ದೆಹಲಿ ಘೋಷಣೆ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ: ರಾಜತಾಂತ್ರಿಕ ಗೆಲುವು ಎಂದ ಬಿಜೆಪಿ, ಹಿಜಾಬ್ ಎಳೆತಂದು ಕಾಂಗ್ರೆಸ್​ ವಾಗ್ದಾಳಿ! | BRICS Summit

BRICS Summit | ದೆಹಲಿ ಘೋಷಣೆ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ
BRICS Summit | ದೆಹಲಿ ಘೋಷಣೆ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ
Published on
ನವದೆಹಲಿ: ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ನವದೆಹಲಿ ಘೋಷಣೆಯು ಶನಿವಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಈ ಮಹತ್ವದ ಘೋಷಣೆಯ ಅಂಗೀಕಾರ ಹಾಗೂ ಪಹಲ್ಗಾಮ್ ಉಗ್ರರ ದಾಳಿಯ ಖಂಡನೆಯನ್ನು ಬಿಜೆಪಿಯು ಭಾರತದ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಿದ್ದರೆ, ಕಾಂಗ್ರೆಸ್ ನಾಯಕರು ಶೃಂಗಸಭೆಯನ್ನು ಸರ್ಕಾರ ನಿರ್ವಹಿಸಿದ ರೀತಿಗಾಗಿ ಟೀಕಿಸಿದ್ದಾರೆ.
ಈ ಘೋಷಣೆಯ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, ಅಭಿವೃದ್ಧಿಶೀಲ ಜಗತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಮ್ಮತಿ ಮೂಡಿಸುವ ಭಾರತದ ಬಲವಾದ ಸಂಕಲ್ಪವನ್ನು ಇದು ಪ್ರತಿಬಿಂಬಿಸುತ್ತದೆ. ದೇಶವು ಬ್ರಿಕ್ಸ್ 2026 ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಗ್ಲೋಬಲ್ ಸೌತ್ ಇದರಿಂದ ಮತ್ತಷ್ಟು ಬಲವಾದ ಧ್ವನಿಯನ್ನು ಪಡೆದುಕೊಂಡಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇದೇ ವಿಷಯವಾಗಿ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಪಹಲ್ಗಾಮ್ ಉಗ್ರರ ದಾಳಿಯ ಖಂಡನೆಯು ಭಾರತಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಗೆಲುವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇಲ್ಲಿ ಯಾವುದೇ ಗೊಂದಲ ಅಥವಾ ದ್ವಂದ್ವ ನೀತಿಗಳಿಲ್ಲದೆ, ಪಹಲ್ಗಾಮ್ ವಿಚಾರದಲ್ಲಿ ಇಡೀ ಬ್ರಿಕ್ಸ್ ಒಕ್ಕೂಟವೇ ಒಂದೇ ನಿಲುವಿನಲ್ಲಿ ನಿಂತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಲ್ಲಾ ರೀತಿಯ ಹಿಜಾಬ್​ಗಳನ್ನು ಬಿಜೆಪಿ ಒಪ್ಪಲ್ಲ ಎಂದ ಖೇರಾ!

ಮತ್ತೊಂದೆಡೆ, ಬ್ರಿಕ್ಸ್ ಘೋಷಣೆಯಲ್ಲಿ ಬಂಡುಂಗ್ ಸ್ಪಿರಿಟ್ (1955ರಲ್ಲಿ ಇಂಡೋನೇಷ್ಯಾದ ಬಂಡುಂಗ್ ನಗರದಲ್ಲಿ ನಡೆದ ಏಷ್ಯನ್-ಆಫ್ರಿಕನ್ ಸಮ್ಮೇಳನದಲ್ಲಿ ಹುಟ್ಟಿಕೊಂಡ ಐತಿಹಾಸಿಕ ತತ್ತ್ವ ಮತ್ತು ಸಿದ್ಧಾಂತ) ಪ್ರಸ್ತಾಪವಾಗಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ. ಬಂಡುಂಗ್ ಸಮ್ಮೇಳನದ ಜವಾಹರಲಾಲ್ ನೆಹರೂ ಅವರ ಟಿಪ್ಪಣಿಗಳನ್ನು ಸ್ಮರಿಸಿರುವ ಅವರು, ಹಳೆಯ ಬಾಲಿವುಡ್ ಹಿಟ್ ಹಾಡಾದ ತೂ ಜಹಾ ಚಲೇಗಾ, ಮೇರಾ ಸಾಹಿಯಾ ಸಾಥ್ ಹೋಗಾ (ನೀನು ಎಲ್ಲೇ ಹೋದರೂ, ನನ್ನ ನೆರಳು (ಛಾಯೆ) ನಿನ್ನೊಂದಿಗೇ ಇರುತ್ತದೆ) ಎಂಬುದನ್ನು ನೆನಪಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
ಅಷ್ಟೇ ಅಲ್ಲದೆ, ಶೃಂಗಸಭೆಯ ಹಿನ್ನೆಲೆಯಲ್ಲಿ ನವದೆಹಲಿಯ ಸ್ಲಮ್​ಗಳನ್ನು ಮರೆಮಾಚಲು ಪರದೆಗಳನ್ನು ಬಳಸಿದ್ದಕ್ಕಾಗಿ ಕಾಂಗ್ರೆಸ್ ಸಂಸದ ಪವನ್ ಖೇರಾ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ರೀತಿಯ ಹಿಜಾಬ್​ಗಳನ್ನು ಬಿಜೆಪಿ ಒಪ್ಪಲ್ಲ. ಪ್ರಧಾನಿ ಮೋದಿಯವರ ವೈಫಲ್ಯಗಳನ್ನು ಮುಚ್ಚಿಡುವ ಹಿಜಾಬ್ ಅವರಿಗೆ ಅತ್ಯಂತ ನೆಚ್ಚಿನದ್ದಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನ ಈ ಕಟು ಟೀಕೆಗಳಿಗೆ ತಕ್ಷಣವೇ ತಿರುಗೇಟು ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್, ಜಾಗತಿಕ ಮಟ್ಟದಲ್ಲಿ ಇತರ ದೇಶಗಳು ಭಾರತವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿವೆ. ಆದರೆ ದೇಶದ ವಿರೋಧ ಪಕ್ಷಕ್ಕೆ ಭಾರತದ ಈ ಬೆಳವಣಿಗೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿಯೇ ಅವರು ಇಂತಹ ಜವಾಬ್ದಾರಿ ರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮೋ ರಾಜತಾಂತ್ರಿಕತೆಗೆ ಮನಸೋತ ರವಿಶಾಸ್ತ್ರಿ

ಅತ್ತ ಕಾಂಗ್ರೆಸ್​ ನಾಯಕರು ಬ್ರಿಕ್ಸ್ ಸಮ್ಮೇಳನವನ್ನು ಗುರಿಯಾಗಿಸಿಕೊಂಡು ಸರ್ಕಾರವನ್ನು ಟೀಕಿಸುತ್ತಿದ್ದರೆ, ಇತ್ತ ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಯನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಜೊತೆಯಾಗಿರುವ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಶಾಸ್ತ್ರಿ, ಈ ಐತಿಹಾಸಿಕ ಕ್ಷಣವನ್ನು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಭಾರತ ಸಾಧಿಸಿದ ಅತ್ಯಂತ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಅಷ್ಟೆ ಅಲ್ಲದೇ, ಒಬ್ಬ ಭಾರತೀಯನಾಗಿ ಇಷ್ಟೊಂದು ಹೆಮ್ಮೆ ಎನಿಸಿದ್ದು ಇದೇ ಮೊದಲು. ಅಧ್ಯಕ್ಷ ಪುಟಿನ್, ಅಧ್ಯಕ್ಷ ಷಿ ಮತ್ತು ನಮ್ಮ ಅದ್ಭುತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಾತೆಯ ಮಡಿಲಲ್ಲಿ ಒಟ್ಟಿಗಿದ್ದಾರೆ. ಇಂತಹ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಹಿಂದೆಂದೂ ನೋಡಿರಲಿಲ್ಲ. ಮೋದಿ ಜಿ ಅವರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು ಎಂದು ಶಾಸ್ತ್ರಿ ಬರೆದುಕೊಂಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net