ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಅಂಗದನ ಕಾಲು ಇದ್ದಂತೆ, ಯಾರೂ ಅಲುಗಾಡಿಸಲು ಆಗಲ್ಲ: ಅಮಿತ್ ಷಾ | Amit Shah

ಗೃಹ ಸಚಿವ ಅಮಿತ್​ ಷಾ
ಗೃಹ ಸಚಿವ ಅಮಿತ್​ ಷಾ
Published on: 

ಲಖನೌ: ಮುಂಬರುವ ಉತ್ತರ ಪ್ರದೇಶದ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೇರುವುದು ಶತಸಿದ್ಧ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ (Amit Shah), ನಮ್ಮ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವ ಷಾ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವು ರಾಮಾಯಣದ ಅಂಗದನ ಕಾಲು ಇದ್ದಂತೆ, ಅದನ್ನು ಅಲುಗಾಡಿಸಲು ಅಥವಾ ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ, ರಾಜ್ಯದಲ್ಲಿ ಸತತ ಮೂರನೇ ಬಾರಿಗೆ ಕೇಸರಿ ಧ್ವಜ ಹಾರಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದರು.

ಇದೇ ವೇಳೆ ಇತಿಹಾಸದ ಕರಾಳ ದಿನವಾದ 1990ರ ಅಕ್ಟೋಬರ್ 30ರಂದು ಅಯೋಧ್ಯೆಯಲ್ಲಿ ರಾಮಭಕ್ತರ ಮೇಲೆ ನಡೆದ ಗೋಲಿಬಾರ್ ಘಟನೆಯನ್ನು ಅಮಿತ್ ಷಾ ಉಲ್ಲೇಖಿಸಿದ್ದು, ಅಂದು ಮುಗ್ಧ ರಾಮಭಕ್ತರ ಮೇಲೆ ಗುಂಡು ಹಾರಿಸಿದ ವಿಪಕ್ಷಗಳು ಇಂದು ಯಾವ ನೈತಿಕ ಆಧಾರದ ಮೇಲೆ ಮತ್ತೆ ಸರ್ಕಾರ ರಚಿಸುವ ಬಗ್ಗೆ ಮಾತನಾಡುತ್ತಿವೆ ಎಂದು ಪ್ರಶ್ನಿಸುತ್ತಾ, ವಿಪಕ್ಷಗಳು ನಡೆಸಿದ ಆ ದೌರ್ಜನ್ಯವನ್ನು ಈ ರಾಜ್ಯದ ಜನರ ಮುಂದಿನ ಮೂರನೇ ತಲೆಮಾರಿನವರೂ ಕೂಡ ಎಂದಿಗೂ ಮರೆಯುವುದಿಲ್ಲ ಮತ್ತು ಕ್ಷಮಿಸುವುದಿಲ್ಲ ಎಂದರು.

Also Read
ದೇಶಕ್ಕೆ ಸಂಕಷ್ಟ ಬಂದ್ರೆ, ವಿಪಕ್ಷಗಳಿಗೆ ಸಂಭ್ರಮ!...ಮೋದಿ ಮೇಲಿನ ದ್ವೇಷಕ್ಕೆ ಜನರಲ್ಲಿ ಆತಂಕ ಸೃಷ್ಟಿಸಬೇಡಿ ಎಂದು ನಮೋ ಆಕ್ರೋಶ | Narendra Modi
ಗೃಹ ಸಚಿವ ಅಮಿತ್​ ಷಾ

ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಧ್ವಂಸಗೊಂಡ ಸಂದರ್ಭದಲ್ಲಿ ತಮ್ಮ ಸರ್ಕಾರದ ಭವಿಷ್ಯದ ಬಗ್ಗೆ ಚಿಂತಿಸದೆ ಅತ್ಯಂತ ದಿಟ್ಟ ಹೆಜ್ಜೆ ಇಟ್ಟಿದ್ದ ದಿವಂಗತ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಐತಿಹಾಸಿಕ ಹೋರಾಟವನ್ನು ಅಮಿತ್ ಷಾ ಈ ಸಂದರ್ಭದಲ್ಲಿ ವಿಶೇಷವಾಗಿ ಸ್ಮರಿಸಿಕೊಂಡರು. ಉತ್ತರ ಪ್ರದೇಶದಲ್ಲಿ ಮುಂಬರುವ ರಾಜಕೀಯ ಸವಾಲುಗಳನ್ನು ಎದುರಿಸಲು ಮತ್ತು ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತನ್ನ ಕಾರ್ಯಕರ್ತರಿಗೆ ಪ್ರಮುಖ ಐದು ಸಂಘಟನಾತ್ಮಕ ಕಾರ್ಯಗಳನ್ನು ನೀಡಲಾಗಿದೆ.

ಬೂತ್ ಮಟ್ಟದ ಸಂಘಟನೆ ಬಲಪಡಿಸುವುದು: ಪಕ್ಷದ ತಳಮಟ್ಟದ ಬೂತ್ ನೆಟ್‌ವರ್ಕ್ ಅನ್ನು ಅತ್ಯಂತ ಬಲಿಷ್ಠಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದು.

ಬೂತ್ ಮಟ್ಟದ ಚಟುವಟಿಕೆಗಳನ್ನು ಹೆಚ್ಚಿಸುವುದು: ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರ ಸಕ್ರಿಯ ಭಾಗವಹಿಸುವಿಕೆ ಹಾಗೂ ನಿರಂತರ ಸಂವಹನವನ್ನು ಖಚಿತಪಡಿಸುವುದು.

ನಿಯಮಿತ ಸಭೆಗಳು ಮತ್ತು ಪರಾಮರ್ಶೆ: ಮಂಡಲ ಹಾಗೂ ಜಿಲ್ಲಾ ಮಟ್ಟದಲ್ಲಿ ನಿಯಮಿತವಾದ ಸಭೆಗಳನ್ನು ನಡೆಸಿ, ಸಂಘಟನೆಯ ಕಾರ್ಯಕ್ಷಮತೆಯನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡುವುದು.

ಸಂಘಟನೆಯ ವಿಸ್ತರಣೆ: ಯುವಕರು, ಮಹಿಳೆಯರು, ಉದ್ಯಮಿಗಳು ಹಾಗೂ ಹೊಸ ಮತದಾರರ ನಡುವೆ ಪಕ್ಷದ ಸಂಪರ್ಕ ಮತ್ತು ವ್ಯಾಪ್ತಿಯನ್ನು ಹೆಚ್ಚು ಮಾಡುವುದು.

ಕಾರ್ಯಕರ್ತರಿಗೆ ತರಬೇತಿ ನೀಡುವುದು: ಸಂಘಟನೆಯನ್ನು ಸೈದ್ಧಾಂತಿಕವಾಗಿ ಹಾಗೂ ಕಾರ್ಯಕ್ಷಮತೆಯಲ್ಲಿ ಬಲಪಡಿಸಲು ಕಾರ್ಯಕರ್ತರಿಗೆ ನಿರಂತರ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು.

ಈ ಪ್ರಮುಖ ಐದು ಕಾರ್ಯಗಳ ಮುಖ್ಯ ಉದ್ದೇಶ ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಗಟ್ಟಿಗೊಳಿಸುವುದಾಗಿದೆ.

ಪಕ್ಷದ ತಳಮಟ್ಟದ ಕಾರ್ಯಕರ್ತರೇ ಬಿಜೆಪಿಯ ನಿಜವಾದ ಯಜಮಾನರು ಎಂದು ಬಣ್ಣಿಸಿದ ಅಮಿತ್​ ಷಾ, ಎಲ್ಲಾ ಕಾರ್ಯಕರ್ತರಿಗೆ ತಮ್ಮ ನಮನಗಳನ್ನು ಅರ್ಪಿಸಿದರು. ಮತ್ತೊಂದೆಡೆ, ವಿಪಕ್ಷಗಳು ಮಾಡುತ್ತಿರುವ ಮತ ಕಳ್ಳತನ ಆರೋಪಗಳ ಕುರಿತು ಸಂಸತ್ತಿನಲ್ಲಿ ಮುಕ್ತ ಚರ್ಚೆ ನಡೆಸುವಂತೆ ಅವರು ಸವಾಲು ಹಾಕಿದರು. ಕ್ರಿಕೆಟ್ ಪಂದ್ಯದಲ್ಲಿ ಸೋತ ತಂಡವೊಂದು ಅಂಪೈರ್ ಮೇಲೆ ಅನಗತ್ಯ ಆರೋಪ ಮಾಡಿದಂತೆ ವಿಪಕ್ಷಗಳು ವರ್ತಿಸುತ್ತಿವೆ ಎಂದು ವ್ಯಂಗ್ಯವಾಡಿದ ಷಾ, ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಕರೆಯಲು ಬಿಜೆಪಿ ಸಂಪೂರ್ಣ ಸಿದ್ಧವಿದೆ ಮತ್ತು ವಿಪಕ್ಷಗಳ ಪ್ರತಿಯೊಂದು ಆರೋಪಕ್ಕೂ ದಾಖಲೆ ಸಮೇತ ಉತ್ತರ ನೀಡಲು ನಾವು ಸಿದ್ಧರಿದ್ದೇವೆ ಎಂದು ಸವಾಲು ಎಸೆದರು(ಏಜೆನ್ಸೀಸ್​).