ಬೋಫೋರ್ಸ್ ಲಂಚ ಪಡೆದ ಕ್ವಟ್ರೋಚಿ ಬಗ್ಗೆ ಸೋನಿಯಾ ಪುಸ್ತಕದಲ್ಲಿ ಮೌನವೇಕೆ?: ಹಿರಿಯ ಪತ್ರಕರ್ತೆ ಚಿತ್ರಾ ಸುಬ್ರಮಣಿಯಂ ಆಕ್ಷೇಪ! | Bofors Scandal

ಹಿರಿಯ ಪತ್ರಕರ್ತೆ ಚಿತ್ರಾ ಸುಬ್ರಮಣಿಯಂ ಆಕ್ಷೇಪ!
ಹಿರಿಯ ಪತ್ರಕರ್ತೆ ಚಿತ್ರಾ ಸುಬ್ರಮಣಿಯಂ ಆಕ್ಷೇಪ!
Published on: 

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಬಿಡುಗಡೆಯಾದ ಬೆನ್ನಲ್ಲೇ, ಬೋಫೋರ್ಸ್ ಹಗರಣಕ್ಕೆ (Bofors Scandal) ಸಂಬಂಧಿಸಿದಂತೆ ಹಿರಿಯ ತನಿಖಾ ವರದಿಗಾರ್ತಿ ಚಿತ್ರಾ ಸುಬ್ರಮಣಿಯಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋನಿಯಾ ಗಾಂಧಿ ಅವರು ತಮ್ಮ ಪುಸ್ತಕದಲ್ಲಿ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಕುರಿತು ಮೌನ ವಹಿಸಿದ್ದಾರೆ ಎಂದು ಆರೋಪಿಸಿರುವ ಚಿತ್ರಾ ಸುಬ್ರಮಣಿಯಂ, ಬೋಫೋರ್ಸ್ ಒಪ್ಪಂದದಲ್ಲಿ ಕ್ವಟ್ರೋಚಿ ಲಂಚ ಪಡೆದಿದ್ದರು ಎಂದು ಪ್ರತಿಪಾದಿಸಿದ್ದಾರೆ.

ಬೋಫೋರ್ಸ್ ಹಗರಣವನ್ನು ಬಯಲಿಗೆಳೆದಿದ್ದ ಪತ್ರಕರ್ತೆ ಚಿತ್ರಾ ಸುಬ್ರಮಣಿಯಂ ಅವರು ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಸೋನಿಯಾ ಗಾಂಧಿ ಅವರ ಆಪ್ತರಾಗಿದ್ದ ಒಟ್ಟಾವಿಯೊ ಕ್ವಟ್ರೋಚಿ ಬೋಫೋರ್ಸ್ ಫಿರಂಗಿ ಒಪ್ಪಂದದಲ್ಲಿ ಲಂಚ ಪಡೆದಿದ್ದರು. ಆದರೆ, ಸೋನಿಯಾ ಅವರು ತಮ್ಮ ಬಿಲಾಂಗಿಂಗ್ ಪುಸ್ತಕದಲ್ಲಿ ಕ್ವಟ್ರೋಚಿ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸದೆ ಮೌನ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಪುಸ್ತಕದ ಕುರಿತು ತಾವು ಬೋಫೋರ್ಸ್ ತನಿಖೆಯ ಪ್ರಮುಖ ಮೂಲವಾಗಿದ್ದ ಸ್ವೀಡನ್‌ನ ಮಾಜಿ ಪೊಲೀಸ್ ಮುಖ್ಯಸ್ಥ ಸ್ಟೆನ್ ಲಿಂಡ್‌ಸ್ಟ್ರೋಮ್ ಅವರೊಂದಿಗೆ ಮಾತನಾಡಿದ್ದಾಗ, ಇದಕ್ಕಿಂತ ಹೆಚ್ಚಿನದನ್ನು ನೀವೇನು ನಿರೀಕ್ಷಿಸಲು ಸಾಧ್ಯ? ಎಂದು ಅವರು ಪ್ರತಿಕ್ರಿಯಿಸಿದ್ದಾಗಿ ಚಿತ್ರಾ ಉಲ್ಲೇಖಿಸಿದ್ದಾರೆ.

Also Read
ಕ್ಯಾಪ್ಟನ್ ಕೈ ಹಿಡಿಯೋದು ಪಕ್ಕಾನಾ? ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾದ ಅಮರಿಂದರ್ ಸಿಂಗ್ ಹೇಳಿದ್ದಿಷ್ಟು! | Amarinder Singh
ಹಿರಿಯ ಪತ್ರಕರ್ತೆ ಚಿತ್ರಾ ಸುಬ್ರಮಣಿಯಂ ಆಕ್ಷೇಪ!

ಕ್ವಟ್ರೋಚಿ ಒಬ್ಬ ಪವರ್ ಬ್ರೋಕರ್!

ತಮ್ಮ ತಂದೆಯವರ ನೆನಪುಗಳನ್ನು ಹಂಚಿಕೊಂಡಿರುವ ಚಿತ್ರಾ ಸುಬ್ರಮಣಿಯಂ, ಕ್ವಟ್ರೋಚಿ ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕ್ಷೇತ್ರದಲ್ಲಿದ್ದ ನನ್ನ ತಂದೆ ದೆಹಲಿಯ ಕ್ವಟ್ರೋಚಿ ನಿವಾಸದಲ್ಲಿ ನಡೆದ ಔತಣಕೂಟಗಳಲ್ಲಿ ಭಾಗವಹಿಸಿದ್ದರು. ಅಲ್ಲಿ ಕ್ವಟ್ರೋಚಿ ಮತ್ತು ಗಾಂಧಿ ಕುಟುಂಬದವರು ಒಟ್ಟಿಗಿರುವ ಫೋಟೋಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಗಿತ್ತು. ಆ ಇಟಲಿ ಪ್ರಜೆ ಅಧಿಕಾರಿಗಳ ವಲಯದಲ್ಲಿ ಪವರ್ ಬ್ರೋಕರ್ ಎಂದೇ ಗುರುತಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಭಾರತದ ಒಪ್ಪಂದವನ್ನು ಕೊಡಿಸುವುದಾಗಿ ಕ್ವಟ್ರೋಚಿ ಬೋಫೋರ್ಸ್ ಕಂಪನಿಗೆ ಭರವಸೆ ನೀಡಿದ್ದರು ಎಂದು ಆರೋಪಿಸಿರುವ ಅವರು, ಈಗ ದೇಶದ ಜನರಿಗೆ ಯಾವುದೇ ಲಂಚ ಪಾವತಿಯಾಗಿಲ್ಲ ಎಂದು ನಂಬಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ದೆಹಲಿ ಮಾಧ್ಯಮಗಳ ವಿರುದ್ಧವೂ ಅಸಮಾಧಾನ

ಇದೇ ವೇಳೆ ದೆಹಲಿಯ ಮುಖ್ಯವಾಹಿನಿ ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆಯೂ ಚಿತ್ರಾ ಸುಬ್ರಮಣಿಯಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಂಧಿ ಕುಟುಂಬವನ್ನು ಗೌರವಿಸಬೇಕು ಎಂಬ ಅಲಿಖಿತ ನಿಯಮವನ್ನು ದೆಹಲಿಯ ಮಾಧ್ಯಮಗಳು ಒಪ್ಪಿಕೊಂಡಂತಿದೆ ಎಂದಿರುವ ಅವರು, ಪತ್ರಕರ್ತರು ಸತ್ಯವನ್ನು ಹೇಳದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದ್ದಾರೆ. ಬಿಲಾಂಗಿಂಗ್ ಪುಸ್ತಕವು ಕೇವಲ ಆತ್ಮಚರಿತ್ರೆಯಲ್ಲ, ಅದು ರಾಷ್ಟ್ರೀಯ ಭದ್ರತೆಗೆ ಹೇಗೆ ಧಕ್ಕೆ ತರಲಾಯಿತು ಮತ್ತು ಭಾರತೀಯರಿಗೆ ಹೇಗೆ ವಂಚನೆಯಾಯಿತು ಎಂಬುದರ ಪ್ರತಿಬಿಂಬವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳು ಬಹಿರಂಗಗೊಂಡಂತೆ ಸತ್ಯ ಹೊರಬರಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ಕ್ಲೀನ್ ಚಿಟ್ ನೀಡುವ ಪ್ರವೃತ್ತಿ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜೀವ್ ಗಾಂಧಿ ಅವರ ಪ್ರಧಾನಿ ಅವಧಿಯಲ್ಲಿ ಭಾರಿ ರಾಜಕೀಯ ಬಿರುಗಾಳಿಗೆ ಕಾರಣವಾಗಿದ್ದ ಬೋಫೋರ್ಸ್ ಫಿರಂಗಿ ಹಗರಣದ ಕುರಿತು ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜೀವ್ ಗಾಂಧಿ ವಿರುದ್ಧದ ವಿಪಕ್ಷಗಳ ಈ ಅಭಿಯಾನದ ಹಿಂದೆ ಒಂದು ಕಾರ್ಪೊರೇಟ್ ಸಂಸ್ಥೆ ಹಾಗೂ ಕಾಂಗ್ರೆಸ್ ಪಕ್ಷದೊಳಗಿನ ಕೆಲವರ ಕೈವಾಡವಿತ್ತು ಎಂದು ಅವರು ಆರೋಪಿಸಿದ್ದಾರೆ.

1987ರಲ್ಲಿ ಸ್ವೀಡನ್‌ನಿಂದ ಬೋಫೋರ್ಸ್ ಫಿರಂಗಿಗಳನ್ನು ಖರೀದಿಸುವಾಗ ಮಧ್ಯವರ್ತಿಗಳಿಗೆ ಕಮಿಷನ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಶಸ್ತ್ರಾಸ್ತ್ರ ಖರೀದಿಯಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ ಎಂದು ರಾಜೀವ್ ಗಾಂಧಿ ನಂಬಿದ್ದರು ಎಂದು ಸೋನಿಯಾ ತಿಳಿಸಿದ್ದಾರೆ. ಆದರೆ, ನಂತರದ ತನಿಖೆಗಳಲ್ಲಿ ಮಧ್ಯವರ್ತಿಗಳ ಭಾಗಿ ಇರುವುದು ಸಾಬೀತಾಗಿ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ರಾಜೀವ್ ಗಾಂಧಿ ಸ್ವತಃ ಸ್ವೀಡಿಷ್ ಅಧಿಕಾರಿಗಳಿಂದ ತನಿಖೆಗೆ ಕೋರಿದ್ದಲ್ಲದೆ, ವಿಪಕ್ಷ ಸದಸ್ಯರನ್ನೊಳಗೊಂಡ ಜಂಟಿ ಸಂಸದೀಯ ಸಮಿತಿಯನ್ನು (JPC) ರಚಿಸಿದ್ದರು. 2004ರ ಫೆಬ್ರವರಿ 4ರಂದು ದೆಹಲಿ ಹೈಕೋರ್ಟ್ ರಾಜೀವ್ ಗಾಂಧಿ ವಿರುದ್ಧದ ಎಲ್ಲಾ ಆರೋಪಗಳನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು. (ಏಜೆನ್ಸೀಸ್​).