ಸೂಪರ್ ಪವರ್ ದೇಶಗಳನ್ನು ಹಿಂದಿಕ್ಕಿದ ಭಾರತ!...ಮೋದಿ ನಾಯಕತ್ವಕ್ಕೆ ಜೈ ಅಂದ ಆಸ್ಟ್ರೇಲಿಯನ್ನರು | Lowy Institute Poll
Lowy Institute Poll | ಸೂಪರ್ ಪವರ್ ದೇಶಗಳನ್ನು ಹಿಂದಿಕ್ಕಿದ ಭಾರತ
Published on:
Copied
Follow Us
ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಮೇಲಿನ ವಿಶ್ವಾಸಾರ್ಹತೆ ಮತ್ತಷ್ಟು ಗಟ್ಟಿಯಾಗುತ್ತಿದೆ. ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತವನ್ನು ಜಗತ್ತಿನ ಬಹುತೇಕ ದೇಶಗಳು ಅತ್ಯಂತ ನಂಬಿಕಸ್ಥ ರಾಷ್ಟ್ರವಾಗಿ ನೋಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಆಸ್ಟ್ರೇಲಿಯಾದ ಪ್ರಸಿದ್ಧ ಥಿಂಕ್-ಟ್ಯಾಂಕ್ ಲೋವಿ ಇನ್‌ಸ್ಟಿಟ್ಯೂಟ್ (Lowy Institute Poll) ನಡೆಸಿರುವ ಇತ್ತೀಚಿನ ಜಾಗತಿಕ ಸಮೀಕ್ಷೆಯೊಂದು ಪ್ರಮುಖ ವರದಿಯನ್ನು ಪ್ರಕಟಿಸಿದೆ.
ಅಮೆರಿಕ, ಚೀನಾ ಹಾಗೂ ರಷ್ಯಾ ದೇಶಗಳಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಜನತೆ ಪ್ರಧಾನಿ ಮೋದಿ ಮುನ್ನಡೆಸುತ್ತಿರುವ ಭಾರತದ ಮೇಲೆ ಅತಿ ಹೆಚ್ಚು ಭರವಸೆ ಇಟ್ಟಿದ್ದಾರೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ.
ಲೋವಿ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ಹೊಸ ಅಂಕಿ-ಅಂಶಗಳ ಪ್ರಕಾರ, ಶೇಕಡಾ 50 ರಷ್ಟು ಆಸ್ಟ್ರೇಲಿಯನ್ನರು ಭಾರತದ ಜಾಗತಿಕ ನಡೆಗಳನ್ನು ಬೆಂಬಲಿಸಿದ್ದು, ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಜಾಗತಿಕ ದೊಡ್ಡಣ್ಣ ಅಮೆರಿಕದ ಮೇಲಿನ ನಂಬಿಕೆ ಕೇವಲ ಶೇಕಡಾ 31 ಕ್ಕೆ ಕುಸಿದಿದೆ. ಇನ್ನುಳಿದಂತೆ ಚೀನಾ ಮತ್ತು ರಷ್ಯಾ ದೇಶಗಳು ಕ್ರಮವಾಗಿ ಶೇಕಡಾ 28 ಹಾಗೂ ಶೇಕಡಾ 11 ರಷ್ಟು ಜನರ ನಂಬಿಕೆಯನ್ನು ಮಾತ್ರ ಗಳಿಸಲು ಯಶಸ್ವಿಯಾಗಿವೆ.
ಜಾಗತಿಕವಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಲ್ಲಿ ಭಾರತ ಸಮರ್ಥವಾಗಿದೆ ಎಂದು ಶೇಕಡಾ 46 ರಷ್ಟು ಆಸ್ಟ್ರೇಲಿಯನ್ನರು ಅಭಿಪ್ರಾಯಪಟ್ಟಿದ್ದರೆ, ಶೇಕಡಾ 4 ರಷ್ಟು ಜನ ಭಾರತದ ನಾಯಕತ್ವವನ್ನು ಸಂಪೂರ್ಣವಾಗಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ಸಮೀಕ್ಷೆಯ ಇತಿಹಾಸದಲ್ಲೇ ಅಮೆರಿಕದ ಮೇಲಿನ ವಿಶ್ವಾಸಾರ್ಹತೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಜಾಗತಿಕ ರಾಜಕೀಯದ ಬದಲಾವಣೆಗೆ ಹಿಡಿದ ಕೈಗನ್ನಡಿಯಾಗಿದೆ.
ಸತತ 12 ವರ್ಷಗಳಿಂದ ಅಧಿಕಾರದಲ್ಲಿರುವ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಜಾಗತಿಕ ನಂಬಿಕೆ ಇಂದಿಗೂ ಅಚಲವಾಗಿದೆ ಎಂಬುದನ್ನು ಈ ಹಿಂದಿನ ವರದಿಗಳೂ ಸಾಬೀತುಪಡಿಸಿವೆ. ಕಳೆದ ವರ್ಷದ ಮಾರ್ನಿಂಗ್ ಕನ್ಸಲ್ಟ್ ಜಾಗತಿಕ ರೇಟಿಂಗ್‌ನಲ್ಲಿ ಶೇಕಡಾ 75 ರಷ್ಟು ಬೆಂಬಲದೊಂದಿಗೆ ಪ್ರಧಾನಿ ಮೋದಿ ವಿಶ್ವದಲ್ಲೇ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು. ಸತತ ಐದನೇ ಬಾರಿಗೆ ಅವರು ಈ ಸಾಧನೆ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವಕ್ಕೆ ಸಾಕ್ಷಿಯಾಗಿದೆ.
ಇಲ್ಲಿ ಸ್ಥಿರತೆ.....ಅಲ್ಲೆಲ್ಲಾ ಅಸ್ಥಿರತೆ
2014 ರಿಂದ ಭಾರತವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರು ದೇಶದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಜನಪ್ರಿಯತೆ ಕಾಯ್ದುಕೊಂಡ ಪ್ರಧಾನಿಗಳಲ್ಲಿ ಒಬ್ಬರಾಗಿದ್ದಾರೆ. ಭಾರತದಲ್ಲಿ ರಾಜಕೀಯ ಸ್ಥಿರತೆ ಮುಂದುವರಿದಿರುವ ಇದೇ ಅವಧಿಯಲ್ಲಿ ವಿಶ್ವದ ಇತರ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಪದೇ ಪದೆ ನಾಯಕತ್ವದ ಬದಲಾವಣೆಗೆ ಸಾಕ್ಷಿಯಾಗಿವೆ. ಆಸ್ಟ್ರೇಲಿಯಾ ದೇಶವು ಕಳೆದ ಕೆಲವು ವರ್ಷಗಳಲ್ಲಿ ಮಾಲ್ಕಮ್ ಟರ್ನ್‌ಬುಲ್, ಸ್ಕಾಟ್ ಮಾರಿಸನ್ ಮತ್ತು ಪ್ರಸ್ತುತ ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿದಂತೆ ಮೂವರು ಪ್ರಧಾನಿಗಳನ್ನು ಕಂಡಿದೆ.
ಇತ್ತ ಯುನೈಟೆಡ್ ಕಿಂಗ್‌ಡಮ್ (UK) ರಾಜಕೀಯ ವ್ಯವಸ್ಥೆಯಲ್ಲಂತೂ ತೀವ್ರ ಏರಿಳಿತಗಳು ಕಂಡುಬಂದಿದ್ದು, ಕಳೆದ ಹತ್ತು ವರ್ಷಗಳಲ್ಲಿ ಡೆವಿಡ್ ಕ್ಯಾಮರೂನ್, ಥೆರೆಸಾ ಮೇ, ಬೋರಿಸ್ ಜಾನ್ಸನ್, ಲಿಜ್ ಟ್ರಸ್, ರಿಷಿ ಸುನಕ್ ಮತ್ತು ಕೀರ್ ಸ್ಟಾರ್ಮರ್ ಒಳಗೊಂಡಂತೆ ಆರು ಪ್ರಧಾನಿಗಳು ಅಧಿಕಾರ ನಡೆಸಿ ನಿರ್ಗಮಿಸಿದ್ದಾರೆ.
2014 ರಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಾಗ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದರು. ತದನಂತರ ಡೊನಾಲ್ಡ್ ಟ್ರಂಪ್ ಆಡಳಿತ ಬಂದರೂ, 2020 ರಲ್ಲಿ ಜೋ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ, 2024 ರ ಇತ್ತೀಚಿನ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಅಮೆರಿಕದ ಅಧ್ಯಕ್ಷ ಗದ್ದುಗೆಗೆ ಮರಳಿದ್ದಾರೆ. ಜಗತ್ತಿನ ಪ್ರಮುಖ ದೇಶಗಳಲ್ಲಿ ಇಷ್ಟೆಲ್ಲಾ ರಾಜಕೀಯ ಏರುಪೇರುಗಳಾಗುತ್ತಿದ್ದರೂ, ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸ್ಥಿರವಾಗಿ ಮುನ್ನಡೆಯುತ್ತಿರುವುದು ಜಾಗತಿಕ ಹೂಡಿಕೆ ಮತ್ತು ನಂಬಿಕೆಗೆ ಪ್ರಮುಖ ಕಾರಣವಾಗಿದೆ(ಏಜೆನ್ಸೀಸ್).