ಅಭಿಜೀತ್ ದಿಪ್ಕೆ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಮೇಲೆ ನಡೆದ ಈ ಹಲ್ಲೆಯ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net