ಪ್ರಧಾನ್ ರಾಜೀನಾಮೆ ಹಿಂದೆ ನಡೆದದ್ದು ಬೇರೆಯೇ ಕಥೆಯಾ..? ದೆಹಲಿಯಲ್ಲಿ ಹರಿದಾಡುತ್ತಿದ್ದ ಆ ಒಂದು ಚರ್ಚೆಗೆ ಹೊಸ ಟ್ವಿಸ್ಟ್ ಕೊಟ್ಟ ಬಿಜೆಪಿ ಸಂಸದ! | Dharmendra Pradhan

Dharmendra Pradhan | ಪ್ರಧಾನ್ ರಾಜೀನಾಮೆ ಹಿಂದೆ ನಡೆದದ್ದು ಬೇರೆಯೇ ಕಥೆಯಾ..? ದೆಹಲಿಯಲ್ಲಿ ಹರಿದಾಡುತ್ತಿದ್ದ ಆ ಒಂದು ಚರ್ಚೆಗೆ ಹೊಸ ಟ್ವಿಸ್ಟ್ ಕೊಟ್ಟ ಬಿಜೆಪಿ ಸಂಸದ!
Dharmendra Pradhan | ಪ್ರಧಾನ್ ರಾಜೀನಾಮೆ ಹಿಂದೆ ನಡೆದದ್ದು ಬೇರೆಯೇ ಕಥೆಯಾ..? ದೆಹಲಿಯಲ್ಲಿ ಹರಿದಾಡುತ್ತಿದ್ದ ಆ ಒಂದು ಚರ್ಚೆಗೆ ಹೊಸ ಟ್ವಿಸ್ಟ್ ಕೊಟ್ಟ ಬಿಜೆಪಿ ಸಂಸದ!
Published on
ನವದೆಹಲಿ: ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್ ಖಾತೆಯನ್ನು ಬದಲಾಯಿಸುವ ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಪ್ರಸ್ತಾಪವನ್ನು ಕಾಕ್ರೋಚ್ ಜನತಾ ಪಾರ್ಟಿ ನಿಯೋಗವು ತಿರಸ್ಕರಿಸಿದೆ ಎಂಬ ವರದಿಗಳನ್ನು ಬಿಜೆಪಿ ತಳ್ಳಿಹಾಕಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸಂಬಿತ್ ಪಾತ್ರ (Dharmendra Pradhan), ಈ ವರದಿಗಳು ಆಧಾರರಹಿತ ಎಂದು ಹೇಳಿದ್ದಾರೆ.
ಪ್ರಖ್ಯಾತ ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ವರದಿಯು ಸಂಪೂರ್ಣ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅಧಿಕೃತ ವಕ್ತಾರನಾಗಿ ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿಸಲು ಯತ್ನಿಸಬಾರದು ಎಂದು ಸಂಬಿತ್ ಪಾತ್ರ ತಿಳಿಸಿದ್ದಾರೆ.

ಸಿಜೆಪಿ ನಿಯೋಗದ ಪಟ್ಟು ಮತ್ತು ಮೂರನೇ ಹಂತದ ಮಾತುಕತೆ

ಇದಕ್ಕೂ ಮುನ್ನ ಪ್ರಕಟವಾದ ವರದಿಗಳಲ್ಲಿ, ಸಿಜೆಪಿ ನಿಯೋಗವು, ಶಿಕ್ಷಣ ಸಚಿವ ಪ್ರಧಾನ್ ಅವರ ರಾಜೀನಾಮೆಯನ್ನು ಹೊರತುಪಡಿಸಿ ಬೇರೆ ಯಾವುದೇ ಪರ್ಯಾಯ ಪ್ರಸ್ತಾಪವನ್ನು ಒಪ್ಪುವುದಿಲ್ಲ ಎಂದು ಕೇಂದ್ರದ ಆಫರ್ ಅನ್ನು ನೇರವಾಗಿ ತಿರಸ್ಕರಿಸಿತ್ತು ಎಂದು ಹೇಳಲಾಗಿತ್ತು. ಶನಿವಾರ ಮಧ್ಯಾಹ್ನ ಕೇಂದ್ರ ಸಚಿವರೊಂದಿಗೆ ನಡೆದ ಮೂರನೇ ಹಂತದ ಮಾತುಕತೆ ಮುಗಿದ ಕೆಲವೇ ಗಂಟೆಗಳಲ್ಲಿ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ನಂತರ ಸಿಜೆಪಿ ತನ್ನ ಪ್ರತಿಭಟನೆಯನ್ನು ಹಿಂಪಡೆದಿತ್ತು.
ಜುಲೈ 20 ರಂದು ಜಂತರ್ ಮಂತರ್‌ನಿಂದ ಹಮ್ಮಿಕೊಳ್ಳಲಾಗಿದ್ದ ಸಂಸದ್ ಚಲೋ ಮೆರವಣಿಗೆಯ ವೇಳೆ ಸಿಜೆಪಿ ಮತ್ತು ಕೇಂದ್ರದ ನಡುವೆ ಮೊದಲ ಹಂತದ ಮಾತುಕತೆ ನಡೆದಿತ್ತು. ಈ ವೇಳೆ ತಮ್ಮ ಫೋನ್‌ಗಳನ್ನು ಕಸಿದುಕೊಳ್ಳಲಾಗಿತ್ತು ಮತ್ತು ತಮ್ಮನ್ನು ಗೃಹ ಬಂಧನದಲ್ಲಿಡಲಾಗಿತ್ತು ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಆರೋಪಿಸಿದ್ದರು. ಅಲ್ಲದೆ ನಡ್ಡಾ ನಿವಾಸದಲ್ಲಿ 10 ನಿಮಿಷದ ಸಭೆಗಾಗಿ ನಿಯೋಗವು ಎರಡು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಅವರು ಹೇಳಿದ್ದರು.

ಸಿಜೆಪಿಯ ಮೂರು ಪ್ರಮುಖ ಬೇಡಿಕೆಗಳು

ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಿದ ಮನವಿಯಲ್ಲಿ CJP ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿತ್ತು.
  • ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟು, ಪ್ರಸ್ತುತ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಬೇಷರತ್ ಬಿಡುಗಡೆ.
  • ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ/ವಜಾ
  • ನೀಟ್​ ಪೇಪರ್ ಲೀಕ್ ಪ್ರಕರಣದ ನಂತರ ಆತ್ಮಹತ್ಯೆಗೆ ಶರಣಾದ ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ.
ತಟಸ್ಥ ಸ್ಥಳದಲ್ಲಿ ಸಭೆ ಮತ್ತು ಸರ್ಕಾರದ ಸಮ್ಮತಿ
ಸಂಸತ್ ಚಲೋ ಮೆರವಣಿಗೆಯ ನಂತರ ಪ್ರತಿಭಟನೆ ದೇಶವ್ಯಾಪಿ ತೀವ್ರಗೊಂಡಾಗ, ಸಿಜೆಪಿ ನಿಯೋಗವು ನಡ್ಡಾ ನಿವಾಸಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು, ತಟಸ್ಥ ಸ್ಥಳದಲ್ಲಿ ಸಭೆ ನಡೆಸುವಂತೆ ಆಗ್ರಹಿಸಿತ್ತು. ಈ ಬಾರಿ ನಮಗೆ ಬರಿ ಆಶ್ವಾಸನೆಗಳು ಬೇಕಿಲ್ಲ. ನಮ್ಮ ಸಮಯ ವ್ಯರ್ಥ ಮಾಡಬಾರದು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವೇ ಎಷ್ಟು ದಿನಗಳಲ್ಲಿ ಈಡೇರಿಸುತ್ತೀರಿ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಸಿಜೆಪಿ ವಕ್ತಾರ ರಾಂಕಾ ಹೇಳಿದ್ದರು.
ಅಂತಿಮವಾಗಿ ಸರ್ಕಾರವು ತನ್ನ ಪಟ್ಟು ಸಡಲಿಸಿ, ಕಾನ್‌ಸ್ಟಿಟ್ಯೂಷನ್ ಕ್ಲಬ್ ಅನ್ನು ತಟಸ್ಥ ಸ್ಥಳವಾಗಿ ಆಯ್ಕೆ ಮಾಡಿ ಮೂರನೇ ಹಂತದ ಮಾತುಕತೆ ನಡೆಸಿತು. ಅಲ್ಲಿ ದೆಹಲಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿತು.

ಸಂಸತ್ತಿನಲ್ಲಿ ಪ್ರಧಾನ್‌ಗೆ ಗ್ರ್ಯಾಂಡ್ ವೆಲ್‌ಕಮ್!..

ಸೋಮವಾರ ಸಂಸತ್ತಿಗೆ ಆಗಮಿಸಿದ ನಿಕಟಪೂರ್ವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ಗೆ ಎನ್‌ಡಿಎ ನಾಯಕರು ಅದ್ಧೂರಿ ಸ್ವಾಗತ ಕೋರಿದರು. ಪ್ರಧಾನ್ ಅವರಿಗಾಗಿ ಬಿಜೆಪಿ ಸಂಸದರು ಮಕರ್‌ ದ್ವಾರದ ಬಳಿ ಕಾಯ್ದು ನಿಂತು, ಗೌರವಪೂರ್ವಕವಾಗಿ ಒಳಗೆ ಕರೆದೊಯ್ದು ಸಾಂಪ್ರದಾಯಿಕ ಟೋಪಿ ತೊಡಿಸಿ ಬೆಂಬಲ ಸೂಚಿಸಿದರು.
ಇನ್ನೊಂದೆಡೆ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರು, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಧರಣಿ ನಡೆಸಿದರು. ಶಿಕ್ಷಾ ಚೋರಿ (ಶಿಕ್ಷಣದ ಕಳ್ಳತನ) ಎಂದು ಘೋಷಣೆ ಕೂಗಿದ ವಿಪಕ್ಷಗಳು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದವು.

ನಾನು ಸ್ಟ್ರೀಟ್ ಫೈಟರ್: ಕಾಂಗ್ರೆಸ್ ನಾಯಕನಿಗೆ ಪ್ರಧಾನ್ ತಿರುಗೇಟು

ಇದೇ ವೇಳೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸುತ್ತಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಪ್ರಧಾನ್ ರಾಜೀನಾಮೆ ನೀಡಿದ ನಂತರ ಅವರನ್ನು ಭೇಟಿಯಾಗಿ, ಹೀಗೆಲ್ಲಾ ಆಗುತ್ತಿರುತ್ತದೆ ಬಿಡಿ ಎಂದು ಸಾಂತ್ವನ ಹೇಳಿದರು. ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಪ್ರಧಾನ್, ಏನೂ ಆಗಿಲ್ಲ, ನಾನು ಎಸಿ ರೂಮ್ ಕಾರ್ಯಕರ್ತನಲ್ಲ, ಸ್ಟ್ರೀಟ್ ಫೈಟರ್ ಎಂದು ತಿರುಗೇಟು ನೀಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net