ಸುಮ್ಮನಿದ್ರೆ 5 ನಿಮಿಷದಲ್ಲಿ ಮುಗಿಸ್ತೀನಿ, ಇಲ್ಲಾಂದ್ರೆ ಒಂದು ಗಂಟೆ ಭಾಷಣ ಪಕ್ಕಾ: ಕೈ ಕಾರ್ಯಕರ್ತರಿಗೆ ಗದರಿದ ಮಲ್ಲಿಕಾರ್ಜುನ ಖರ್ಗೆ! | Mallikarjun Kharge

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Published on: 

ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಇಂಡಿಯಾ ಒಕ್ಕೂಟದ ಬೃಹತ್ ರ‍್ಯಾಲಿಯು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ವಿವಾದಾತ್ಮಕ ಹೇಳಿಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಆಕ್ರೋಶ ಈ ರ‍್ಯಾಲಿಯ ಮುಖ್ಯ ಕೇಂದ್ರಬಿಂದುವಾಗಿತ್ತು.

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಭಿಕರನ್ನು ನಿಯಂತ್ರಿಸಲು ಗದರಿದ್ದು ಮತ್ತು ಚುನಾವಣೆ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಾಯಕರು ಗುಡುಗಿದ್ದು ಪ್ರಮುಖ ಬೆಳವಣಿಗೆಯಾಯಿತು. ಖರ್ಗೆ ರ‍್ಯಾಲಿಯಲ್ಲಿ ಮಾತನಾಡಲು ಮುಂದಾಗುತ್ತಿದ್ದಂತೆ ಸಭಿಕರಿಂದ ಭಾರೀ ಘೋಷಣೆಗಳು ಮತ್ತು ಗದ್ದಲ ಉಂಟಾಯಿತು. ಸುಮಾರು 30 ಸೆಕೆಂಡ್‌ಗಳ ಕಾಲ ಮೌನವಾಗಿದ್ದ ಖರ್ಗೆ, ಗಲಾಟೆಗೆ ಅಸಮಾಧಾನಗೊಂಡರು.

ಸಭಿಕರನ್ನು ಶಾಂತಗೊಳಿಸಲು ಖರ್ಗೆ ಅವರು ಬಳಸಿದ ಶೈಲಿ ಗಮನ ಸೆಳೆಯಿತು. ನೋಡಿ, ನೀವೊಮ್ಮೆ ಶಾಂತವಾಗಿ ಕುಳಿತರೆ ನಾನು ಐದು ನಿಮಿಷಗಳಲ್ಲಿ ನನ್ನ ಭಾಷಣ ಮುಗಿಸುತ್ತೇನೆ. ಒಂದು ವೇಳೆ ಸುಮ್ಮನಾಗದಿದ್ದರೆ, ನಾನು ಒಂದು ಗಂಟೆ ಭಾಷಣ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಸಭಿಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಇನ್ನು ಕೆಲವರು, ಕಳೆದ ವಾರ ವಿವಾದ ಸೃಷ್ಟಿಸಿದ್ದ ಮೋದಿಯವರ ತಂದೆಯೂ ಹೋಗುತ್ತಾರೆ ಎಂಬ ಸಾಲನ್ನು ಪುನರಾವರ್ತಿಸಿದರು.

Also Read
ಮೋದಿ ರಾವಣನಿದ್ದಂತೆ, ಸೋಲಿಸಲು ವಾನರ ಸೇನೆ ಬಂದಿದೆ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ! | CM Revanth Reddy
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ವಿವಾದದ ಬಗ್ಗೆ ಈ ಬಾರಿ ಎಚ್ಚೆತ್ತುಕೊಂಡಿರುವ ಖರ್ಗೆ ತಮ್ಮ ಭಾಷಣದಲ್ಲಿ ವಿವಾದಾತ್ಮಕ ಪದಗಳನ್ನು ಕೈಬಿಟ್ಟು, ಮೋದಿ ಹೋದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಕೇವಲ ಒಂಬತ್ತು ನಿಮಿಷಗಳಲ್ಲಿ ತಮ್ಮ ಭಾಷಣವನ್ನು ಮುಗಿಸಿದರು.

ಪಟನಾ ವಿವಾದದ ಹಿನ್ನೆಲೆ!

ಅಕ್ಟೋಬರ್ 25 ರಂದು ಪಟನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿಯವರ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಭೆಯಲ್ಲಿದ್ದ ಸಂತೋಷ್ ಕುಮಾರ್ ಎಂಬ ವ್ಯಕ್ತಿ ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದಿದ್ದಕ್ಕೆ ಪ್ರತಿಯಾಗಿ ಖರ್ಗೆ ಆ ಆಕ್ರೋಶದ ನುಡಿಗಳನ್ನಾಡಿದ್ದರು. ಆ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಇತರರು ಸಭೆಯಿಂದ ಹೊರಹಾಕಿದ್ದರು. ನಂತರ ಮಾತನಾಡಿದ್ದ ಕಾರ್ಯಕರ್ತ, ಸಾರ್ವಜನಿಕರು ದಂಗೆ ಏಳದ ಹೊರತು ಮೋದಿ ಹೋಗುವುದಿಲ್ಲ ಎಂದು ನಾನು ಹೇಳಲು ಹೊರಟಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ಈ ಘಟನೆಯು ದೇಶಾದ್ಯಂತ ಬಿಜೆಪಿ ಆಕ್ರೋಶಕ್ಕೆ ಹಾಗೂ ಕ್ಷಮೆಯಾಚನೆಗೆ ಒತ್ತಾಯಿಸಲು ಕಾರಣವಾಗಿತ್ತು.

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತೀವ್ರ ವಾಗ್ದಾಳಿ!

ಭಾನುವಾರದ ಈ ರ‍್ಯಾಲಿಯು ಮುಖ್ಯವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಎಸ್​ಐಆರ್​​ ವಿರೋಧಿಸಿ ಆಯೋಜಿಸಲಾಗಿತ್ತು. ಮಿಂಟೋ ರಸ್ತೆ-ಕನ್ನಾಟ್ ಪ್ಲೇಸ್ ಜಂಕ್ಷನ್‌ನಿಂದ ರಾಮಲೀಲಾ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಹಿರಿಯ ನಾಯಕರು ಭಾಗವಹಿಸಿದ್ದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, 2024ರ ಲೋಕಸಭೆ ಚುನಾವಣೆ ಅಕ್ರಮವಾಗಿತ್ತು ಎಂದು ಆರೋಪಿಸಿದರು. ಅಲ್ಲದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕಿತ್ತುಹಾಕಿ ಜೈಲಿಗೆ ಕಳುಹಿಸಲಾಗುವುದು ಎಂದು ಗಂಭೀರ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಈ ಬೃಹತ್ ಶಕ್ತಿ ಪ್ರದರ್ಶನಕ್ಕೆ ತಿರುಗೇಟು ನೀಡಿರುವ ಆಡಳಿತರೂಢ ಬಿಜೆಪಿ, ರ‍್ಯಾಲಿಯನ್ನು ಫ್ಲಾಪ್ ಶೋ ಎಂದು ಕರೆದಿದೆ. ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದಂತೆಯೇ ಸಭಿಕರು ಮೈದಾನದಿಂದ ಹೊರಟುಹೋದರು ಎಂದು ಬಿಜೆಪಿ ವ್ಯಂಗ್ಯವಾಡಿದೆ(ಏಜೆನ್ಸೀಸ್).