ಬಿಜೆಪಿಯಿಂದ ಜನಾದೇಶ ಕಳ್ಳತನ; ಕ್ಷುಲ್ಲಕ ರಾಜಕೀಯ ಬದಿಗಿಡಿ; ಟಿಎಂಸಿ ಸೋಲಿನ ಖುಷಿ ಪಡುತ್ತಿದ್ದ ಕಾಂಗ್ರೆಸ್ಸಿಗರಿಗೆ ರಾಹುಲ್ ಗಾಂಧಿ ಎಚ್ಚರಿಕೆ | Rahul Gandhi

ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿ
ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿ
Published on
ನವದೆಹಲಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳಷ್ಟು ಲೂಟಿ ಮಾಡಿದೆ ಎಂದು ಆರೋಪಿಸಿರುವ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಬೆಂಬಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಂಗಾಳ ಮತ್ತು ಅಸ್ಸಾಂನಲ್ಲಿ ಜನಾದೇಶ ಕಳ್ಳತನವಾಗಿದೆ, ಟಿಎಂಸಿ ಸೋಲನ್ನು ನೋಡಿ ಖುಷಿ ಪಟ್ಟು ಕ್ಷುಲ್ಲಕ ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್​ ನಾಯಕರು ಮತ್ತು ಇತರರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್‌ನ ಕೆಲವರು ಮತ್ತು ಇತರರು ಮಮತಾ ಬ್ಯಾನರ್ಜಿಯವರ ಟಿಎಂಸಿಯ ಸೋಲಿನ ಬಗ್ಗೆ ಸಂತೋಷಪಡುತ್ತಿದ್ದಾರೆ. ಅವರು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕು. ಅಸ್ಸಾಂ ಮತ್ತು ಬಂಗಾಳದ ಜನಾದೇಶದ ಕಳ್ಳತನವು ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡುವ ತನ್ನ ಧ್ಯೇಯದಲ್ಲಿ ಬಿಜೆಪಿಯ ದೊಡ್ಡ ಹೆಜ್ಜೆಯಾಗಿದೆ. ಕ್ಷುಲ್ಲಕ ರಾಜಕೀಯವನ್ನು ಬದಿಗಿಡಿ, ಇದು ಒಂದು ಅಥವಾ ಇನ್ನೊಂದು ಪಕ್ಷದ ಬಗ್ಗೆ ಅಲ್ಲ. ಇದು ಭಾರತದ ವಿಷಯ ಎಂದು ಹೇಳಿದ್ದಾರೆ.
ಇನ್ನೊಂದು ಟ್ವೀಟ್​ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ತಾವು ಸಹಮತ ವ್ಯಕ್ತಪಡಿಸುವುದಾಗಿ ಅವರು,ಚುನಾವಣಾ ಆಯೋಗದ ಬೆಂಬಲದೊಂದಿಗೆ ಬಿಜೆಪಿ ಅಸ್ಸಾಂ ಮತ್ತು ಬಂಗಾಳ ಚುನಾವಣೆಯನ್ನು ಕದ್ದಿದೆ. ಮಮತಾ ಅವರ ಮಾತನ್ನು ನಾವು ಒಪ್ಪುತ್ತೇವೆ. ಬಂಗಾಳದಲ್ಲಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಕದ್ದಿದ್ದಾರೆ. ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರ ಹಾಗೂ 2024ರ ಸಾರ್ವತ್ರಿಕ ಚುನಾವಣೆಗಳನ್ನು ಉಲ್ಲೇಖಿಸಿ, ಹಿಂದಿನ ಚುನಾವಣೆಗಳಲ್ಲಿ ಇದೇ ರೀತಿಯ ಮಾದರಿಗಳು ಕಂಡುಬಂದಿವೆ ಎಂದು ಆರೋಪಿಸಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದೇನು?

ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತಮ್ಮ ಪಕ್ಷ ಟಿಎಂಸಿ ಮತ್ತು ತಮ್ಮ ಕ್ಷೇತ್ರದ ಸೋಲನ್ನು ಒಪ್ಪಿಕೊಳ್ಳದ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ಚುನಾವಣಾ ಆಯೋಗ ಅದಕ್ಕೆ ಸಹಾಯ ಮಾಡಿದೆ. ಅದು ಸ್ವತಂತ್ರ ಸಂಸ್ಥೆ ಅಲ್ಲ, ಬಿಜೆಪಿ ಆಯೋಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 04ರಂದು ಪ್ರಕಟಗೊಂಡ ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಆಡಳಿರೂಢ ಟಿಎಂಸಿಯನ್ನು ಕಿತ್ತೊಗೆದು ಮೊದಲ ಬಾರಿಗೆ ಬಿಜೆಪಿ ಅಧಿಕಾರವನ್ನು ಪಡೆದುಕೊಂಡಿದ್ದು, ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಅಧಿಕಾರವನ್ನು ವಶಕ್ಕೆ ಪಡೆದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net