ಒಂದು ಕಡೆ ಎಫ್‌ಸಿಆರ್‌ಎ, ಇನ್ನೊಂದೆಡೆ ಕ್ಷೇತ್ರ ಪುನರ್ವಿಂಗಡಣೆ!... ವಿಪಕ್ಷಗಳನ್ನು ಒಲಿಸಿಕೊಳ್ಳಲು ಸರ್ಕಾರದ ಕಸರತ್ತು | FCRA Bill 2026

FCRA Bill 2026 > ಒಂದು ಕಡೆ ಎಫ್‌ಸಿಆರ್‌ಎ, ಇನ್ನೊಂದೆಡೆ ಕ್ಷೇತ್ರ ಪುನರ್ವಿಂಗಡಣೆ
FCRA Bill 2026 > ಒಂದು ಕಡೆ ಎಫ್‌ಸಿಆರ್‌ಎ, ಇನ್ನೊಂದೆಡೆ ಕ್ಷೇತ್ರ ಪುನರ್ವಿಂಗಡಣೆ
Published on

ಕೇಂದ್ರ ಸರ್ಕಾರವು ಈ ವಾರ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು (FCRA Bill 2026) ಸಂಸತ್ತಿನಲ್ಲಿ ಮಂಡಿಸಲಿದೆಯೇ ಅಥವಾ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು (Delimitation Bill) ಮಂಡಿಸುವ ಸಲುವಾಗಿ ಇದನ್ನು ಮುಂದೂಡಲಿದೆಯೇ ಎಂಬ ಚರ್ಚೆ ಸಂಸತ್ತಿನಲ್ಲಿ ಜೋರಾಗಿದೆ. ಎಫ್‌ಸಿಆರ್‌ಎ ಮಸೂದೆ ಅಂಗೀಕಾರಕ್ಕೆ ಸರ್ಕಾರಕ್ಕೆ ಸಾಧಾರಣ ಬಹುಮತ ಸಾಕಾಗುತ್ತದೆ. ಆದರೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ಸಂವಿಧಾನ ತಿದ್ದುಪಡಿಯಾಗಿರುವುದರಿಂದ, ಅದನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬೆಂಬಲ ಬೇಕಿದ್ದು, ಸರ್ಕಾರಕ್ಕೆ ಇದು ಸವಾಲಾಗಿ ಪರಿಣಮಿಸಿದೆ.

131 ನೇ ಸಂವಿಧಾನ ತಿದ್ದುಪಡಿ ಮಸೂದೆಯಡಿಯಲ್ಲಿ ತರಲಾಗುವ ಈ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ವಿಂಗಡಣೆ ವಿಧೇಯಕದ ಅಂಗೀಕಾರಕ್ಕಾಗಿ ಬಿಜೆಪಿ, ಎನ್‌ಡಿಎ ಹೊರತಾದ ಪಕ್ಷಗಳನ್ನು ಸಂಪರ್ಕಿಸುತ್ತಿದೆ ಎಂದು ನಂಬಲಾಗಿದೆ. ಆದಾಗ್ಯೂ, ಡಿಎಂಕೆ, ಎನ್‌ಸಿಪಿ-ಎಸ್‌ಪಿಯಂತಹ ಪ್ರಾದೇಶಿಕ ಪಕ್ಷಗಳು ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026 ಅನ್ನು ವಿರೋಧಿಸುತ್ತಿದ್ದರೆ, ವೈಎಸ್‌ಆರ್‌ಸಿಪಿಯಂತಹ ಇತರ ಪಕ್ಷಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ.
ಎಫ್‌ಸಿಆರ್‌ಎ ಮಸೂದೆಗೆ ಸಂಬಂಧಿಸಿದಂತೆ ಎನ್‌ಸಿಪಿ-ಎಸ್‌ಪಿ, ಡಿಎಂಕೆ, ವೈಎಸ್‌ಆರ್‌ಸಿಪಿ ಮತ್ತು ಬಿಜೆಪಿಯ ಮಿತ್ರಪಕ್ಷಗಳು ಸೇರಿದಂತೆ ವಿವಿಧ ಪಕ್ಷಗಳ ಉನ್ನತ ಮೂಲಗಳೊಂದಿಗೆ ಇಂಡಿಯಾ ಟುಡೇ ಮಾತನಾಡಿದ್ದು, ಅವುಗಳ ನಿಲುವು ಏನೆಂಬುದನ್ನು ಪರಿಶೀಲಿಸಿದೆ.

ತಿದ್ದುಪಡಿಗಳನ್ನು ಒಪ್ಪಿಕೊಂಡರೆ ಮಾತ್ರ ಬೆಂಬಲ!..

ಪ್ರಸ್ತುತ ರೂಪದಲ್ಲಿರುವ ಎಫ್‌ಸಿಆರ್‌ಎ (FCRA) ವಿಧೇಯಕದ ಬಗ್ಗೆ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷವೊಂದು ತೀವ್ರ ಕಳವಳ ವ್ಯಕ್ತಪಡಿಸಿದೆ. ತಮ್ಮ ಮುಖ್ಯ ವೋಟ್ ಬ್ಯಾಂಕ್ ಆಗಿರುವ ಸಂಸ್ಥೆಗಳ ಮೇಲೆ ಈ ಕಾಯ್ದೆಯಿಂದ ಕೆಟ್ಟ ಪರಿಣಾಮ ಬೀರಬಹುದು ಎಂಬ ಆತಂಕ ಆ ಪಕ್ಷಕ್ಕಿದೆ. ನಾವು ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ನಾವು ಹೇಳಿರುವ ತಿದ್ದುಪಡಿಗಳನ್ನು ಸರ್ಕಾರ ಒಪ್ಪಿಕೊಂಡರೆ ಮಾತ್ರ ಬೆಂಬಲಿಸುವ ಬಗ್ಗೆ ಯೋಚಿಸುತ್ತೇವೆ, ಇಲ್ಲವಾದರೆ ಖಂಡಿತವಾಗಿಯೂ ವಿರೋಧಿಸುತ್ತೇವೆ ಎಂದು ಆ ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.
ತಟಸ್ಥವಾಗಿ ಉಳಿಯುವ ಸಾಧ್ಯತೆಯಿದೆಯೇ ಎಂದು ಕೇಳಿದ್ದಕ್ಕೆ, ತಟಸ್ಥವಾಗಿರುವುದು ನಮಗೆ ಆಯ್ಕೆಯಲ್ಲ. ನಾವು ಅದರ ವಿರುದ್ಧ ಮತ ಚಲಾಯಿಸುತ್ತೇವೆ ಅಥವಾ ಬೆಂಬಲಿಸುತ್ತೇವೆ. ಈ ವಿಷಯವು ನಮ್ಮ ಪ್ರಮುಖ ಮತದಾರರ ಬಳಗದ ಮೇಲೆ ಪರಿಣಾಮ ಬೀರುತ್ತದೆ. ಇದು ಅವರಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯವನ್ನು ಮುಟ್ಟುತ್ತದೆ ಎಂದು ಪ್ರತಿಕ್ರಿಯಿಸಲಾಯಿತು.
ಕ್ರಿಶ್ಚಿಯನ್ ಮತ್ತು ಅಲ್ಪಸಂಖ್ಯಾತ ಮತದಾರರು ಈ ಪ್ರಾದೇಶಿಕ ಪಕ್ಷದ ಪ್ರಮುಖ ವೋಟ್ ಬ್ಯಾಂಕ್ ಆಗಿದ್ದಾರೆ. ಪ್ರಸ್ತುತ ರೂಪದಲ್ಲಿರುವ ಎಫ್‌ಸಿಆರ್‌ಎ ವಿಧೇಯಕವು ತಮ್ಮ ಪ್ರಮುಖ ಮತದಾರರಲ್ಲಿ ಆಕ್ರೋಶವನ್ನು ಹುಟ್ಟುಹಾಕಬಹುದು ಎಂಬ ಭಯ ಅವರಲ್ಲಿದೆ. ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ವಿಷಯದಲ್ಲಿ, ಸಂಸತ್ತಿನ ಸೀಟುಗಳಲ್ಲಿ ಶೇಕಡಾ 50 ರಷ್ಟು ಹೆಚ್ಚಳ ನೀಡಲು ಬಿಜೆಪಿ ಸಿದ್ಧವಿದ್ದರೆ ಅವರು ಸರ್ಕಾರದ ಜೊತೆಗಿರಲಿದ್ದಾರೆ. ಆದರೆ ಎಫ್‌ಸಿಆರ್‌ಎ ವಿಚಾರದಲ್ಲಿ ಸರ್ಕಾರವನ್ನು ಬೆಂಬಲಿಸುವುದು ಅಸಾಧ್ಯದ ಮಾತಾಗಿದೆ.

ದಾನಿಯನ್ನು ಅನುಮಾನಿಸುವುದು ಏಕೆ..? 

ಎನ್‌ಸಿಪಿ-ಎಸ್‌ಪಿ ಮತ್ತು ಡಿಎಂಕೆ ಮೂಲಗಳು ಪ್ರಸ್ತುತ ರೂಪದಲ್ಲಿರುವ ವಿಧೇಯಕವನ್ನು ತಾವು ವಿರೋಧಿಸುವುದಾಗಿ ಮತ್ತು ಅದನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಬೇಕೆಂದು ಬಯಸುವುದಾಗಿ ಸ್ಪಷ್ಟಪಡಿಸಿವೆ. ಈ ಎಫ್‌ಸಿಆರ್‌ಎ ಮಸೂದೆಗೆ ಹೆಚ್ಚಿನ ಚರ್ಚೆಯ ಅಗತ್ಯವಿದೆ. ಪ್ರತಿಯೊಬ್ಬ ದಾನಿಯನ್ನೂ ಅನುಮಾನಿಸುವುದು ಏಕೆ..? ಎಂದು ಎನ್‌ಸಿಪಿ-ಎಸ್‌ಪಿಯ ಉನ್ನತ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.
ದಾನದ ಹಣವನ್ನು ನಮ್ಮ ಮಕ್ಕಳ ಶಿಕ್ಷಣಕ್ಕೂ ಬಳಸಲಾಗುತ್ತಿದೆ. ಪ್ರತಿಯೊಬ್ಬ ದಾನಿ ಮತ್ತು ಪ್ರತಿಯೊಂದು ಸಂಸ್ಥೆಯನ್ನು ಅನುಮಾನಿಸಲು ಯಾವುದೇ ಕಾರಣವಿಲ್ಲ. ಶಿಕ್ಷಣ ಕ್ಷೇತ್ರ, ಆಸ್ಪತ್ರೆಗಳು ಮತ್ತು ಇತರ ಪ್ರಮುಖ ಕಲ್ಯಾಣ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅನೇಕ ಒಳ್ಳೆಯ ಸಂಸ್ಥೆಗಳಿವೆ. ಈ ಮಸೂದೆಯನ್ನು ತರುವ ಮೂಲಕ ಎಲ್ಲರನ್ನೂ ಸಂಶಯದ ಕಣ್ಣಿನಿಂದ ನೋಡಲಾಗುತ್ತಿದೆ ಎಂದು ಎನ್‌ಸಿಪಿ-ಎಸ್‌ಪಿ ಸಂಸದರು ಹೇಳಿದ್ದಾರೆ.
ಎನ್‌ಸಿಪಿ-ಎಸ್‌ಪಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸಬಹುದೇ ಎಂದು ಕೇಳಿದಾಗ, ಸರ್ಕಾರವು ಶಾಸಕರೊಂದಿಗೆ ಕರಡು ಪ್ರತಿಯನ್ನು ಸಹ ಹಂಚಿಕೊಳ್ಳದಿರುವಾಗ ನಿರ್ಧಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಅವರು ಪ್ರತಿಪಾದಿಸಿದರು.

ಶಿಕ್ಷಿಸಲು ದಾರಿ ಮಾಡಿಕೊಡಬಾರದು ಎಂದ ಡಿಎಂಕೆ ಸಂಸದ

ತಮಿಳುನಾಡು ಚುನಾವಣೆಯ ನಂತರ ಕಾಂಗ್ರೆಸ್‌ನೊಂದಿಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಡಿಎಂಕೆ ಕೂಡ ಎಫ್‌ಸಿಆರ್‌ಎ ಮಸೂದೆಯನ್ನು ವಿರೋಧಿಸುತ್ತಿದೆ. ಇದು ಅಲ್ಪಸಂಖ್ಯಾತ ಸಂಸ್ಥೆಗಳ ಮೇಲಿನ ದ್ವೇಷದ ದಾಳಿಗೆ ಹಾದಿ ಮಾಡಿಕೊಡಬಹುದು ಎಂದು ಡಿಎಂಕೆಯ ಹಿರಿಯ ನಾಯಕರೊಬ್ಬರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಪ್ರಸ್ತುತ ರೂಪದಲ್ಲಿರುವ ಈ ಮಸೂದೆಯು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಪಡಿಸಲು ನೆರವಾಗುತ್ತದೆ. ಇದು ಶೈಕ್ಷಣಿಕ ಸಂಸ್ಥೆಗಳು, ದತ್ತಿ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಮೇಲಿನ ದಾಳಿಗೆ ಬಾಗಿಲು ತೆರೆಯಬಹುದು. ವಿವಾದದಲ್ಲಿದ್ದರೂ ಸಹ ಎಫ್‌ಸಿಆರ್‌ಎ ಅಡಿಯಲ್ಲಿ ಹಣ ಪಡೆಯುವ ಯಾವುದೇ ಸಂಸ್ಥೆಗಳ ಗತಕಾಲದ ಸ್ವತ್ತುಗಳನ್ನು ಜಪ್ತಿ ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುವ ನಿಬಂಧನೆಗಳು ಈ ಮಸೂದೆಯಲ್ಲಿವೆ. ಅದನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಡಿಎಂಕೆ ನಾಯಕ ಹೇಳಿದ್ದಾರೆ.
ಎನ್‌ಜಿಒಗಳು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿವೆ. ಇಂತಹ ಕಾಯ್ದೆಗಳ ಮೂಲಕ ನೀವು ಅವರನ್ನು ಬ್ಲಾಕ್‌ಮೇಲ್ ಮಾಡಲು ಅಥವಾ ಕಷ್ಟಕ್ಕೆ ಸಿಲುಕಿಸಲು ಸಾಧ್ಯವಿಲ್ಲ. ಕೆಲವು ಬದಲಾವಣೆಗಳು ಅಗತ್ಯವಿದ್ದರೆ ಮಾಡಿ, ಆದರೆ ಎಲ್ಲರನ್ನೂ ಶಿಕ್ಷಿಸಲು ದಾರಿ ಮಾಡಿಕೊಡಬಾರದು ಎಂದು ಡಿಎಂಕೆ ಸಂಸದರು ಹೇಳಿದ್ದಾರೆ. ಮತ್ತೊಬ್ಬ ಡಿಎಂಕೆ ನಾಯಕ ಇಂಡಿಯಾ ಟುಡೇಗೆ ಮಾತನಾಡಿ, ನಾವು ಕೆಲವು ತಿದ್ದುಪಡಿಗಳನ್ನು ತರಲಿದ್ದೇವೆ. ಮಸೂದೆಯ ಪ್ರಸ್ತುತ ರೂಪದ ಬಗ್ಗೆ ನಮಗೆ ಅಭ್ಯಂತರವಿದೆ. ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳು ಮಸೂದೆಯ ಹಲವು ನಿಯಮಗಳ ಬಗ್ಗೆ ಆಕ್ಷೇಪಣೆಗಳನ್ನು ಹೊಂದಿವೆ. ನಾವು ಇದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಎಫ್‌ಸಿಆರ್‌ಎ ಮಸೂದೆಯನ್ನು ಬಹಿರಂಗವಾಗಿ ವಿರೋಧಿಸಿ, ನಂತರ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಬಿಜೆಪಿಯ ಪರವಾಗಿ ನಿಂತರೆ ಡಿಎಂಕೆ ಮತ್ತು ವೈಎಸ್‌ಆರ್‌ಸಿಪಿಯಂತಹ ಪಕ್ಷಗಳು ವಿಚಿತ್ರ ಪರಿಸ್ಥಿತಿಗೆ ಸಿಲುಕಲಿವೆ. ಈ ರಾಜಕೀಯ ಸನ್ನಿವೇಶ ಮತ್ತು ಪರಿಣಾಮಗಳನ್ನು ಸಹ ಆ ಪಕ್ಷಗಳು ಪರಿಗಣಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಎಫ್‌ಸಿಆರ್‌ಎ ವಿರುದ್ಧ ಇಂಡಿಯಾ ಒಕ್ಕೂಟದ ಹೋರಾಟ!

ಈ ಮಧ್ಯೆ, ಇಂಡಿಯಾ ಒಕ್ಕೂಟದ ಪಕ್ಷಗಳು ಸಂಸತ್ತಿನಲ್ಲಿ ಎಫ್‌ಸಿಆರ್‌ಎ ವಿರುದ್ಧ ತೀವ್ರ ಹೋರಾಟ ನಡೆಸಲು ಸಜ್ಜಾಗುತ್ತಿವೆ. ಕಾಂಗ್ರೆಸ್ ರಾಜ್ಯಸಭಾ ಸಂಸದ ಸೈಯದ್ ನಸೀರ್ ಹುಸೇನ್ ಇಂಡಿಯಾ ಟುಡೇಗೆ ಮಾತನಾಡಿ, ಹಲವು ಕಾರಣಗಳಿಗಾಗಿ ಕಾಂಗ್ರೆಸ್ ಎಫ್‌ಸಿಆರ್‌ಎ ಮಸೂದೆಯನ್ನು ವಿರೋಧಿಸಲಿದೆ ಎಂದು ತಿಳಿಸಿದ್ದಾರೆ. ಕೇರಳದ ಅವರ ಸಹೋದ್ಯೋಗಿಗಳು, ಪ್ರಸ್ತಾಪಿತ ತಿದ್ದುಪಡಿಗಳಿಂದ ರಾಜ್ಯದ ಎನ್‌ಜಿಒಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬೆಟ್ಟು ಮಾಡಿದ್ದಾರೆ. ಆಸ್ತಿಗಳ ವಿರುದ್ಧ ಪೂರ್ವಾಪರ ಕ್ರಮ ಕೈಗೊಳ್ಳಲು ಅವಕಾಶ ನೀಡುವುದು ಮತ್ತು ಎಫ್‌ಸಿಆರ್‌ಎ ನಿಧಿ ಪಡೆಯುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಶಾಹಿಗೆ ವ್ಯಾಪಕ ಅಧಿಕಾರ ನೀಡುವುದು ಅವರ ಪ್ರಮುಖ ಕಳವಳವಾಗಿದೆ.

ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಲೆಕ್ಕಾಚಾರ!

ಮಹಿಳಾ ಮೀಸಲಾತಿ ಚೌಕಟ್ಟಿನೊಂದಿಗೆ ಸಂವಿಧಾನ ತಿದ್ದುಪಡಿಯಾಗಿ ತರಲಾದ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾಪವನ್ನು ಸಂಸತ್ತಿನ ಕಳೆದ ಅಧಿವೇಶನದಲ್ಲಿ ಯುನೈಟೆಡ್ ವಿಪಕ್ಷಗಳು ಸೋಲಿಸಿದ್ದವು.
ಈಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ನಂತರ ರಾಜಕೀಯ ಲೆಕ್ಕಾಚಾರಗಳು ಬದಲಾಗಿವೆ. ತೃಣಮೂಲ ಕಾಂಗ್ರೆಸ್‌ನಲ್ಲಿ ಒಡಕು ಉಂಟಾಗಿದ್ದು, ಎನ್‌ಸಿಪಿಐ ರಚನೆ ಮತ್ತು ಆಪರೇಷನ್ ಟೈಗರ್ ಯಶಸ್ಸು ಎನ್‌ಡಿಎ ಬಲವನ್ನು ಹೆಚ್ಚಿಸಿದೆ. ಈಗ ಸಂಖ್ಯೆಗಳು ಹೆಚ್ಚು ಅನುಕೂಲಕರವಾಗಿ ಕಂಡುಬರುತ್ತಿರುವುದರಿಂದ, ಬಿಜೆಪಿ ಮುಂಬರುವ ಆರು ತಿಂಗಳೊಳಗೆ ಸಂಸತ್ತಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಮತ್ತೊಂದು ಪ್ರಯತ್ನ ಮಾಡಬಹುದು. ಈ ಯೋಜನೆಯು ಈಗ ಎಂದಿಗಿಂತಲೂ ಹೆಚ್ಚು ಸಾಕಾರಗೊಳ್ಳುವಂತೆ ಕಾಣುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net