

ಭೋಪಾಲ್: ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಗೋವರ್ಧನ ಪೂಜೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಅವರ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮೌಗಂಜ್ ಜಿಲ್ಲೆಯಲ್ಲಿ ಗೋವರ್ಧನ ಪೂಜೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜನಾರ್ದನ್ ಮಿಶ್ರಾ, ಇಂದಿನ ರೈತರು ಹಿಂದಿನವರಂತೆ ಅಲ್ಲ, ಅವರು ಕೇವಲ ಮೂರು ತಿಂಗಳು ಮಾತ್ರ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಉಳಿದ ಒಂಬತ್ತು ತಿಂಗಳು ಇಸ್ಪೀಟ್ ಆಡುವುದು, ಗುಟ್ಕಾ ತಿನ್ನುವುದು, ಮದ್ಯಪಾನ ಮಾಡುವುದು ಮತ್ತು ಗಾಂಜಾ ಸೇದುವುದರಲ್ಲಿ ಕಾಲ ಕಳೆಯುತ್ತಾರೆ ಎಂದು ಹೇಳಿದ್ದಾರೆ.
36 ಸೆಕೆಂಡುಗಳ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಿಶ್ರಾ ಅವರ ರೇವಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರೇವಾ ಮತ್ತು ಮೌಗಂಜ್ ಜಿಲ್ಲೆಗಳ ರೈತರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ. ಸಂಯುಕ್ತ ಕಿಸಾನ್ ಮೋರ್ಚಾ ಮಂಗಳವಾರ(ನ. 10) ರೇವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿದೆ.
ಇನ್ನೂ 70 ವರ್ಷದ ಬಿಜೆಪಿ ಸಂಸದ ಮಿಶ್ರಾ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ರೇವಾ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ ಪ್ರತಿಭಟಿಸುವವರು ತಮಗೆ ಶುದ್ಧ ಪೆಟ್ರೋಲ್ ಮಾತ್ರ ಬೇಕು ಎಂದು ಕೇಳುತ್ತಿದ್ದಾರೆ. ದೇಶದಲ್ಲಿ ಶುದ್ಧ ಪೆಟ್ರೋಲ್ ಇಲ್ಲದಿರುವಾಗ, ಅದು ಎಲ್ಲಿಂದ ಬರುತ್ತದೆ? ನಿಮ್ಮಪ್ಪನ ಮನೆಯಿಂದ ಬರುತ್ತದೆಯೇ ಎಂದು ಪ್ರಶ್ನಿಸಿ ವಿವಾದಕ್ಕೆ ಗುರಿಯಾಗಿದ್ದರು (ಏಜೆನ್ಸೀಸ್).