ಬಂಗಾಳ ಕುರುಕ್ಷೇತ್ರ: ಮ್ಯಾಜಿಕ್ ನಂಬರ್ ಮಿಸ್ ಆದ್ರೆ ಕಾಂಗ್ರೆಸ್ ನಡೆ ಏನು? ಮಮತಾಗೆ ಹಸ್ತದ ಬೆಂಬಲ ಸಿಗುತ್ತಾ? ಖರ್ಗೆ ಉತ್ತರದಲ್ಲಿದೆ ಬಿಗ್ ಟ್ವಿಸ್ಟ್! Mallikarjun Kharge

ಬಂಗಾಳ ಕುರುಕ್ಷೇತ್ರ: ಮ್ಯಾಜಿಕ್ ನಂಬರ್ ಮಿಸ್ ಆದ್ರೆ ಕಾಂಗ್ರೆಸ್ ನಡೆ ಏನು? ಮಮತಾಗೆ ಹಸ್ತದ ಬೆಂಬಲ ಸಿಗುತ್ತಾ? ಖರ್ಗೆ ಉತ್ತರದಲ್ಲಿದೆ ಬಿಗ್ ಟ್ವಿಸ್ಟ್!
ಬಂಗಾಳ ಕುರುಕ್ಷೇತ್ರ: ಮ್ಯಾಜಿಕ್ ನಂಬರ್ ಮಿಸ್ ಆದ್ರೆ ಕಾಂಗ್ರೆಸ್ ನಡೆ ಏನು? ಮಮತಾಗೆ ಹಸ್ತದ ಬೆಂಬಲ ಸಿಗುತ್ತಾ? ಖರ್ಗೆ ಉತ್ತರದಲ್ಲಿದೆ ಬಿಗ್ ಟ್ವಿಸ್ಟ್!
Published on
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026ರ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಬಂಗಾಳದಲ್ಲಿ ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಕಾಂಗ್ರೆಸ್ ಪಕ್ಷವು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಗೆ ಬೆಂಬಲ ನೀಡಲಿದೆಯೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅತ್ಯಂತ ಜಾಗರೂಕತೆಯಿಂದ ಉತ್ತರಿಸಿದ್ದಾರೆ.
ಈ ಬಗ್ಗೆ ಗುರುವಾರ ನವದೆಹಲಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಖರ್ಗೆ, ಈ ಹಂತದಲ್ಲಿ ಯಾವುದೇ ನಿರ್ಧಾರವನ್ನು ಪ್ರಕಟಿಸಲು ನಿರಾಕರಿಸುವ ಮೂಲಕ ಕುತೂಹಲವನ್ನು ಜೀವಂತವಾಗಿರಿಸಿದ್ದಾರೆ.

ಖರ್ಗೆ ಹೇಳಿದ್ದೇನು..? ಸಸ್ಪೆನ್ಸ್ ಮುಂದುವರಿಕೆ!

ಎಕ್ಸಿಟ್ ಪೋಲ್‌ಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಭಾರೀ ಪೈಪೋಟಿ ಇರುವುದನ್ನು ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮುಂದಿನ ನಿಲುವಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನಾವು ಕಾದು ನೋಡೋಣ, ಈ ಸಮಯದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಸ್ಪಷ್ಟ ಚಿತ್ರಣ ಸಿಗಲು ಇನ್ನು ಎರಡು ದಿನ ಕಾಯಿರಿ ಎಂದು ಹೇಳಿದ್ದಾರೆ. ಫಲಿತಾಂಶ ಪ್ರಕಟವಾದ ನಂತರವಷ್ಟೇ ಕಾಂಗ್ರೆಸ್ ತನ್ನ ನಿಲುವನ್ನು ಅಧಿಕೃತವಾಗಿ ಘೋಷಿಸಲಿದೆ ಎಂಬ ಸುಳಿವನ್ನು ನೀಡಿದ್ದಾರೆ.

ದಾಖಲೆ ಬರೆದ ಮತದಾನ: ಬಂಗಾಳದ ಇತಿಹಾಸದಲ್ಲೇ ಮೊದಲು

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆದಿದ್ದು, ಸ್ವಾತಂತ್ರ್ಯಾನಂತರದ ಇತಿಹಾಸದಲ್ಲೇ ಅತಿ ಹೆಚ್ಚು ಮತದಾನವಾದ ದಾಖಲೆಗೆ ಸಾಕ್ಷಿಯಾಗಿದೆ. ಎರಡನೇ ಮತ್ತು ಅಂತಿಮ ಹಂತದಲ್ಲಿ ಶೇ. 92.67 ರಷ್ಟು ಮತದಾನವಾಗಿದ್ದು, ವಿಶೇಷವೆಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ. ಮೇ 4 ರಂದು ಹೊರಬೀಳಲಿರುವ ಫಲಿತಾಂಶವು ಬಂಗಾಳದಲ್ಲಿ ಯಾರ ಸರ್ಕಾರ ಬರಲಿದೆ ಅಥವಾ ಸಮ್ಮಿಶ್ರ ಸರ್ಕಾರದ ಪರ್ವ ಆರಂಭವಾಗಲಿದೆಯೇ ಎಂಬುದನ್ನು ನಿರ್ಧರಿಸಲಿದೆ.

ಎಕ್ಸಿಟ್ ಪೋಲ್ ಲೆಕ್ಕಾಚಾರ: ಟಿಎಂಸಿಗೆ ಹಿನ್ನಡೆ..?

ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಬಂಗಾಳದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಭವಿಷ್ಯ ನುಡಿದಿವೆ. ಭಾರತೀಯ ಜನತಾ ಪಾರ್ಟಿ (BJP) ಮುನ್ನಡೆ ಸಾಧಿಸಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಮ್ಯಾಟ್ರೈಜ್ ಸಮೀಕ್ಷೆ: ಬಿಜೆಪಿ ಈ ಬಾರಿ 146 ರಿಂದ 161 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಸನಿಹಕ್ಕೆ ಬರಲಿದೆ ಎಂದು ಹೇಳಿದೆ.
ಟಿಎಂಸಿಗೆ ಹೊಡೆತ: ಇದೇ ಸಮೀಕ್ಷೆಯ ಪ್ರಕಾರ, ಆಡಳಿತರೂಢ ಟಿಎಂಸಿ 125 ರಿಂದ 140 ಸ್ಥಾನಗಳಿಗೆ ಸೀಮಿತಗೊಳ್ಳುವ ಸಾಧ್ಯತೆಯಿದೆ.
ಇತರರು: ಇನ್ನುಳಿದ ಪಕ್ಷಗಳು 6 ರಿಂದ 10 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.
ನಾಲ್ಕು ಪ್ರಮುಖ ಸಮೀಕ್ಷಾ ಏಜೆನ್ಸಿಗಳು ಬಿಜೆಪಿ ಪರವಾಗಿ ಒಲವು ತೋರಿದ್ದರೆ, ಕೇವಲ ಒಂದು ಏಜೆನ್ಸಿ ಮಾತ್ರ ಭಿನ್ನವಾದ ಫಲಿತಾಂಶವನ್ನು ನೀಡಿದೆ. ಈ ಎಲ್ಲಾ ಗೊಂದಲಗಳ ನಡುವೆ, ಒಂದು ವೇಳೆ ಬಿಜೆಪಿ ಮ್ಯಾಜಿಕ್ ನಂಬರ್ ತಲುಪದಿದ್ದರೆ ಕಾಂಗ್ರೆಸ್‌ನ 6-10 ಸ್ಥಾನಗಳು ಅತ್ಯಂತ ನಿರ್ಣಾಯಕವಾಗಲಿವೆ. ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯು ಬಂಗಾಳದ ಭವಿಷ್ಯವನ್ನು ಬದಲಿಸಬಲ್ಲ ಶಕ್ತಿ ಹೊಂದಿದೆ.
ಬಂಗಾಳದ ಗದ್ದುಗೆ ಯಾರ ಪಾಲಾಗಲಿದೆ ಮತ್ತು ಮೌನ ಮತದಾರರ ತೀರ್ಪು ಯಾರ ಪರವಾಗಿದೆ ಎಂದು ಕಾದು ನೋಡಬೇಕಿದೆ. ಖರ್ಗೆ ಅವರ ಕಾದು ನೋಡುವ ತಂತ್ರ ಯಶಸ್ವಿಯಾಗಲಿದೆಯೇ ಎಂಬ ಎಲ್ಲಾ ಪ್ರಶ್ನೆಗಳಿಗೆ ಮೇ 4ರಂದು ಉತ್ತರ ಸಿಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net