ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಫಿಕ್ಸ್? ಎಕ್ಸಿಟ್ ಪೋಲ್ ಅಂಕಿ-ಅಂಶ ಕಂಡು ದಂಗಾದ ವಿರೋಧ ಪಕ್ಷಗಳು! Assam Exit Poll

ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಫಿಕ್ಸ್? ಎಕ್ಸಿಟ್ ಪೋಲ್ ಅಂಕಿ-ಅಂಶ ಕಂಡು ದಂಗಾದ ವಿರೋಧ ಪಕ್ಷಗಳು!
ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಫಿಕ್ಸ್? ಎಕ್ಸಿಟ್ ಪೋಲ್ ಅಂಕಿ-ಅಂಶ ಕಂಡು ದಂಗಾದ ವಿರೋಧ ಪಕ್ಷಗಳು!
Published on
ದಿಸ್ಪುರ: ಅಸ್ಸಾಂ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಹೊರಬಿದ್ದಿರುವ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ (Assam Exit Poll ) ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟದ ಭರ್ಜರಿ ಜಯವನ್ನು ಮುನ್ಸೂಚಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ನಾಯಕತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.

ಏಕ್ಸಿಟ್ ಪೋಲ್ ಅಂಕಿ-ಅಂಶಗಳ ವಿವರ

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ಮೈತ್ರಿಕೂಟಗಳ ಬಲಾಬಲ ಈ ಕೆಳಗಿನಂತಿದೆ.

ಮೈತ್ರಿಕೂಟ  ಅಂದಾಜು -  ಸ್ಥಾನಗಳು  ಅಂದಾಜು  - ಮತ ಹಂಚಿಕೆ

NDA (ಬಿಜೆಪಿ ಮೈತ್ರಿಕೂಟ)   - 88 - 100               48% 
ಕಾಂಗ್ರೆಸ್ (ಯುಪಿಎ)              -24 - 36                38%  
ಇತರರು                             -02 - 08             14%

ಬಿಜೆಪಿ ಅಧಿಪತ್ಯಕ್ಕೆ ಕಾರಣವೇನು..?

ಸಮೀಕ್ಷೆಯ ಪ್ರಕಾರ, ಅಸ್ಸಾಂನಲ್ಲಿ ಎನ್‌ಡಿಎ ಮೈತ್ರಿಕೂಟವು ಶೇ. 48 ರಷ್ಟು ಬೃಹತ್ ಮತ ಹಂಚಿಕೆಯನ್ನು ಪಡೆಯುವ ಸಾಧ್ಯತೆಯಿದೆ.
ಅಭಿವೃದ್ಧಿ ಮತ್ತು ಹಿಂದುತ್ವ: ಹಿಮಂತ ಬಿಸ್ವ ಶರ್ಮಾ ಅವರ ಆಡಳಿತ ವೈಖರಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆ ಬಿಜೆಪಿಯ ಕೈಹಿಡಿದಿದೆ ಎನ್ನಲಾಗುತ್ತಿದೆ.
ವಿಪಕ್ಷಗಳ ವೈಫಲ್ಯ: ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಒಕ್ಕೂಟವು ಕೇವಲ 24 ರಿಂದ 36 ಸ್ಥಾನಗಳಿಗೆ ಸೀಮಿತವಾಗುವ ಮುನ್ಸೂಚನೆ ಸಿಕ್ಕಿದೆ. ಮತ ಹಂಚಿಕೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಶೇ. 10 ರಷ್ಟು ಮುಂದಿರುವುದು ಗಮನಾರ್ಹ ಅಂಶವಾಗಿದೆ.

ಅಜೇಯರಾಗ್ತಾರಾ ಹಿಮಂತ ಬಿಸ್ವ ಶರ್ಮಾ ..?

ಈ ಎಕ್ಸಿಟ್ ಪೋಲ್ ನಿಜವಾದಲ್ಲಿ, ಈಶಾನ್ಯ ಭಾರತದ ರಾಜಕೀಯದಲ್ಲಿ ಹಿಮಂತ ಬಿಸ್ವ ಶರ್ಮಾ ಅತಿ ದೊಡ್ಡ ನಾಯಕನಾಗಿ ಹೊರಹೊಮ್ಮಲಿದ್ದಾರೆ. ರಾಜ್ಯದಲ್ಲಿ ಜಾರಿಗೊಳಿಸಲಾದ ಕಠಿಣ ಕಾನೂನುಗಳು ಮತ್ತು ನೇರ ಪ್ರಚಾರ ಶೈಲಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದಂತೆ ತೋರುತ್ತಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ಅಬ್ಬರದ ಪ್ರಚಾರವೂ ಬಿಜೆಪಿಯ ಈ ನಿರೀಕ್ಷಿತ ಗೆಲುವಿಗೆ ಬಲ ನೀಡಿದೆ.

ಅಂತಿಮ ತೀರ್ಪು ಬಾಕಿ ಇದೆ!

ಇದು ಕೇವಲ ಚುನಾವಣೋತ್ತರ ಸಮೀಕ್ಷೆಯಾಗಿದ್ದು, ಅಂತಿಮ ಫಲಿತಾಂಶಕ್ಕಾಗಿ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಎಕ್ಸಿಟ್ ಪೋಲ್ ಮುನ್ಸೂಚನೆಯಂತೆ ಅಸ್ಸಾಂನಲ್ಲಿ ಕೇಸರಿ ಬಾವುಟ ಹಾರುತ್ತದೆಯೇ ಅಥವಾ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಪವಾಡ ಮಾಡುತ್ತದೆಯೇ ಎಂಬುದು ಫಲಿತಾಂಶದ ದಿನವೇ ತಿಳಿಯಲಿದೆ. ಒಂದು ವೇಳೆ ಸಮೀಕ್ಷೆ ನಿಜವಾದರೆ, ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net