

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ವಿಫಲ ಉತ್ಪನ್ನ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ.
ಎನ್‌ಡಿಟಿವಿ ವರ್ಲ್ಡ್ ಸಮಿಟ್‌ನಲ್ಲಿ ಮಾತನಾಡಿರುವ ತರೂರ್, ಕಾಂಗ್ರೆಸ್ ಪದೇ ಪದೇ ವಿಫಲ ಉತ್ಪನ್ನವನ್ನು ಮಾರುಕಟ್ಟೆಗೆ ತರುತ್ತಿದೆ ಎಂಬ ಪ್ರಧಾನಿ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ರಾಹುಲ್ ಗಾಂಧಿಯವರನ್ನು ಗಂಭೀರವಲ್ಲದ ರಾಜಕಾರಣಿ ಎಂದು ಬಿಂಬಿಸಲು, ಬಿಜೆಪಿ ಆಗಾಗ್ಗೆ ಅವರನ್ನು ವಿಫಲ ಉತ್ಪನ್ನ ಎಂದು ಬಿಂಬಿಸುತ್ತದೆ ಎಂದಿದ್ದಾರೆ.
ಆದರೆ, ರಾಹುಲ್ ಗಾಂಧಿ ಯುವ ಮತದಾರರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದ್ದಾರೆ ಎಂದು ಪ್ರತಿಪಾದಿಸಿರುವ ಅವರು, ಇದಕ್ಕೆ ವ್ಯತಿರಿಕ್ತವಾಗಿ, ಕಳೆದ ಕೆಲವು ತಿಂಗಳುಗಳಲ್ಲಿ ರಾಹುಲ್ ಗಾಂಧಿ ಅವರು ಯುವ ಮತದಾರರಲ್ಲಿ ವಿಶೇಷವಾಗಿ ಒಂದು ದೊಡ್ಡ ಉತ್ಸಾಹವನ್ನು ಹುಟ್ಟುಹಾಕಿದ್ದಾರೆ ಎಂದು ನಾನು ಹೇಳಬಲ್ಲೆ. ಬಿಜೆಪಿಯು ಈ ಬಗ್ಗೆ ಎಚ್ಚೆತ್ತುಕೊಂಡು ಗಮನ ಹರಿಸುವುದು ಅವರಿಗೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ವಾಸ್ತವವಾಗಿ, ಬಿಜೆಪಿಯವರು ರಾಹುಲ್ ಗಾಂಧಿ ಅವರತ್ತ ಗಮನ ಹರಿಸಿರುವ ಕಾರಣದಿಂದಲೇ ಅವರನ್ನು ಈ ರೀತಿಯಲ್ಲಿ ರಾಕ್ಷಸರಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗುರುವಾರ ಇದೇ ಎನ್‌ಡಿಟಿವಿ ವರ್ಲ್ಡ್ ಸಮಿಟ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಪಕ್ಷವು ಎಷ್ಟು ಕಾಲದವರೆಗೆ ಒಂದು ವಿಫಲ ಉತ್ಪನ್ನವನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ್ದರು.
ಒಂದು ವರ್ಷದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಲ್ಲಿ ನಡೆಯುವ ಉಡಾವಣೆಗಳ ಸಂಖ್ಯೆಗಿಂತಲೂ, ಕಾಂಗ್ರೆಸ್ ಪಕ್ಷವು ತನ್ನ ನಾಯಕನನ್ನು (ರಾಜಕೀಯವಾಗಿ) ನೆಲೆಗೊಳಿಸಲು ವರ್ಷವಿಡೀ ನಡೆಸುವ ವಿಫಲ ಪ್ರಯತ್ನಗಳ ಸಂಖ್ಯೆಯೇ ಹೆಚ್ಚು ಎಂದು ಲೇವಡಿ ಮಾಡಿದ್ದರು (ಏಜೆನ್ಸೀಸ್).