ರಾಹುಲ್ ಕಾರ್ಯಕ್ರಮದ ಪ್ರಚಾರಕ್ಕೆ 25,000 ರೂ ಆಫರ್!...ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ | Chhatron Ki Gunj

Chhatron Ki Gunj | ರಾಹುಲ್ ಕಾರ್ಯಕ್ರಮದ ಪ್ರಚಾರಕ್ಕೆ 25,000 ರೂ ಆಫರ್!
Chhatron Ki Gunj | ರಾಹುಲ್ ಕಾರ್ಯಕ್ರಮದ ಪ್ರಚಾರಕ್ಕೆ 25,000 ರೂ ಆಫರ್!
Published on

ಆಗಸ್ಟ್ 22ರಂದು ಪುಣೆಯಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಅವರ ಛಾತ್ರೋಂ ಕಿ ಗೂಂಜ್ (Chhatron Ki Gunj) ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚಾರ ಮಾಡಲು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಕಾಂಗ್ರೆಸ್ 25,000 ರೂ ಹಣ ನೀಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಕಾಂಗ್ರೆಸ್ ಕಾರ್ಯಕರ್ತನೆಂದು ಹೇಳಿಕೊಳ್ಳುವ ಶಾಂತನು ಎಂಬ ವ್ಯಕ್ತಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯ ವಿಡಿಯೋವನ್ನು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. 
ಆ ಕರೆ ಮಾಡಿದ ವ್ಯಕ್ತಿಯು ಇನ್‌ಫ್ಲುಯೆನ್ಸರ್‌ಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಹುಲ್ ಗಾಂಧಿಯವರ ಭಾಷಣ ಹಾಗೂ ಅಲ್ಲಿನ ವಿದ್ಯಾರ್ಥಿನಿಯರ ಸಂದರ್ಶನಗಳನ್ನು ಒಳಗೊಂಡ 2-3 ವಿಡಿಯೋಗಳನ್ನು ಮಾಡಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುವಂತೆ ಕೋರುತ್ತಾನೆ. ಇದಕ್ಕೆ ಪ್ರಯಾಣ ವೆಚ್ಚವೂ ಸೇರಿ 25,000 ರೂ ಹಣವನ್ನು ಯುಪಿಐ ಮೂಲಕ ಪಾವತಿಸುವುದಾಗಿ ತಿಳಿಸಿದ್ದಾನೆ. ಆಡಿಯೋ ಸಂಭಾಷಣೆಯಲ್ಲಿ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಹೆಸರುಗಳನ್ನು ನೇರವಾಗಿ ಉಲ್ಲೇಖಿಸದೆ 22ರ ಕಾರ್ಯಕ್ರಮ ಎಂದು ಹೇಳಲಾಗಿದೆ.
ಈ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ರಾಹುಲ್ ಗಾಂಧಿಯವರಿಗೆ ಜನಬೆಂಬಲವನ್ನೂ ಹಣ ಕೊಟ್ಟು ಖರೀದಿಸಬೇಕಾದ ಸ್ಥಿತಿ ಬಂದಿದೆ. ಅವರ ನಾಯಕತ್ವ ಎಷ್ಟೊಂದು ದುರ್ಬಲವಾಗಿದೆ ಎಂದರೆ, ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು 25,000 ರೂ ನೀಡಲಾಗುತ್ತಿದೆ. ಆದರೆ ಚುನಾವಣೆಯಲ್ಲಿ ಸೋತಾಗಲೆಲ್ಲಾ ಅವರು ಇವಿಎಂ ಮೇಲೆ ಗೂಬೆ ಕೂರಿಸುತ್ತಾರೆ ಎಂದು ವ್ಯಂಗ್ಯವಾಡಿದೆ.

ಆಗಸ್ಟ್ 22ರಂದು ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮ

ಇನ್ನೊಂದೆಡೆ, ರಾಹುಲ್ ಗಾಂಧಿಯವರ ದೇಶವ್ಯಾಪಿ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ಛಾತ್ರೋಂ ಕಿ ಗೂಂಜ್ ಆಗಸ್ಟ್ 22ರಂದು ಪುಣೆಯ ಎಸ್​​ಎಸ್​ಪಿಎಂಎಸ್​ ಕಾಲೇಜು ಮೈದಾನದಲ್ಲಿ ಸಂಜೆ 4:30 ರಿಂದ ರಾತ್ರಿ 9:30 ರವರೆಗೆ ನಡೆಯಲಿದೆ. ಮುಖ್ಯವಾಗಿ ಯುವತಿಯರು ಹಾಗೂ ವಿದ್ಯಾರ್ಥಿನಿಯರನ್ನು ಕೇಂದ್ರೀಕರಿಸಿರುವ ಈ ಸಮಾವೇಶದಲ್ಲಿ 8,000 ದಿಂದ 10,000 ಜನರು ಭಾಗವಹಿಸುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮಕ್ಕೆ ಪುಣೆ ನಗರ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಅನುಮತಿ ನೀಡಿದೆ. ಮೈದಾನದ ಸಾಮರ್ಥ್ಯ ಮೀರಿ ಜನರನ್ನು ಸೇರಿಸಬಾರದು, ಪ್ರಚೋದನಕಾರಿ ಬ್ಯಾನರ್ ಅಥವಾ ಚಿತ್ರಗಳನ್ನು ಬಳಸುವಂತಿಲ್ಲ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮತ್ತು ಕನಿಷ್ಠ 4 ಪ್ರತ್ಯೇಕ ಪ್ರವೇಶ/ನಿರ್ಗಮನ ದ್ವಾರಗಳನ್ನು ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಮಹಿಳೆಯರ ಪರಿಶೀಲನೆಗೆ ಪ್ರತ್ಯೇಕ ಕೊಠಡಿ, ಮಹಿಳಾ ಭದ್ರತಾ ಸಿಬ್ಬಂದಿಯ ನೇಮಕ ಹಾಗೂ ಇಡೀ ಮೈದಾನದಲ್ಲಿ 24 ಗಂಟೆ ಸಿಸಿಟಿವಿ ಕಣ್ಗಾವಲು ಇರುವುದನ್ನು ಕಡ್ಡಾಯಗೊಳಿಸಲಾಗಿದೆ. 
ಡ್ರೋನ್ ಕ್ಯಾಮೆರಾಗಳು ಮತ್ತು ಹೈ-ಇಂಟೆನ್ಸಿಟಿ ಬೀಮ್ ಲೈಟ್‌ಗಳ ಬಳಕೆಯನ್ನು ನಿಷೇಧಿಸಲಾಗಿದ್ದು, ಶಬ್ದ ಮಾಲಿನ್ಯ ನಿಯಮಗಳನ್ನು ಪಾಲಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಅಗ್ನಿಶಾಮಕ ಮತ್ತು ಸಂಚಾರ ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಯಾವುದೇ ಅಹಿತಕರ ಘಟನೆ ಅಥವಾ ಕಾನೂನು ಸುವ್ಯವಸ್ಥೆ ಭಂಗವಾದರೆ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ನಿಯಮ ಉಲ್ಲಂಘಿಸಿದರೆ ತಕ್ಷಣವೇ ನೀಡಲಾದ ಅನುಮತಿಯನ್ನು ರದ್ದುಗೊಳಿಸಿ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net