ಸ್ಪೇಸ್‌ಎಕ್ಸ್ ಷೇರುಗಳ ಪತನ!...ಟ್ರಿಲಿಯನೇರ್ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್ | Elon Musk

Elon Musk |  ಎಲಾನ್ ಮಸ್ಕ್
Elon Musk | ಎಲಾನ್ ಮಸ್ಕ್
Published on
ನ್ಯೂಯಾರ್ಕ್: ಜಾಗತಿಕ ಇತಿಹಾಸದಲ್ಲೇ ಅದ್ಧೂರಿಯಾಗಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಎಲಾನ್ ಮಸ್ಕ್ (Elon Musk) ನೇತೃತ್ವದ ಸ್ಪೇಸ್‌ಎಕ್ಸ್ (SpaceX) ಕಂಪನಿಯ ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಜೂನ್ 23ರ ಪ್ರಿ-ಮಾರ್ಕೆಟ್ ವಹಿವಾಟಿನಲ್ಲಿ ಕಂಪನಿಯ ಷೇರುಗಳು ಶೇಕಡಾ 5 ರಷ್ಟು ಕುಸಿದು 147 ಡಾಲರ್‌ಗೆ ತಲುಪುವ ಮೂಲಕ, ಮೊದಲ ದಿನದ ಆರಂಭಿಕ ಬೆಲೆಯಾದ 150 ಡಾಲರ್‌ಗಿಂತಲೂ ಕೆಳಕ್ಕೆ ಜಾರಿವೆ.
ಈ ಹಠಾತ್ ಪತನದಿಂದಾಗಿ ಸ್ಪೇಸ್‌ಎಕ್ಸ್ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 2 ಟ್ರಿಲಿಯನ್ ಡಾಲರ್ (ಸುಮಾರು 166 ಲಕ್ಷ ಕೋಟಿ ರೂಪಾಯಿ) ಗಿಂತ ಕೆಳಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್​​ಗೆ ಸಿಕ್ಕಿದ್ದ ವಿಶ್ವದ ಮೊದಲ ಟ್ರಿಲಿಯನೇರ್ ಎಂಬ ಹೆಗ್ಗಳಿಕೆಯೂ ಕೇವಲ ಕೆಲವೇ ದಿನಗಳಲ್ಲಿ ಕೈತಪ್ಪಿ ಹೋಗಿದೆ.

ಒಂದೇ ದಿನ 400 ಬಿಲಿಯನ್ ಡಾಲರ್ ಧೂಳೀಪಟ!

ಕಳೆದ ಮೂರು ವಾಣಿಜ್ಯ ವಹಿವಾಟಿನ ಅವಧಿಯಲ್ಲಿ ಸ್ಪೇಸ್‌ಎಕ್ಸ್ ಬರೋಬ್ಬರಿ 600 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಇದರಲ್ಲಿ ಕೇವಲ ಒಂದೇ ದಿನ ಸುಮಾರು 400 ಬಿಲಿಯನ್ ಡಾಲರ್ (ಸುಮಾರು 33 ಲಕ್ಷ ಕೋಟಿ ರೂಪಾಯಿ) ಮೌಲ್ಯ ಧೂಳೀಪಟವಾಗಿದೆ. ಇದು ಜಾಗತಿಕ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ದಾಖಲಾದ ಎರಡನೇ ಅತಿ ದೊಡ್ಡ ಪತನವಾಗಿದೆ. ಕಳೆದ ವರ್ಷ ಎನ್‌ವಿಡಿಯಾ (Nvidia) ಕಂಪನಿಯು ಒಂದೇ ದಿನ 590 ಬಿಲಿಯನ್ ಡಾಲರ್ ಕಳೆದುಕೊಂಡಿತ್ತು.
ಇತ್ತೀಚಿನ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಸ್ಪೇಸ್‌ಎಕ್ಸ್ ಷೇರುಗಳು ಶೇ. 16 ರಷ್ಟು ಕುಸಿದಿವೆ. ಆದಾಗ್ಯೂ, ಕಂಪನಿಯ ಆರಂಭಿಕ ಐಪಿಒ (IPO) ಬೆಲೆಯಾದ 135 ಡಾಲರ್‌ಗೆ ಹೋಲಿಸಿದರೆ ಪ್ರಸ್ತುತ ದರವು ಶೇ. 10 ರಷ್ಟು ಮೇಲಿದೆ.
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತನ್ನೇ ಆಳುತ್ತಿದ್ದ ಸ್ಪೇಸ್‌ಎಕ್ಸ್ ಕಂಪನಿಯು ಈ ತಿಂಗಳ ಆರಂಭದಲ್ಲಿ ಸಾರ್ವಜನಿಕವಾಗಿ ಷೇರು ಮಾರುಕಟ್ಟೆ (Public Listing) ಪ್ರವೇಶಿಸಿ ಭಾರಿ ಬೇಡಿಕೆ ಸೃಷ್ಟಿಸಿತ್ತು. ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳು ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿವೆ: ಬಾಂಡ್ ಬಿಡುಗಡೆಯ ನಿರ್ಧಾರ: ಸ್ಪೇಸ್‌ಎಕ್ಸ್ ಕಂಪನಿಯ ಬಳಿ ಈಗಾಗಲೇ 100 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ನಗದು ಮೀಸಲು ಇದ್ದರೂ ಸಹ, ಮಾರುಕಟ್ಟೆಯಿಂದ ಮತ್ತಷ್ಟು ಸಾಲ ಸಂಗ್ರಹಿಸಲು ಹೂಡಿಕೆದಾರರ ದರ್ಜೆಯ ಬಾಂಡ್‌ಗಳನ್ನು (Investment-Grade Bonds) ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕೈಯಲ್ಲಿ ಅಷ್ಟೊಂದು ಹಣವಿದ್ದರೂ ಕಂಪನಿ ಸಾಲ ಮಾಡಲು ಹೊರಟಿರುವುದು ಏಕೆ ಎಂದು ಹೂಡಿಕೆದಾರರು ಪ್ರಶ್ನಿಸುತ್ತಿದ್ದಾರೆ.
ಭಾರೀ ಆರ್ಥಿಕ ನಷ್ಟ: ಎಐ ತಂತ್ರಜ್ಞಾನ, ಡೇಟಾ ಸೆಂಟರ್‌ಗಳು ಮತ್ತು ಸ್ಟಾರ್‌ಶಿಪ್ (Starship) ರಾಕೆಟ್ ಅಭಿವೃದ್ಧಿಗಾಗಿ ಕಂಪನಿಯು ನೀರಿನಂತೆ ಹಣ ಖರ್ಚು ಮಾಡುತ್ತಿದೆ. ಇದರಿಂದಾಗಿ ಸ್ಪೇಸ್‌ಎಕ್ಸ್ 2025ರಲ್ಲಿ 4.9 ಬಿಲಿಯನ್ ಡಾಲರ್ ಹಾಗೂ 2026ರ ಮೊದಲ ತ್ರೈಮಾಸಿಕದಲ್ಲೇ 4.28 ಬಿಲಿಯನ್ ಡಾಲರ್ ಭಾರಿ ನಿವ್ವಳ ನಷ್ಟ ಅನುಭವಿಸಿದೆ.
ಜಾಗತಿಕ ಟೆಕ್ ಷೇರುಗಳ ಕುಸಿತ: ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಕಂಪನಿಗಳ ಷೇರುಗಳ ಮಾರಾಟದ ಅಲೆ ಎದ್ದಿದೆ. ಅಮೆರಿಕದ ನಾಸ್ಡಾಕ್ ಶೇ. 2.6 ರಷ್ಟು ಮತ್ತು ಯುರೋಪ್‌ನ ಟೆಕ್ ಸೂಚ್ಯಂಕ ಶೇ. 3.1 ರಷ್ಟು ಕುಸಿದಿವೆ. ದಕ್ಷಿಣ ಕೊರಿಯಾದ ಎಸ್‌ಕೆ ಹೈನಿಕ್ಸ್ ಕಂಪನಿಯು ಎಐ ಮೆಮೊರಿ ಚಿಪ್ ಉತ್ಪಾದನೆಯನ್ನು ನಿಧಾನಗೊಳಿಸಲಿದೆ ಎಂಬ ವರದಿಗಳು ಇಡೀ ತಂತ್ರಜ್ಞಾನ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ. ಮುಂದಿನ ದಿನಗಳಲ್ಲಿ ಎಲಾನ್ ಮಸ್ಕ್ ಅವರ ಎಐ ಆಸೆಗಳು ಮತ್ತು ಬಾಹ್ಯಾಕಾಶ ಯೋಜನೆಗಳು ಮಾರುಕಟ್ಟೆಯಲ್ಲಿ ಯಾವ ರೀತಿ ಚೇತರಿಕೆ ಕಾಣಲಿವೆ ಎಂಬುದರ ಮೇಲೆ ಸ್ಪೇಸ್‌ಎಕ್ಸ್‌ನ ಭವಿಷ್ಯ ನಿರ್ಧಾರವಾಗಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net