

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ದೂರಿನ ಮೇರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಜಿ ರಾ ಮುಖ್ಯಸ್ಥ ಸಮಂತ್ ಗೋಯೆಲ್ ಹಾಗೂ ಇತರೆ ಭಾರತೀಯ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ತಮ್ಮ ಹತ್ಯೆಗೆ ಭಾರತೀಯ ಅಧಿಕಾರಿಗಳು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಪನ್ನು ಸಲ್ಲಿಸಿದ್ದ ಸಿವಿಲ್ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಸಮನ್ಸ್ ಜಾರಿ ಮಾಡಿದೆ. ಕಳೆದ ತಿಂಗಳು 9ರಂದು ಅಮೆರಿಕ ವಿದೇಶಾಂಗ ಇಲಾಖೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸಮನ್ಸ್ ಕಳುಹಿಸಿದೆ ಎನ್ನಲಾಗಿದೆ.
ಪ್ರಕರಣದಲ್ಲಿನ ಆರೋಪಗಳಲ್ಲಾಗಲಿ ಅಥವಾ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಾಗಲಿ ಅಮೆರಿಕ ಸರ್ಕಾರ ಯಾವುದೇ ಪಾತ್ರ ವಹಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಅಮೆರಿಕಾ ವಿದೇಶಾಂಗ ಇಲಾಖೆ, ವಿದೇಶಿ ಸಾರ್ವಭೌಮ ಆಸ್ತಿ ಕಾಯ್ದೆ ಅಡಿಯಲ್ಲಿ ನ್ಯಾಯಾಲಯದ ಮನವಿ ಮೇರೆಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿಸಿದೆ.
ನಿಷೇಧಿತ ಸಂಘಟನೆಯಾದ 'ಸಿಖ್ಸ್ ಫಾರ್ ಜಸ್ಟಿಸ್' ನ ಕಾನೂನು ಸಲಹೆಗಾರನಾಗಿರುವ ಪನ್ನು, ಅಮೆರಿಕ ಪ್ರಜೆಯಾಗಿದ್ದಾನೆ. ಮತ್ತು ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಿ ಪರಿಹಾರ ಕೋರಿದ್ದಾನೆ. ಈ ಸಂಚಿನ ಹಿಂದಿನ ಸೂತ್ರಧಾರರು ಭಾರತೀಯ ಅಧಿಕಾರಿಗಳೇ ಎಂದು ದೂರಿದ್ದಾನೆ.
ಭಾರತೀಯ ಅಧಿಕಾರಿಗಳಿಗೆ ಅಮೆರಿಕ ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವುದನ್ನು ಭಾರತದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಮತ್ತು ಅಜಿತ್ ದೋವಲ್ ಮತ್ತು ಸಮಂತ್ ಗೋಯಲ್ ವಿರುದ್ಧ ಪನ್ನು ಮಾಡಿರುವ ಆರೋಪಗಳನ್ನು ತಿರಸ್ಕರಿಸಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಮಾಡಿರುವ ಆರೋಪಗಳು ದುರುದ್ದೇಶಪೂರಿತ ಮತ್ತು ಸುಳ್ಳು ಎಂದು ತಿಳಿಸಿದ್ದಾರೆ. ಆಧಾರರಹಿತ ಕಾನೂನು ಮೊಕದ್ದಮೆಗಳನ್ನೂ ನಾವು ತಳ್ಳಿಹಾಕುತ್ತೇವೆ. ಭಾರತದಲ್ಲಿ ನ್ಯಾಯಾಂಗ ದಾಖಲೆಗಳನ್ನು ತಲುಪಿಸುವ ಪ್ರಕ್ರಿಯೆಯು, ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯದ ಮೂಲಕವೇ ನಡೆಯಬೇಕು ಎಂದಿದ್ದಾರೆ (ಏಜೆನ್ಸೀಸ್).