ಮತಪತ್ರ VS ಮತಯಂತ್ರ

ಮತಪತ್ರ VS ಮತಯಂತ್ರ
ಮತಪತ್ರ VS ಮತಯಂತ್ರ
Published on
ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಗಳನ್ನು ನಡೆಸುವುದು ಒಂದು ದೊಡ್ಡ ಸವಾಲು. ಈ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (ಇವಿಎಂ) ಕ್ರಾಂತಿಕಾರಿ ಬದಲಾವಣೆಯನ್ನು ತಂದಿವೆ. 1982ರಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬಳಕೆಯಾದ ಇವಿಎಂಗಳು, ಇಂದು ಭಾರತೀಯ ಚುನಾವಣಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಇವಿಎಂಗಳ ಬಳಕೆ ಯಾಕೆ ಒಳ್ಳೆಯದು ಎಂಬುದಕ್ಕೆ ಹಲವು ಕಾರಣಗಳಿವೆ.

ಪಾರದರ್ಶಕ, ತ್ವರಿತ ಮತದಾನ

ಹಿಂದಿನ ಕಾಲದಲ್ಲಿ ಮತಪತ್ರಗಳ (ಬ್ಯಾಲಟ್ ಪೇಪರ್) ಮೂಲಕ ಚುನಾವಣೆ ನಡೆಯುತ್ತಿದ್ದಾಗ, ಫಲಿತಾಂಶ ತಿಳಿಯಲು ದಿನಗಟ್ಟಲೆ ಕಾಯಬೇಕಿತ್ತು. ಆದರೆ ಇವಿಎಂಗಳ ಬಳಕೆಯಿಂದಾಗಿ ಮತ ಎಣಿಕೆ ಅತ್ಯಂತ ವೇಗವಾಗಿ ನಡೆಯುತ್ತದೆ. ಕೆಲವೇ ಕೆಲವು ಗಂಟೆಗಳಲ್ಲಿ ಕೋಟ್ಯಂತರ ಮತಗಳ ಫಲಿತಾಂಶ ಲಭ್ಯವಾಗುತ್ತದೆ. ಇದು ಚುನಾವಣಾ ಪ್ರಕ್ರಿಯೆಯಲ್ಲಿನ ಅನಿಶ್ಚಿತತೆಯನ್ನು ಕಡಿಮೆ ಮಾಡಿದೆ.

ಕಾಗದ ಉಳಿತಾಯ, ಪರಿಸರ ರಕ್ಷಣೆ

ಮತಪತ್ರಗಳಿಗಾಗಿ ಲಕ್ಷಾಂತರ ಟನ್ ಕಾಗದ ಬೇಕಾಗುತ್ತಿತ್ತು. ಇದಕ್ಕಾಗಿ ಸಾವಿರಾರು ಮರಗಳನ್ನು ಕಡಿಯಬೇಕಿತ್ತು. ಇವಿಎಂಗಳ ಬಳಕೆಯಿಂದಾಗಿ ಕಾಗದದ ಅವಶ್ಯಕತೆ ಇಲ್ಲದಂತಾಗಿದೆ. ಅಷ್ಟರಮಟ್ಟಿಗೆ ಪರಿಸರವನ್ನು ಉಳಿಸಿದಂತೆ. ಅಲ್ಲದೆ, ಮತಪತ್ರಗಳನ್ನು ಮುದ್ರಿಸುವ, ಸಾಗಿಸುವ ಮತ್ತು ಸಂಗ್ರಹಿಸುವ ವೆಚ್ಚವೂ ಭಾರಿ ಪ್ರಮಾಣದಲ್ಲಿ ಇರುತ್ತಿತ್ತು.

ಅಕ್ರಮಗಳಿಗೆ ಕಡಿವಾಣ

ಮತಪತ್ರಗಳ ಕಾಲದಲ್ಲಿ ಮತಗಟ್ಟೆ ವಶ (ಬೂತ್ ಕ್ಯಾಪ್ಚರಿಂಗ್) ಮಾಡಿಕೊಂಡು ನೂರಾರು ಮತಗಳನ್ನು ಏಕಕಾಲಕ್ಕೆ ಒತ್ತುವ ಅಕ್ರಮಗಳು ಕೆಲವೆಡೆ ನಡೆಯುತ್ತಿದ್ದವು. ಮತಪೆಟ್ಟಿಗೆಗಳ ಒಳಗೆ ಶಾಯಿ ಸುರಿಯುವ ಘಟನೆಗಳೂ ಇದ್ದವು. ಆದರೆ ಇವಿಎಂಗಳಲ್ಲಿ ಪ್ರತಿ ನಿಮಿಷಕ್ಕೆ ಕೇವಲ 5 ಮತಗಳನ್ನು ಮಾತ್ರ ಚಲಾಯಿಸಲು ಸಾಧ್ಯವಾಗುವಂತೆ ಪ್ರೋಗ್ರಾಂ ಮಾಡಲಾಗಿರುತ್ತದೆ. ಇದು ಸಾಮೂಹಿಕ ಅಕ್ರಮ ಮತದಾನವನ್ನು ತಡೆಯುತ್ತದೆ. ಒಮ್ಮೆ ಕ್ಲೋಸ್ ಬಟನ್ ಒತ್ತಿದರೆ, ನಂತರ ಯಾವುದೇ ಮತ ದಾಖಲಿಸಲು ಸಾಧ್ಯವಿಲ್ಲ.

ದೋಷರಹಿತ ಮತದಾನ

ಮತಪತ್ರಗಳಲ್ಲಿ ಮತದಾರರು ಸರಿಯಾದ ಜಾಗದಲ್ಲಿ ಮುದ್ರೆ ಒತ್ತದಿದ್ದರೆ ಅಥವಾ ಶಾಯಿ ಹರಡಿಕೊಂಡರೆ ಆ ಮತಗಳು ತಿರಸ್ಕೃತಗೊಳ್ಳುತ್ತಿದ್ದವು. ಆದರೆ ಇವಿಎಂನಲ್ಲಿ ಬಟನ್ ಒತ್ತುವ ಮೂಲಕ ಮತ ಚಲಾಯಿಸುವುದರಿಂದ ಮತಗಳು ವ್ಯರ್ಥವಾಗುವ ಸಾಧ್ಯತೆ ಇಲ್ಲ. ಇದರಿಂದ ಪ್ರತಿಯೊಬ್ಬ ಮತದಾರನ ಹಕ್ಕು ಸರಿಯಾದ ಅಭ್ಯರ್ಥಿಗೆ ತಲುಪುವಂತಾಗುತ್ತದೆ.

ಸುಪ್ರೀಂಕೋರ್ಟ್ ಹೇಳೋದೇನು?

ಇವಿಎಂ- ಮತಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 2024ರ ಏಪ್ರಿಲ್ ಮತ್ತು ನವೆಂಬರ್​ನಲ್ಲಿ ನೀಡಿದ ತೀರ್ಪಗಳಲ್ಲಿ ಅತ್ಯಂತ ಸ್ಪಷ್ಟವಾದ ನಿಲುವನ್ನು ತಳೆದಿದೆ. ಮತಪತ್ರ ವ್ಯವಸ್ಥೆಗೆ ಮರಳಲು ಸಾರಾಸಗಟಾಗಿ ನಿರಾಕರಿಸಿದೆ. ಹಳೆಯ ಕಾಲದ ಅಕ್ರಮಗಳನ್ನು ನೆನಪಿಸಿದ ಕೋರ್ಟ್ ಇವಿಎಂ ವ್ಯವಸ್ಥೆ ಹೆಚ್ಚು ಸುರಕ್ಷಿತ ಮತ್ತು ಸುಧಾರಿತ ಎಂದಿದೆ. ‘ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತವೆ, ಮಾನವ ಹಸ್ತಕ್ಷೇಪವೇ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಕೇವಲ ಶಂಕೆಯ ಆಧಾರದ ಮೇಲೆ ವ್ಯವಸ್ಥೆಯನ್ನು ದೂಷಿಸಬಾರದು’ ಎಂದು ಅಭಿಪ್ರಾಯಪಟ್ಟಿದೆ. ‘ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಚೆನ್ನಾಗಿವೆ ಎನ್ನುತ್ತೀರಿ, ಸೋತಾಗ ದೂಷಿಸುತ್ತೀರಿ’ ಎಂಬ ಮೌಖಿಕ ಟಿಪ್ಪಣಿಯನ್ನೂ ಮಾಡಿದೆ. ಇವಿಎಂ ವ್ಯವಸ್ಥೆ ಪಾರದರ್ಶಕವಾಗಿದ್ದು, ಇದನ್ನು ಬದಲಿಸುವ ಅಗತ್ಯವಿಲ್ಲ ಎಂಬುದು ಸುಪ್ರೀಂಕೋರ್ಟ್​ನ ಅಂತಿಮ ನಿಲುವು.

ತಾಂತ್ರಿಕ ಭದ್ರತೆ, ವಿಶ್ವಾಸಾರ್ಹತೆ

ದೇಶದ ಇವಿಎಂಗಳು ’ಸ್ಟಾ್ಯಂಡ್-ಅಲೋನ್’ ಯಂತ್ರಗಳು. ಇವುಗಳಿಗೆ ಇಂಟರ್ನೆಟ್, ವೈಫೈ, ಬ್ಲ್ಯೂ್ಲೂತ್ ಸಂಪರ್ಕ ಇರುವುದಿಲ್ಲ. ಹಾಗಾಗಿ ಇವುಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಇವಿಎಂ ಜೊತೆಗೆ ವಿವಿ ಪ್ಯಾಟ್ (ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರೇಲ್) ಯಂತ್ರವನ್ನೂ ಸೇರಿಸಲಾಗಿದೆ. ಇದರಿಂದ ಮತದಾರ ತಾನು ಹಾಕಿದ ಮತ ಸರಿಯಾದ ಅಭ್ಯರ್ಥಿಗೆ ಹೋಗಿದೆಯೇ ಎಂದು ಕಣ್ಣಾರೆ ನೋಡಬಹುದು. ಇದು ಮತದಾನದ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ.

ಬಳಸಲು ಸುಲಭ

ಅನಕ್ಷರಸ್ಥರೂ ಇವಿಎಂ ಬಳಸುವುದು ಸುಲಭ. ಅಭ್ಯರ್ಥಿಯ ಹೆಸರು, ಚಿಹ್ನೆಯ ಪಕ್ಕದಲ್ಲಿರುವ ಬಟನ್ ಒತ್ತುವ ಮೂಲಕ ಸುಲಭವಾಗಿ ಮತ ಚಲಾಯಿಸಬಹುದು. ಇದು ಮತದಾನದ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಯಾವುದೇ ತಂತ್ರಜ್ಞಾನದ ಬಗ್ಗೆ ಸಂಶಯಗಳು ಇರುವುದು ಸಹಜ, ಆದರೆ ಇವಿಎಂಗಳು ಕಾಲಕಾಲಕ್ಕೆ ಸುಧಾರಣೆಗೊಳ್ಳುತ್ತ ಬಂದಿವೆ. ಚುನಾವಣಾ ಆಯೋಗ ಕಟ್ಟುನಿಟ್ಟಿನ ಭದ್ರತಾ ನಿಯಮಗಳಡಿ ಇವುಗಳನ್ನು ಬಳಸುತ್ತಿರುವುದರಿಂದ, ಇವಿಎಂಗಳು ಚುನಾವಣಾ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ ಮತ್ತು ಪಾರದರ್ಶಕಗೊಳಿಸಿವೆ.

ಇವಿಎಂಗಳಿಗೇಕೆ ವಿರೋಧ?

ದೇಶದಲ್ಲಿ ಇವಿಎಂ ಮತ್ತು ಮತಪತ್ರಗಳ ಪೈಕಿ ಯಾವುದು ಒಳ್ಳೆಯದು ಎಂಬುದರ ಕುರಿತ ಚರ್ಚೆ ದಶಕಗಳಿಂದ ನಡೆಯುತ್ತಲೇ ಇದೆ. ಅಭಿವೃದ್ಧಿ ಹೊಂದಿದ ಹಲವು ರಾಷ್ಟ್ರಗಳು (ಉದಾಹರಣೆಗೆ ಜರ್ಮನಿ, ನೆದರ್ಲ್ಯಾಂಡ್ಸ್) ಇಂದಿಗೂ ಮತಪತ್ರಗಳನ್ನೇ ಅವಲಂಬಿಸಿವೆ. ಮತಪತ್ರಗಳ ಬಳಕೆಯೇ ಒಳ್ಳೆಯದು ಎಂಬ ವಾದ ಮುಂದಿಡುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಅದಕ್ಕೆ ಅವರು ಹಲವು ಕಾರಣಗಳನ್ನೂ ಕೊಡುತ್ತಾರೆ.
ಇದು ನಂಬಿಕೆಯ ವಿಷಯ: ಮತಪತ್ರ ವ್ಯವಸ್ಥೆಯಲ್ಲಿ ಮತದಾರ ತನ್ನ ಕಣ್ಣೆದುರೇ ಗುರುತು ಹಾಕಿ, ಅದನ್ನು ಮಡಚಿ ಪೆಟ್ಟಿಗೆಗೆ ಹಾಕುತ್ತಾನೆ. ಇದರಲ್ಲಿ ಯಾವುದೇ ಅದೃಶ್ಯ ತಂತ್ರಜ್ಞಾನ ಇರುವುದಿಲ್ಲ. ತಂತ್ರಜ್ಞಾನದ ಅರಿವಿಲ್ಲದ ಸಾಮಾನ್ಯ ಜನರಿಗೂ ಈ ಪ್ರಕ್ರಿಯೆ ಸುಲಭವಾಗಿ ಅರ್ಥವಾಗುತ್ತದೆ. ಇದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.
ಹ್ಯಾಕಿಂಗ್​ನ ಭಯವಿಲ್ಲ: ಇವಿಎಂಗಳು ಇಂಟರ್ನೆಟ್​ಗೆ ಸಂಪರ್ಕ ಹೊಂದಿಲ್ಲದಿದ್ದರೂ, ಅವುಗಳಲ್ಲಿರುವ ‘ಚಿಪ್’ ಅಥವಾ ಸಾಫ್ಟ್​ವೇರನ್ನು ಮ್ಯಾನಿಪ್ಯುಲೇಟ್ ಮಾಡಬಹುದು ಎಂಬ ಆತಂಕ ಹಲವರಲ್ಲಿ ಇದೆ. ಮತಪತ್ರಗಳು ಕೇವಲ ಭೌತಿಕ ವಸ್ತುಗಳಾಗಿರುವುದರಿಂದ ಅವುಗಳನ್ನು ದೂರದ ಊರಿನಿಂದ ಅಥವಾ ಸಾಫ್ಟ್​ವೇರ್ ಬಳಸಿ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇದು ತಾಂತ್ರಿಕ ವಂಚನೆಯ ಸಾಧ್ಯತೆಯನ್ನು ಶೂನ್ಯಕ್ಕೆ ಇಳಿಸುತ್ತದೆ ಎಂಬುದು ಅವರ ವಾದ.
ಮರುಪರಿಶೀಲನೆಗೆ ಅನುಕೂಲ: ಯಾವುದಾದರೂ ಕ್ಷೇತ್ರದಲ್ಲಿ ಫಲಿತಾಂಶದ ಬಗ್ಗೆ ಅನುಮಾನ ಬಂದಾಗ, ಮತಪತ್ರಗಳನ್ನು ಮರುಎಣಿಕೆ ಮಾಡುವುದು ಅತ್ಯಂತ ಸರಳ ಮತ್ತು ಭೌತಿಕವಾಗಿ ಸಾಧ್ಯವಾಗುವ ಕೆಲಸ. ಇವಿಎಂಗಳಲ್ಲಿ ಬಟನ್ ಒತ್ತಿದಾಗ ದತ್ತಾಂಶ ಹೇಗೆ ದಾಖಲಾಗುತ್ತದೆ ಎಂಬುದು ಮತದಾರನಿಗೆ ತಿಳಿಯುವುದಿಲ್ಲ. ವಿವಿಪ್ಯಾಟ್ ಇದ್ದರೂ, ಎಲ್ಲ ಸ್ಲಿಪ್​ಗಳನ್ನು ಎಣಿಸುವುದಕ್ಕೆ ಸಮಯ ಬೇಕು. ಮತಪತ್ರಗಳಿದ್ದರೆ, ಆರಂಭದಿಂದ ಅಂತ್ಯದವರೆಗೆ ಸಂಪೂರ್ಣ ಎಣಿಕೆ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಕಣ್ಣೆದುರೇ ಪಾರದರ್ಶಕವಾಗಿ ನಡೆಸಬಹುದು ಎಂಬುದು ಇವಿಎಂ ವಿರೋಧಿಗಳ ಅನಿಸಿಕೆ.
ಅಭಿವೃದ್ಧಿ ಹೊಂದಿದ ದೇಶಗಳ ಉದಾಹರಣೆ : ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದಿರುವ ಜರ್ಮನಿ, ಫ್ರಾನ್ಸ್, ಜಪಾನ್​ನಂತಹ ದೇಶಗಳು ಇಂದಿಗೂ ಮತಪತ್ರಗಳನ್ನು ಬಳಸುತ್ತಿವೆ. ತಂತ್ರಜ್ಞಾನವು ಮತದಾರ ಮತ್ತು ಅವನ ಮತದ ನಡುವೆ ಒಂದು ಗೋಡೆಯನ್ನು ಸೃಷ್ಟಿಸಬಾರದು ಎಂಬುದು ಈ ರಾಷ್ಟ್ರಗಳ ವಾದ.
ಸಾಫ್ಟ್​ವೇರ್ ದೋಷ ಇರದು: ಯಾವುದೇ ಎಲೆಕ್ಟ್ರಾನಿಕ್ ಸಾಧನ ಒಂದು ಹಂತದಲ್ಲಿ ತಾಂತ್ರಿಕ ದೋಷ ಅಥವಾ
ಸಾಫ್ಟ್​ವೇರ್ ಬಗ್​ಗೆ ಒಳಗಾಗಬಹುದು. ಚುನಾವಣೆಯಂತಹ ನಿರ್ಣಾಯಕ ಸಮಯದಲ್ಲಿ ಯಂತ್ರ ಕೆಟ್ಟುಹೋದರೆ ಮತದಾನ ಸ್ಥಗಿತಗೊಳ್ಳುತ್ತದೆ. ಆದರೆ ಹಳೇ ವ್ಯವಸ್ಥೆಯಲ್ಲಿ ಇಂತಹ ತಾಂತ್ರಿಕ ಅಡೆತಡೆಗಳು ಉಂಟಾಗುವುದಿಲ್ಲ ಎನ್ನುತ್ತಾರೆ ಮತಪತ್ರದ ಪರ ವಾದಿಸುವ ಜನ.
ಗೋಪ್ಯತೆಯ ರಕ್ಷಣೆ : ಇವಿಎಂ ಎಣಿಕೆ ಸಮಯದಲ್ಲಿ ಪ್ರತಿ ಬೂತ್​ನಲ್ಲಿ ಯಾರಿಗೆ ಎಷ್ಟು ಮತ ಬಿದ್ದಿದೆ ಎಂಬುದು ತಕ್ಷಣ ತಿಳಿಯುತ್ತದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ನಿರ್ದಿಷ್ಟ ಪಕ್ಷಕ್ಕೆ ಮತ ಬೀಳದಿದ್ದರೆ, ಆ ಪ್ರದೇಶದ ಜನರ ಮೇಲೆ ರಾಜಕೀಯ ದ್ವೇಷ ಸಾಧಿಸುವ ಸಾಧ್ಯತೆ ಇರುತ್ತದೆ. ಮತಪತ್ರಗಳಿದ್ದಾಗ, ಎಲ್ಲ ಪೆಟ್ಟಿಗೆಗಳ ಮತಪತ್ರಗಳನ್ನು ಒಟ್ಟಿಗೆ ಸೇರಿಸಿ (ಮಿಕ್ಸಿಂಗ್ ಮಾಡಿ) ಎಣಿಕೆ ಮಾಡಲಾಗುತ್ತಿತ್ತು, ಇದರಿಂದ ಯಾವ ಬೂತ್​ನಲ್ಲಿ ಯಾರಿಗೆ ಮತ ಬಂದಿದೆ ಎಂಬುದು ರಹಸ್ಯವಾಗಿರುತ್ತಿತ್ತು. ಮತಪತ್ರಗಳ ಬಳಕೆಯಲ್ಲಿ ಸಮಯದ ವಿಳಂಬ ಮತ್ತು ವೆಚ್ಚದ ಸವಾಲುಗಳಿದ್ದರೂ, ಪ್ರಜಾಪ್ರಭುತ್ವದ ಜೀವಾಳ ಎನಿಸಿದ ‘ಜನರ ವಿಶ್ವಾಸ’ವನ್ನು ಉಳಿಸಿಕೊಳ್ಳಲು ಇದು ಸಹಕಾರಿ ಎಂಬುದು ಅದರ ಬೆಂಬಲಿಗರ ವಾದ.

ರಾಜಕೀಯ ವಿಪರ್ಯಾಸ

ಈಗ ದೇಶದಲ್ಲಿ ಬಿಜೆಪಿಯವರು ಇವಿಎಂ ಪರ ಮತ್ತು ಕಾಂಗ್ರೆಸ್​ನವರು ಮತಪತ್ರಗಳ ಪರ ನಿಂತಿದ್ದಾರೆ. ಆದರೆ ಹಿಂದೊಮ್ಮೆ ಬಿಜೆಪಿ ಹಿರಿಯ ನಾಯಕ ಎಲ್​ಕೆ ಆಡ್ವಾಣಿ ಇವಿಎಂ ವಿರೋಧಿಸಿದ್ದರಲ್ಲದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಇವಿಎಂ ಪರ ನಿಂತಿದ್ದರು ಎಂಬುದು ವಿಪರ್ಯಾಸವಾದರೂ ಸತ್ಯ. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ನಂತರ, ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರು ಇವಿಎಂಗಳ ವಿಶ್ವಾಸಾರ್ಹತೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು.
‘ಇವಿಎಂಗಳಲ್ಲಿ ಅಕ್ರಮ ಎಸಗಲು ಸಾಧ್ಯವಿಲ್ಲ ಎಂದು ಹೇಳಲಾಗದು, ಆದ್ದರಿಂದ ಮತ್ತೆ ಮತಪತ್ರಗಳನ್ನೇ ಬಳಸಬೇಕು ಅಥವಾ ಪ್ರತಿಯೊಂದು ಮತಕ್ಕೂ ಕಾಗದದ ಪುರಾವೆ ಇರಬೇಕು’ ಎಂದು ಅವರು ಒತ್ತಾಯಿಸಿದ್ದರು. ಮತ್ತೊಂದೆಡೆ, ಭಾರತಕ್ಕೆ ಇವಿಎಂ ತಂತ್ರಜ್ಞಾನವನ್ನು ಪರಿಚಯಿಸಿದ ಕೀರ್ತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ. 1980ರ ದಶಕದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಆಧುನೀಕರಿಸಲು ಅವರು ಮುಂದಾದರು. ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಇವಿಎಂಗಳ ಬಳಕೆಗೆ ಕಾನೂನು ಮಾನ್ಯತೆ ನೀಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net