ಭಾರತ ಆರ್ಥಿಕ ವಿಪತ್ತಿನಲ್ಲಿದೆ ಎಂಬ ರಾಹುಲ್ ಹೇಳಿಕೆ: ವಿದೇಶಕ್ಕೆ ಹೋಗಿ ಅವಮಾನ ಮಾಡುವುದೇ ಇವರ ಕಾಯಕ ಎಂದು ಬಿಜೆಪಿ ವಾಗ್ದಾಳಿ | BJP slams Rahul

ಭಾರತ ಆರ್ಥಿಕ ವಿಪತ್ತಿನಲ್ಲಿದೆ ಎಂಬ ರಾಹುಲ್ ಹೇಳಿಕೆ: ವಿದೇಶಕ್ಕೆ ಹೋಗಿ ಅವಮಾನ ಮಾಡುವುದೇ ಇವರ ಕಾಯಕ ಎಂದು ಬಿಜೆಪಿ ವಾಗ್ದಾಳಿ | BJP slams Rahul
Published on: 

ನವದೆಹಲಿ: ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ (BJP slams Rahul) ವ್ಯಕ್ತಪಡಿಸಿದ್ದಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ ರಾಹುಲ್​, ಭಾರತವು ಆರ್ಥಿಕ ವಿಪತ್ತಿನ ಮೇಲೆ ಕುಳಿತಿದೆ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೇಸರಿ ಕಲಿಗಳು, ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲಾ ದೇಶದ ಪ್ರಗತಿ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದಲ್ಲಿನ ನಿರುದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ಕಳವಳ ವ್ಯಕ್ತಪಡಿಸುತ್ತಾ, ಭಾರತವು ಒಂದು ದೊಡ್ಡ ಆರ್ಥಿಕ ವಿಪತ್ತಿನ ಮೇಲೆ ಕುಳಿತಿದೆ. ಇದನ್ನು ಮಾಧ್ಯಮಗಳು ಸಹ ನಿರ್ಲಕ್ಷಿಸಬಹುದು, ಆದರೆ, ದೇಶದಲ್ಲಿ ಭಾರಿ ನಿರುದ್ಯೋಗ ಸಮಸ್ಯೆಯಿದೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು ಎನ್ನುವುದನ್ನು ಕಾಂಗ್ರೆಸ್​ ನಾಯಕರು ಹೇಳಿದ್ದರು.

Also Read
ಬೋಫೋರ್ಸ್ ಲಂಚ ಪಡೆದ ಕ್ವಟ್ರೋಚಿ ಬಗ್ಗೆ ಸೋನಿಯಾ ಪುಸ್ತಕದಲ್ಲಿ ಮೌನವೇಕೆ?: ಹಿರಿಯ ಪತ್ರಕರ್ತೆ ಚಿತ್ರಾ ಸುಬ್ರಮಣಿಯಂ ಆಕ್ಷೇಪ! | Bofors Scandal
ಭಾರತ ಆರ್ಥಿಕ ವಿಪತ್ತಿನಲ್ಲಿದೆ ಎಂಬ ರಾಹುಲ್ ಹೇಳಿಕೆ: ವಿದೇಶಕ್ಕೆ ಹೋಗಿ ಅವಮಾನ ಮಾಡುವುದೇ ಇವರ ಕಾಯಕ ಎಂದು ಬಿಜೆಪಿ ವಾಗ್ದಾಳಿ | BJP slams Rahul

ಬಿಜೆಪಿ ನಾಯಕರ ಪ್ರತಿಕ್ರಿಯೆ ಹೀಗಿತ್ತು!

ರಾಹುಲ್ ಗಾಂಧಿ ಈ ಹೇಳಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ಜಗತ್ತು ಗೌರವಿಸುವ ಪ್ರಜಾಪ್ರಭುತ್ವವಾಗಿದೆ ಎಂದು ಜಗತ್ತೇ ಒಪ್ಪಿಕೊಂಡಿರುವ ಈ ಸಮಯದಲ್ಲಿ ಕಾಂಗ್ರೆಸ್​ ನಾಯಕರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಭಂಡಾರಿ ಟೀಕಿಸಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಭಾರತ್ ಶೃಂಗಸಭೆಯಲ್ಲೂ ವಿದೇಶಿಯರಿಂದ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸುವಂತೆ ಮಾಡಲಾಗಿತ್ತು ಎಂದು ಉಲ್ಲೇಖಿಸಿದ ಭಂಡಾರಿ, ರಾಹುಲ್ ಗಾಂಧಿಯವರಿಗೆ ದೇಶದ ಪ್ರಗತಿ ಮತ್ತು ಪ್ರಜಾಪ್ರಭುತ್ವದ ಮೇಲೆ ಇರುವ ದ್ವೇಷದಿಂದಾಗಿ ವಿದೇಶಕ್ಕೆ ಹೋದಾಗಲೆಲ್ಲಾ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬಿಜೆಪಿ ವಕ್ತಾರರು ಆರೋಪಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಪ್ರದೀಪ್ ಭಂಡಾರಿ, ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸಕ್ಕೆ ಹೋದಾಗಲೆಲ್ಲಾ ದೇಶದ ಹಿತಾಸಕ್ತಿ ಮತ್ತು ಗೌರವವನ್ನು ಎತ್ತಿಹಿಡಿಯುತ್ತಾರೆ ಹಾಗೂ ರಾಷ್ಟ್ರಧ್ವಜದ ಘನತೆಯನ್ನು ಗೌರವಿಸುತ್ತಾರೆ. ಆದರೆ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡುವ ಮೂಲಕ ರಾಷ್ಟ್ರಧ್ವಜದ ಆಶಯಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ದಿಲೀಪ್ ಘೋಷ್ ಕಿಡಿ

ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಸಚಿವ ದಿಲೀಪ್ ಘೋಷ್, ಭಾರತದಲ್ಲಿ ರಾಹುಲ್ ಗಾಂಧಿ ಅವರ ಮಾತನ್ನು ಯಾರೂ ಕೇಳುವುದಿಲ್ಲ, ಆದ್ದರಿಂದಲೇ ಅವರು ವಿದೇಶಕ್ಕೆ ಹೋಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕುರುಡನಿಗೆ ಹಗಲಿನಲ್ಲೂ ಕತ್ತಲೆಯೇ ಕಾಣುತ್ತದೆ. ಇಂದು ಭಾರತದ ಜಿಡಿಪಿ ಜಗತ್ತಿಗೆ ಮಾದರಿಯಾಗಿದೆ ಮತ್ತು ನಮ್ಮ ವಿದೇಶಿ ವಿನಿಮಯ ಮೀಸಲು ದಾಖಲೆಯ ಮಟ್ಟದಲ್ಲಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ ಮತ್ತು ಕಳೆದ 12 ವರ್ಷಗಳಿಂದ ಜನರು ಸಂತೋಷವಾಗಿದ್ದಾರೆ. ಕೇವಲ ಅಧಿಕಾರದ ಹಸಿವು ಇರುವವರು ಮಾತ್ರ ಅತೃಪ್ತರಾಗಿದ್ದಾರೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.

ಒಟ್ಟಾರೆಯಾಗಿ, ದೇಶದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಮತ್ತು ಶಿಕ್ಷಣ ನೀತಿಗಳ ಕುರಿತು ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ(ಏಜೆನ್ಸೀಸ್​).