ಟಿಎಂಸಿಗೆ ಬಿಗ್​​ ಶಾಕ್​​: ಮಮತಾ ಬ್ಯಾನರ್ಜಿ ಆಪ್ತ, ಪಕ್ಷ ಸ್ಥಾಪಕರಲ್ಲಿ ಒಬ್ಬರಾಗಿದ್ದ ಸುಖೇಂದು ಶೇಖರ್ ರಾಜೀನಾಮೆ | Sukhendu Shekhar

ಸುಖೇಂದು ಶೇಖರ್ ರೇ
ಸುಖೇಂದು ಶೇಖರ್ ರೇ
Published on
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್​ ಪಕ್ಷದಲ್ಲಿ ನಾಯಕತ್ವದ ಬಗ್ಗೆ ಆಂತರಿಕ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಇಂದು(ಜೂ. 08) ಪಕ್ಷದ ಹಿರಿಯ ನಾಯಕ ಸುಖೇಂದು ಶೇಖರ್ ರೇ ಅವರು ಪಕ್ಷದ ಜೊತೆಗೆ ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಟಿಎಂಸಿಯ ಸ್ಥಾಪಕ ಸದಸ್ಯರು ಮತ್ತು ಸಂಸತ್ತಿನಲ್ಲಿ ಅದರ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದ ಅವರು, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ.
ದೆಹಲಿಯಲ್ಲಿ ಈ ಕುರಿತು ಮಾತನಾಡಿರುವ ಅವರು, ಚುನಾವಣೆಗೂ ಮುನ್ನ ಸರ್ಕಾರ ಮತ್ತು ಪಕ್ಷದ ಸಂಘಟನೆಯಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ. ಸರ್ಕಾರದ ವಿರುದ್ಧ ಸಾರ್ವಜನಿಕರ ಕೋಪವು ಆತಂಕಕಾರಿ ಮಟ್ಟವನ್ನು ತಲುಪಿದೆ ಎಂದು ಹೇಳಿದ್ದೇ ಅಂದಿನಿಂದ ನನ್ನನ್ನು ಪಕ್ಷದಲ್ಲಿ ಸೈಡ್​ಲೈನ್ ಮಾಡಲಾಯಿತು ಎಂದು ಹೇಳಿದ್ದಾರೆ.
ಆರ್‌ಜಿ ಕಾರ್ ಆಸ್ಪತ್ರೆಯ ವಿಷಯದ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡಿದ್ದೆ. ಅಂದಿನಿಂದ, ಪಕ್ಷದೊಳಗೆ ನಾನು ಒಂಟಿಯಾಗಿದ್ದೆ. ಸಾಕ್ಷ್ಯಾಧಾರಗಳನ್ನು ನಾಶಮಾಡುವಲ್ಲಿ ಕೆಲವು ಪೊಲೀಸ್ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ನಾನು ನಂಬಿದ್ದರಿಂದ ಅವರ ವಿರುದ್ಧ ಆಂತರಿಕ ತನಿಖೆಗೆ ಒತ್ತಾಯಿಸಿದ್ದು ನನ್ನ ಏಕೈಕ ತಪ್ಪು ಎಂದಿದ್ದಾರೆ.
ಆ ಸಮಯದಲ್ಲಿ ಹೊಣೆಗಾರರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿದ್ದವು. ಅಂದೇ ನನಗೆ ತಿಳಿದಿತ್ತು. ನಾನು ಪಕ್ಷದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನನಗೆ ಅರಿವಾಯಿತು. ಹೀಗಾಗಿ ಇಂದು ಪಕ್ಷ ಮತ್ತು ಅದರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷದಲ್ಲಿರುವ ಎಲ್ಲರೂ ಅಪ್ರಾಮಾಣಿಕರಲ್ಲ. ಆದರೆ, ಅನೇಕ ಪ್ರಾಮಾಣಿಕ ಜನರನ್ನು ಬದಿಗಿಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಮುಂದಿನ ನಡೆಯ ಬಗ್ಗೆ ಸುದ್ದಿಗಾರರು ಕೇಳಿದಾಗ, ನಾನು ರಾಜಕೀಯದಿಂದ ಸಂಪೂರ್ಣವಾಗಿ ಹಿಂದೆ ಸರಿಯಬಹು ಎಂದು ಹೇಳಿದ್ದು, ಬೇರೆ ರಾಜಕೀಯ ಪಕ್ಷಕ್ಕೆ ಸೇರುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಸುಖೇಂದು ಅವರ ರಾಜೀನಾಮೆಯೂ ಪಕ್ಷದ ಹಿರಿತನದ ಕಾರಣದಿಂದಾಗಿ ಮಾತ್ರವಲ್ಲ, ಆಂತರಿಕ ಭಿನ್ನಾಭಿಪ್ರಾಯದಿಂದ ಟಿಎಂಸಿಯ ಸಂಸದೀಯ ವಿಭಾಗದಿಂದ ಹೊರ ನಡೆದ ಮೊದಲ ವ್ಯಕ್ತಿಯಾಗಿದ್ದಾರೆ. ಅವರ ರಾಜೀನಾಮೆಯಿಂದ ರಾಜ್ಯಸಭೆಯಲ್ಲಿ ಟಿಎಂಸಿಯ ಸದಸ್ಯ ಬಲ 12 ಕ್ಕೆ ಇಳಿದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net