ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಧರಣಿ!...ದೇಶದಲ್ಲಿ ಅರಾಜಕತೆ ಸೃಷ್ಟಿಸುವುದೇ ಕಾಂಗ್ರೆಸ್ ನಾಯಕರ ಕೆಲಸ ಎಂದ ಕೇಂದ್ರ ಸಚಿವ ನಡ್ಡಾ | JP Nadda

JP Nadda | ದೇಶದಲ್ಲಿ ಅರಾಜಕತೆ ಸೃಷ್ಟಿಸುವುದೇ ಕಾಂಗ್ರೆಸ್ ನಾಯಕರ ಕೆಲಸ ಎಂದ ಕೇಂದ್ರ ಸಚಿವ ನಡ್ಡಾ
JP Nadda | ದೇಶದಲ್ಲಿ ಅರಾಜಕತೆ ಸೃಷ್ಟಿಸುವುದೇ ಕಾಂಗ್ರೆಸ್ ನಾಯಕರ ಕೆಲಸ ಎಂದ ಕೇಂದ್ರ ಸಚಿವ ನಡ್ಡಾ
Published on

ನವದೆಹಲಿ: ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ಧರಣಿ ನಡೆಸಿದ್ದನ್ನು ಕೇಂದ್ರ ಸಚಿವ ಜೆ ಪಿ ನಡ್ಡಾ (

JP Nadda)

ಖಂಡಿಸಿದ್ದು, ಕಾಂಗ್ರೆಸ್​ ನಾಯಕ ಪ್ರದರ್ಶಿಸುತ್ತಿರುವ ಈ ಅಗ್ಗದ ಹಾಗೂ ಕ್ಯಾಮರಾ ಕೇಂದ್ರೀಕೃತ ರಾಜಕೀಯವನ್ನು ದೇಶದ ಜನತೆ ಮತ್ತೆ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ನಡ್ಡಾ, ರಾಹುಲ್ ಗಾಂಧಿ ನಡೆಸುತ್ತಿರುವ ಈ ಧರಣಿ ಪ್ರತಿಭಟನೆಯು ವಿದ್ಯಾರ್ಥಿಗಳಿಗಾಗಲಿ ಅಥವಾ ನ್ಯಾಯಕ್ಕಾಗಲಿ ಅಲ್ಲ. ಬದಲಿಗೆ ಇದು ಕಾಂಗ್ರೆಸ್ ಪಕ್ಷದ ರಾಜಕೀಯ ಹತಾಶೆ ಹಾಗೂ ರಾಹುಲ್ ಗಾಂಧಿಯವರ ಮಾಧ್ಯಮಗಳ ಗಮನ ಸೆಳೆಯುವ ಹಸಿವಿನ ಸಂಕೇತವಾಗಿದೆ ಎಂದು ಟೀಕಿಸಿದ್ದಾರೆ.

ವಂದೇ ಮಾತರಂ ವಿವಾದದಿಂದ ತಪ್ಪಿಸಿಕೊಳ್ಳುವ ತಂತ್ರ

ವಂದೇ ಮಾತರಂ ವಿವಾದದ ವಿಷಯದಲ್ಲಿ ಕಾಂಗ್ರೆಸ್ ಈಗಾಗಲೇ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗಿದ್ದು, ಸಾರ್ವಜನಿಕರು ಆ ಪಕ್ಷದಿಂದ ಉತ್ತರವನ್ನು ಆಗ್ರಹಿಸುತ್ತಿದ್ದಾರೆ. ಆ ಮುಜುಗರದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ರಾಹುಲ್ ಗಾಂಧಿ ನಡೆಸುತ್ತಿರುವ ಹೊಸ ನಾಟಕ ಇದಾಗಿದೆ ಎಂದು ನಡ್ಡಾ ಆರೋಪಿಸಿದ್ದಾರೆ. ಜುಲೈ 20ರ ಘಟನೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ತಾನಾಗಿಯೇ ಪರಿಗಣನೆಗೆ ತೆಗೆದುಕೊಂಡಿದ್ದು, ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ 5 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ.

ದೇಶದ ಸರ್ವೋಚ್ಚ ನ್ಯಾಯಾಲಯವೇ ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ, ಪೊಲೀಸ್ ಠಾಣೆಯ ಮುಂಬಾಗ ಕ್ಯಾಮೆರಾಗಳ ಮುಂದೆ ಕುಳಿತು ರಾಹುಲ್ ಗಾಂಧಿ ಏನನ್ನು ಸಾಬೀತುಪಡಿಸಲು ಹೊರಟಿದ್ದಾರೆ..? ಪ್ರತಿಪಕ್ಷ ನಾಯಕರಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲವೇ..? ಸತ್ಯವೇನೆಂದರೆ, ರಾಹುಲ್ ಗಾಂಧಿ ಕೇವಲ ತಮ್ಮನ್ನು ಸುದ್ಧಿಯಲ್ಲಿಟ್ಟುಕೊಳ್ಳಲು ಈ ಕ್ಯಾಮೆರಾ-ಕೇಂದ್ರೀಕೃತ ನಾಟಕವಾಡುತ್ತಿದ್ದಾರೆ ಎಂದು ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ಇಡೀ ಘಟನೆಯ ಸಮಯವನ್ನು ಗಮನಿಸಿದರೆ, ವಂದೇ ಮಾತರಂ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಪ್ರಸ್ತುತ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿರುವುದು ಅರಿವಿಗೆ ಬರುತ್ತದೆ. ರಾಷ್ಟ್ರೀಯ ಗೀತೆಗೆ ಮಾಡಿದ ಅಪಮಾನಕ್ಕೆ ಸಂಬಂಧಿಸಿದಂತೆ ದೇಶದ ಜನತೆ ಕಾಂಗ್ರೆಸ್‌ನಿಂದ ಉತ್ತರ ಬಯಸುತ್ತಿದ್ದಾರೆ. ವಿಶೇಷವಾಗಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತ್ರಿವರ್ಣ ಧ್ವಜದ ಮಾದರಿಯಲ್ಲಿದ್ದ ಕೇಕ್ ಕತ್ತರಿಸುತ್ತಿರುವುದು ಕಂಡುಬಂದಿದೆ. ತಮ್ಮ ಈ ರಾಷ್ಟ್ರವಿರೋಧಿ ಮುಖವನ್ನು ಮರೆಮಾಚಲು ಮತ್ತು ತಮಗೆ ಉಂಟಾದ ಭಾರಿ ಮುಜುಗರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಾಹುಲ್ ಗಾಂಧಿ ಈ ಹೊಸ ನಾಟಕವನ್ನು ತರಾತುರಿಯಲ್ಲಿ ಸೃಷ್ಟಿಸಿದ್ದಾರೆ ಎಂದು ಜೆ ಪಿ ನಡ್ಡಾ ಆರೋಪಿಸಿದ್ದಾರೆ.

ರಾಹುಲ್​ ವಿರುದ್ಧ ರವಿಶಂಕರ್ ಪ್ರಸಾದ್ ಕಿಡಿ

ರಾಹುಲ್ ಗಾಂಧಿ ಪ್ರತಿಭಟನೆಯನ್ನು ಖಂಡಿಸಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ನಾಯಕರು ಅರಾಜಕತೆಯ ರಾಜಕಾರಣ ಮಾಡುತ್ತಿದ್ದಾರೆ ಹಾಗೂ ವಂದೇ ಮಾತರಂ ವಿವಾದದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಮುಂದೆ ರಾಹುಲ್ ಗಾಂಧಿ ನಡೆಸುತ್ತಿರುವ ಧರಣಿಯನ್ನು ವಿರೋಧಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿ ತನಿಖೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಪೊಲೀಸರು ತಿಳಿಸಿದರೂ ಅವರು ಕಾನೂನನ್ನು ಗೌರವಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net