ಗುವಾಹಟಿ: ರಸ್ತೆ ಅಪಘಾತವೊಂದರಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಇದೇ ಭೀಕರ ಅಪಘಾತದಲ್ಲಿ ಕೇವಲ ಎರಡು ವರ್ಷದ ಪುಟ್ಟ ಬಾಲಕನೊಬ್ಬ ಬದುಕುಳಿದಿದ್ದಾನೆ. ಅಚ್ಚರಿಯ ಸಂಗತಿಯೆಂದರೆ, ಬದುಕುಳಿದ ಮಗುವಿನ ಪೋಷಕರು ಯಾರು ಎಂಬುದೇ ಇನ್ನೂ ಪತ್ತೆಯಾಗಿಲ್ಲ. ಅಪಘಾತದಲ್ಲಿ ಮಗು ತನ್ನ ಕುಟುಂಬದವರನ್ನು ಕಳೆದುಕೊಂಡಿದೆಯೇ? ಅದರ ತಂದೆ-ತಾಯಿ ಎಲ್ಲಿ? ಸದ್ಯ ಈ ಪುಟ್ಟ ಕಂದನ ಮುಂದಿನ ಆರೈಕೆಯ ಬಗ್ಗೆ ಅಧಿಕಾರಿಗಳು ಚಿಂತಿತರಾಗಿದ್ದಾರೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪದ ಗೋಲಾಘಾಟ್ ಜಿಲ್ಲೆಯ ರಂಗಾಜನ್ ಪ್ರದೇಶದಲ್ಲಿ ಶುಕ್ರವಾರ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಹಾಗೂ ಕಂಟೇನರ್ ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ವಾಹನಗಳು ಜಖಂಗೊಂಡಿದ್ದು, ಸ್ಥಳದಲ್ಲೇ ಹಲವರು ಮೃತಪಟ್ಟಿದ್ದಾರೆ. ಶನಿವಾರದ ವೇಳೆಗೆ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಅಪ್ರಾಪ್ತ ವಯಸ್ಸಿನವರೂ ಸೇರಿದ್ದಾರೆ.
ಈ ಭೀಕರ ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದವರಿಗೆ ಸುಮಾರು ಎರಡು ವರ್ಷದ ಬಾಲಕ ಬದುಕುಳಿದಿರುವುದು ತಿಳಿದುಬಂದಿದೆ. ಬಾಲಕನ ಹಣೆಯ ಭಾಗದಲ್ಲಿ ಗಾಯವಾಗಿದ್ದು, ತಕ್ಷಣವೇ ಸಮೀಪದ ಸ್ವಹೀದ್ ಕಮಲಾ ಮಿರಿ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಮಗುವನ್ನು ರಾತ್ರಿಯಿಡೀ ನಿಗಾದಲ್ಲಿರಿಸಿದ್ದರು. ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಗೋಲಾಘಾಟ್ ಜಿಲ್ಲಾ ಆಸ್ಪತ್ರೆಗೆ ಸಿಟಿ ಸ್ಕ್ಯಾನ್‌ಗೆ ಕಳುಹಿಸಲು ನಿರ್ಧರಿಸಿದ್ದಾರೆ. ಆಸ್ಪತ್ರೆಯ ವೈದ್ಯಾಧಿಕಾರಿ ಅಜಿತ್ ಕಾಕತಿ ಅವರ ಪ್ರಕಾರ, ಮಗುವಿನ ಆರೋಗ್ಯ ಸದ್ಯ ಸ್ಥಿರವಾಗಿದೆ. ಮಗುವಿನ ಆರೈಕೆಗಾಗಿ ಒಬ್ಬ ನರ್ಸ್ ಹಾಗೂ ವಾರ್ಡ್‌ನ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಪಘಾತದಲ್ಲಿ ಬದುಕುಳಿದಿರುವ ಮಗುವಿನ ಪೋಷಕರ ಗುರುತು ಪತ್ತೆಹಚ್ಚುವುದು ಈಗ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಮಗು ತನ್ನ ತಾಯಿಯೊಂದಿಗೆ ಪ್ರಯಾಣಿಸುತ್ತಿತ್ತು ಎಂಬ ಮಾಹಿತಿ ಕೆಲವರಿಂದ ಲಭ್ಯವಾಗಿದೆಯಾದರೂ, ಆಕೆಯ ಗುರುತು ಹಾಗೂ ತಂದೆಯ ವಿವರಗಳು ಇನ್ನೂ ಪತ್ತೆಯಾಗಿಲ್ಲ. ಮಗುವನ್ನು ಕರೆದುಕೊಂಡು ಹೋಗಲು ಈವರೆಗೆ ಯಾರೂ ಮುಂದೆ ಬಂದಿಲ್ಲ ಎಂದು ಬೊಕಾಖಾಟ್ ಉಪಜಿಲ್ಲಾಧಿಕಾರಿ ಸುಜಾತಾ ಗೊಗೊಯ್ ತಿಳಿಸಿದ್ದಾರೆ.
ಮಗುವಿನ ಕುಟುಂಬದ ಬಗ್ಗೆ ಮಾಹಿತಿ ಇರುವವರು ಮುಂದೆ ಬಂದು ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ. ಒಂದು ವೇಳೆ ಪೋಷಕರು ಅಥವಾ ಕುಟುಂಬದವರು ಪತ್ತೆಯಾಗದಿದ್ದರೆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿ ಮುಂದಿನ ಆರೈಕೆ ಮತ್ತು ರಕ್ಷಣೆಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಿನಿಬಸ್ ಅತಿವೇಗದಲ್ಲಿ ಚಲಿಸುತ್ತಿದ್ದ ಕಾರಣ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ. ಆದರೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಅಪಘಾತದಲ್ಲಿ ಗಾಯಗೊಂಡ ಕನಿಷ್ಠ 15 ಮಂದಿ ಜೋರ್ಹಾಟ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟ 26 ಮಂದಿಯಲ್ಲಿ ಇಬ್ಬರ ಗುರುತು ಕೂಡ ಇನ್ನೂ ಪತ್ತೆಯಾಗಿಲ್ಲ. ಮೃತದೇಹಗಳ ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ.
ಒಂದೆಡೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು ದುಃಖದಲ್ಲಿ ಮುಳುಗಿದ್ದರೆ, ಮತ್ತೊಂದೆಡೆ ತನ್ನವರಿಗಾಗಿ ಕಾಯುತ್ತಿರುವ ಎರಡು ವರ್ಷದ ಮಗುವಿನ ಪರಿಸ್ಥಿತಿ ಎಲ್ಲರ ಮನಕಲಕುವಂತಿದೆ. ಈ ಪುಟ್ಟ ಕಂದನ ಹೆತ್ತವರು ಪತ್ತೆಯಾಗುತ್ತಾರೆಯೇ? ಮತ್ತೆ ತನ್ನ ಕುಟುಂಬದ ಮಡಿಲು ಸೇರುತ್ತದೆಯೇ ಎಂಬ ಪ್ರಶ್ನೆ ಈಗ ಎಲ್ಲರ ಮುಂದಿದೆ.