ಒಬ್ಬ ಭಾರತೀಯನಾಗಿ ಇಷ್ಟೊಂದು ಹೆಮ್ಮೆ ಎನಿಸಿದ್ದು ಇದೇ ಮೊದಲು, ಮೋದಿಜಿಗೆ ನನ್ನ ಪ್ರಣಾಮಗಳು!...ನಮೋ ರಾಜತಾಂತ್ರಿಕತೆಗೆ ಮನಸೋತ ರವಿಶಾಸ್ತ್ರಿ | Ravi Shastri

Ravi Shastri | .ನಮೋ ರಾಜತಾಂತ್ರಿಕತೆಗೆ ಮನಸೋತ ರವಿಶಾಸ್ತ್ರಿ
Ravi Shastri | .ನಮೋ ರಾಜತಾಂತ್ರಿಕತೆಗೆ ಮನಸೋತ ರವಿಶಾಸ್ತ್ರಿ
Published on
ನವದೆಹಲಿ: ಇಲ್ಲಿ ನಡೆಯುತ್ತಿರುವ 2026ರ ಬ್ರಿಕ್ಸ್ ಶೃಂಗಸಭೆಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಜಾಗತಿಕ ನಾಯಕರು ಭಾಗವಹಿಸಿದ ಬೆನ್ನಲ್ಲೇ, ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ತರಬೇತುದಾರ ರವಿಶಾಸ್ತ್ರಿ (Ravi Shastri) ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಜೊತೆಯಾಗಿರುವ ಅಪರೂಪದ ಫೋಟೋವನ್ನು ಎಕ್ಸ್ ಖಾತೆಯಲ್ಲಿ​ ಹಂಚಿಕೊಂಡಿರುವ ಶಾಸ್ತ್ರಿ, ಈ ಐತಿಹಾಸಿಕ ಕ್ಷಣವನ್ನು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಭಾರತ ಸಾಧಿಸಿದ ಅತ್ಯಂತ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ಒಬ್ಬ ಭಾರತೀಯನಾಗಿ ಇಷ್ಟೊಂದು ಹೆಮ್ಮೆ ಎನಿಸಿದ್ದು ಇದೇ ಮೊದಲು. ಅಧ್ಯಕ್ಷ ಪುಟಿನ್, ಅಧ್ಯಕ್ಷ ಷಿ ಮತ್ತು ನಮ್ಮ ಅದ್ಭುತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಾತೆಯ ಮಡಿಲಲ್ಲಿ ಒಟ್ಟಿಗಿದ್ದಾರೆ. ಇಂತಹ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಹಿಂದೆಂದೂ ನೋಡಿರಲಿಲ್ಲ. ಮೋದಿ ಜಿ ಅವರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು ಎಂದು ಶಾಸ್ತ್ರಿ ಬರೆದುಕೊಂಡಿದ್ದಾರೆ.

ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಿಕ್ಸ್ ನಾಯಕರು

ಸಸಿ ನೆಡುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮತ್ತು ಇಥಿಯೋಪಿಯಾ ಪ್ರಧಾನಿ ಅಭಿಯ್ ಅಹಮದ್ ಅಲಿ, ಅಬುಧಾಬಿ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಬ್ರೆಜಿಲ್ ವಿದೇಶಾಂಗ ಸಚಿವ ಮೌರೊ ವಿಯೆರಾ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದೆಹಲಿಯ ಭಾರತ ಮಂಟಪಂನಲ್ಲಿ ಈ ಶೃಂಗಸಭೆಯ ವೇದಿಕೆ ಏರ್ಪಟ್ಟಿದ್ದು, ಸಸಿ ನೆಡುವ ಈ ಕಾರ್ಯಕ್ರಮವು ಶೃಂಗಸಭೆಯ ಅತ್ಯಂತ ಪ್ರಮುಖ ಮತ್ತು ಗಮನಸೆಳೆದ ಕ್ಷಣಗಳಲ್ಲಿ ಒಂದಾಯಿತು.

ನವದೆಹಲಿ ಘೋಷಣೆ ಕುರಿತು ಪ್ರಧಾನಿ ಮೋದಿ ಮಾತು

ಶೃಂಗಸಭೆಯಲ್ಲಿ ಅಂಗೀಕರಿಸಲಾದ ನವದೆಹಲಿ ಘೋಷಣೆಯ (New Delhi Declaration) ಕುರಿತಾಗಿಯೂ ಪ್ರಧಾನಿ ಮೋದಿ ಮಾತನಾಡಿದರು. ಈ ದಾಖಲೆಯು ಬ್ರಿಕ್ಸ್ ಒಕ್ಕೂಟದ ವಿಸ್ತಾರವಾಗುತ್ತಿರುವ ವ್ಯಾಪ್ತಿ ಮತ್ತು ಪ್ರಾಯೋಗಿಕ ಸಹಕಾರಕ್ಕೆ ನೀಡಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚೊಕೊಂಡಿರುವ ಪ್ರಧಾನಿ ಮೋದಿ, 2026ರ ಬ್ರಿಕ್ಸ್ ದೆಹಲಿ ಶೃಂಗಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ನವದೆಹಲಿ ಘೋಷಣೆಯು, ವಿಶಾಲ ವ್ಯಾಪ್ತಿ ಮತ್ತು ಬಲವಾದ ಉದ್ದೇಶವನ್ನು ಹೊಂದಿರುವ ಬ್ರಿಕ್ಸ್‌ನ ಆತ್ಮವಿಶ್ವಾಸವನ್ನು ಎತ್ತಿಹಿಡಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
ಈ ಘೋಷಣೆಯು ಸದಸ್ಯ ದೇಶಗಳ ನಡುವೆ ನಾವೀನ್ಯತೆ, ಸುಸ್ಥಿರತೆ, ಜನರಿಂದ ಜನರೊಂದಿಗಿನ ಬಾಂಧವ್ಯ ಮತ್ತು ಅಭಿವೃದ್ಧಿ ಆಧಾರಿತ ಸಹಕಾರದ ಮೇಲೆ ಗಮನ ಹರಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಪುಟಿನ್-ಜಿನ್‌ಪಿಂಗ್ ಕೈ ಹಿಡಿದು ಪ್ರಧಾನಿ ಮೋದಿ ಶಕ್ತಿಪ್ರದರ್ಶನ!

ಬ್ರಿಕ್ಸ್ ಶೃಂಗಸಭೆ ನಿನ್ನೆ (ಶನಿವಾರ ಸೆ.12) ಅಧಿಕೃತವಾಗಿ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಕೈಹಿಡಿದುಕೊಂಡು ನಿಂತಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ಪ್ರಾರಂಭವಾಗಿದೆ ಎಂದು ಬರೆದುಕೊಂಡಿರುವ ಈ ಫೋಟೋ ಏಷ್ಯಾದ ನೆರೆಹೊರೆಯ ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯದ ಸಂಕೇತವಾಗಿ ಹೊರಹೊಮ್ಮಿದೆ.
ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಗ್ಲೋಬಲ್ ಸೌತ್ (ಅಭಿವೃದ್ಧಿಶೀಲ) ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಜಾಗತಿಕ ಸಂವಾದಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಗ್ಲೋಬಲ್ ಸೌತ್ ದೇಶಗಳ ನೀತಿ ನಿರೂಪಕರಿಗೆ ಅಗತ್ಯವಿರುವ ತರಬೇತಿ ಮತ್ತು ಪರಿಣತಿಯನ್ನು ಒದಗಿಸಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ಭರವಸೆ ನೀಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net