ದೇಹದಲ್ಲಿ 200, ಕಣ್ಣಿನಲ್ಲಿ 3!...ಸಂತ್ರಸ್ತನ ದೇಹದಿಂದ ಹೊರತೆಗೆದ ಪೆಲೆಟ್ ತೋರಿಸಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ! | Rahul Gandhi

Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on

ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಲು ಯಾರು ಆದೇಶ ನೀಡಿದ್ದಾರೆ ಎಂದು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಇಂದು ಪೆಲೆಟ್ ಗನ್ ದಾಳಿಗೊಳಗಾದ ಸಂತ್ರಸ್ತನೊಂದಿಗೆ ಪಾರ್ಲಿಮೆಂಟ್ ಸ್ಟ್ರೀಟ್‌ನ ಪೊಲೀಸ್ ಠಾಣೆಗೆ ತೆರಳಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವವರೆಗೆ ಅಲ್ಲಿಂದ ತೆರಳುವುದಿಲ್ಲ ಎಂದು ಧರಣಿ ಕುಳಿತಿದ್ದಾರೆ.

ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪೊಲೀಸ್ ಹಾಗೂ ಅರೆಸೈನಿಕ ಪಡೆಗಳು ಅತಿಯಾದ ಬಲಪ್ರಯೋಗ ಮಾಡಿವೆ ಎಂಬ ಆರೋಪಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ ಎಂಬ ಮಾಹಿತಿಯನ್ನು ದೆಹಲಿ ಪೊಲೀಸರು ನೀಡಿದರೂ, ಪೆಲೆಟ್ ಗನ್ ಸಂತ್ರಸ್ತ ಸಾಹಿಲ್ ಲೋಚಾಬ್ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದರಿಂದ ರಾಹುಲ್ ಗಾಂಧಿ ದೂರು ದಾಖಲಾಗುವವರೆಗೆ ಈ ಜಾಗದಿಂದ ಕದಲುವುದಿಲ್ಲ ಎಂದು ಹಠ ಹಿಡಿದಿದ್ದಾರೆ.

ರಾಹುಲ್​ ಗಾಂಧಿ ಪೋಸ್ಟ್​!

ಇದೇ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಾಹುಲ್​, ನಾವು ವಿದ್ಯಾರ್ಥಿಗಳ ಪರವಾಗಿ ನಿಲ್ಲುತ್ತೇವೆ. ನ್ಯಾಯದ ಪರವಾಗಿ ನಿಲ್ಲುತ್ತೇವೆ. ಮೌನವಾಗಿರುವುದಿಲ್ಲ. ಎಫ್‌ಐಆರ್ ದಾಖಲಾಗುವವರೆಗೆ ಡಿಸಿಪಿ ಕಚೇರಿಯ ಮುಂದೆ ಧರಣಿ ಮುಂದುವರೆಯುತ್ತದೆ. ಜುಲೈ 20 ರಂದು ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾಹಿಲ್ ಮೇಲೆ ಪೊಲೀಸರು ಪೆಲೆಟ್ ಗನ್‌ನಿಂದ ದಾಳಿ ಮಾಡಿದ್ದರು. ಇದರ ಪರಿಣಾಮವಾಗಿ ಸಾಹಿಲ್ ಅವರ ಒಂದು ಕಣ್ಣಿನ ದೃಷ್ಟಿ ಈಗ ಅಪಾಯದಲ್ಲಿದೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿಯವರು ಪೆಲೆಟ್ ಗನ್‌ನಿಂದ ಗಾಯಗೊಂಡ ಸಂತ್ರಸ್ತ ವಿದ್ಯಾರ್ಥಿಯೊಂದಿಗೆ ಮಾಧ್ಯಮಗಳ ಮುಂದೆ ಬಂದು, ನೀಲಿ ಮುಚ್ಚಳದ ಸಣ್ಣ ಪ್ಲಾಸ್ಟಿಕ್ ಡಬ್ಬಿಯಲ್ಲಿದ್ದ ಪೆಲೆಟ್ ಅಂಚುಗಳನ್ನು ತಮ್ಮ ಅಂಗೈಗೆ ಸುರಿದುಕೊಂಡು ಪ್ರದರ್ಶಿಸಿದರು. ಇವೇ ಆ ಪೆಲೆಟ್‌ಗಳು ಎಂದು ವರದಿಗಾರರಿಗೆ ತೋರಿಸಿದ ಅವರು, ಇವುಗಳನ್ನು ಹತ್ತಿರದಿಂದ ಗಮನಿಸುವಂತೆ ತಿಳಿಸಿ, ಇವುಗಳನ್ನು ವಿದ್ಯಾರ್ಥಿಯ ದೇಹದಿಂದ ಹೊರತೆಗೆಯಲಾಗಿದೆ ಎಂದು ಹೇಳಿದರು.

ಕಪ್ಪು ಕನ್ನಡಕ ಧರಿಸಿದ್ದ ಆ ವಿದ್ಯಾರ್ಥಿ ತನ್ನ ಟಿ-ಷರ್ಟ್ ತೋಳನ್ನು ಮೇಲಕ್ಕೆತ್ತಿ ಗಾಯಗಳನ್ನು ತೋರಿಸಿದನು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಯ ದೇಹದಲ್ಲಿ 200 ಪೆಲೆಟ್‌ಗಳು ಸಿಲುಕಿಕೊಂಡಿದ್ದು, ಮೂರು ಪೆಲೆಟ್‌ಗಳು ಕಣ್ಣಿನಲ್ಲೇ ಇವೆ ಎಂದು ತಿಳಿಸಿದರು. ಇದಕ್ಕೆ ಬೆಂಬಲವಾಗಿ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು ಮತ್ತು ಏಮ್ಸ್ ವೈದ್ಯಕೀಯ ವರದಿಗಳನ್ನು ಪ್ರದರ್ಶಿಸಿದ ಅವರು, ಪೊಲೀಸರು ಈ ದಾಳಿ ನಡೆಸಿಲ್ಲ ಎಂದಾದರೆ ಇದನ್ನು ಹಾರಿಸಿದವರು ಯಾರು ಎಂದು ಪ್ರಶ್ನಿಸಿದರು. ಅಪರಾಧ ನಡೆದಿರುವುದು ಸ್ಪಷ್ಟವಾಗಿರುವುದರಿಂದ, ಸ್ಥಳದಲ್ಲೇ ಇರುವ ಸಂತ್ರಸ್ತನ ತಾಯಿ-ತಂದೆಗೆ ನ್ಯಾಯ ಒದಗಿಸಲು ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಏನಿದು ಪೆಲೆಟ್ ಗನ್‌..? ಬಳಕೆಯ ನಿಯಮಗಳೇನು..?

2010 ರಲ್ಲಿ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ವಿರುದ್ಧ ಪ್ರಥಮ ಬಾರಿಗೆ ಬಳಸಲಾದ ಪೆಲೆಟ್ ಗನ್‌ಗಳು ಮತ್ತು ಶಾಕ್ ಬ್ಯಾಟನ್‌ಗಳು ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ನಿಯೋಜನೆಗೊಂಡಿದ್ದ ಸಿಆರ್‌ಪಿಎಫ್‌ನ ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಗೇರ್‌ಗಳ ಭಾಗವಾಗಿವೆ. ದೆಹಲಿ ಪ್ರತಿಭಟನೆಯ ಸಮಯದಲ್ಲಿ ಇದರ ಬಳಕೆಯ ಬಗ್ಗೆ ಸಿಆರ್‌ಪಿಎಫ್ ಮೌನವಾಗಿದೆ. ಪೆಲೆಟ್ ಗನ್ 600 ಲೋಹದ ಅಥವಾ ರಬ್ಬರ್ ಪೆಲೆಟ್‌ಗಳನ್ನು ಹೊಂದಿರುವ ಕಾರ್ಟ್ರಿಡ್ಜ್‌ಗಳನ್ನು ಹಾರಿಸುತ್ತದೆ, ಇವು ಸೆಕೆಂಡಿಗೆ 1,000 ಅಡಿ ವೇಗದಲ್ಲಿ ಹರಡುತ್ತವೆ. ಗನ್ ಅನ್ನು ಕನಿಷ್ಠ 500 ಅಡಿ ದೂರದಿಂದ ಹಾರಿಸಬೇಕು ಎಂಬುದು ನಿಯಮವಾಗಿದೆ.

ರಾಹುಲ್​ ವಿರುದ್ಧ ಬಿಜೆಪಿ ಕಿಡಿ!

ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಮುಂದೆ ರಾಹುಲ್ ಗಾಂಧಿ ನಡೆಸುತ್ತಿರುವ ಧರಣಿಯನ್ನು ವಿರೋಧಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿ ತನಿಖೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಪೊಲೀಸರು ತಿಳಿಸಿದರೂ ಅವರು ಕಾನೂನನ್ನು ಗೌರವಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net