ಬಂಗಾಳದಲ್ಲಿ ದೀದಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ!; ಇದು ಟಿಎಂಸಿ ದೌರ್ಜನ್ಯಕ್ಕೆ ಸಿಕ್ಕ ಸಾರ್ವಜನಿಕ ಆಕ್ರೋಶದ ಪ್ರತಿಫಲ ಎಂದ ಸಚಿವೆ ಅಗ್ನಿಮಿತ್ರಾ ಪಾಲ್! Agnimitra Pal on Abhishek Banerjee

ಬಂಗಾಳದಲ್ಲಿ ದೀದಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ!; ಇದು ಟಿಎಂಸಿ ದೌರ್ಜನ್ಯಕ್ಕೆ ಸಿಕ್ಕ ಸಾರ್ವಜನಿಕ ಆಕ್ರೋಶದ ಪ್ರತಿಫಲ ಎಂದ ಸಚಿವೆ ಅಗ್ನಿಮಿತ್ರಾ ಪಾಲ್!
ಬಂಗಾಳದಲ್ಲಿ ದೀದಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ!; ಇದು ಟಿಎಂಸಿ ದೌರ್ಜನ್ಯಕ್ಕೆ ಸಿಕ್ಕ ಸಾರ್ವಜನಿಕ ಆಕ್ರೋಶದ ಪ್ರತಿಫಲ ಎಂದ ಸಚಿವೆ ಅಗ್ನಿಮಿತ್ರಾ ಪಾಲ್!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಭುಗಿಲೆದ್ದಿರುವ ರಾಜಕೀಯ ಹಿಂಸಾಚಾರ ಈಗ ಮತ್ತೊಂದು ಭೀಕರ ಹಂತ ತಲುಪಿದೆ. ಟಿಎಂಸಿ ಹೈಕಮಾಂಡ್ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ(Agnimitra Pal on Abhishek Banerjee) ಅವರ ಮೇಲೆ ನಡೆದ ಹಲ್ಲೆಯು ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಚುನಾವಣೆ ನಂತರದ ಹಿಂಸಾಚಾರ ಪೀಡಿತ ಕುಟುಂಬಗಳನ್ನು ಭೇಟಿ ಮಾಡಲು ಸೋನಾರ್‌ಪುರಕ್ಕೆ ತೆರಳಿದ್ದ ವೇಳೆ ಅಭಿಷೇಕ್ ಬ್ಯಾನರ್ಜಿ ಅವರ ಕಾರು ಮತ್ತು ಬೆಂಗಾವಲು ಪಡೆಯ ಮೇಲೆ ದುಷ್ಕರ್ಮಿಗಳು ಇಟ್ಟಿಗೆ, ಕಲ್ಲು ಹಾಗೂ ಮೊಟ್ಟೆಗಳಿಂದ ಭೀಕರವಾಗಿ ದಾಳಿ ನಡೆಸಿದ್ದಾರೆ.
ಈ ರಕ್ತಸಿಕ್ತ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ನಾಯಕಿ ಮತ್ತು ರಾಜ್ಯ ಸಚಿವೆ ಅಗ್ನಿಮಿತ್ರಾ ಪಾಲ್ (Agnimitra Paul), ಈ ದಾಳಿಯು ಸಾರ್ವಜನಿಕರ ಆಕ್ರೋಶದ ಸಂಕೇತವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಅಲ್ಲದೆ, ಕಳೆದ 15 ವರ್ಷಗಳಿಂದ ಟಿಎಂಸಿ ನಡೆಸುತ್ತಿರುವ ಹಿಂಸಾತ್ಮಕ ರಾಜಕಾರಣ ಮತ್ತು ದೌರ್ಜನ್ಯಗಳ ವಿರುದ್ಧ ಜನರೇ ಬೀದಿಗಿಳಿದು ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಪಾಲ್ ಆರೋಪಿಸಿದ್ದಾರೆ.

"ಹೀರೋ ತರ ಆಡೋಕೆ ಹೋಗ್ಬೇಡಿ" — ದಿಲೀಪ್ ಘೋಷ್ ತೀಕ್ಷ್ಣ ವಾಗ್ದಾಳಿ!

ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಯನ್ನು ಹಿರಿಯ ಬಿಜೆಪಿ ನಾಯಕ ದಿಲೀಪ್ ಘೋಷ್ ಖಂಡಿಸಿದ್ದಾರಾದರೂ, ಬಂಗಾಳದ ಸಾರ್ವಜನಿಕರಲ್ಲಿ ಮನೆಮಾಡಿರುವ ತೀವ್ರ ಅಸಮಾಧಾನವೇ ಇದಕ್ಕೆ ಪ್ರಮುಖ ಕಾರಣ ಎಂದು ವಾದಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿಗೆ ಹೀಗಾಗಬಾರದಿತ್ತು. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು, ಆದರೆ ಕಳೆದ 15 ವರ್ಷಗಳಿಂದ ಟಿಎಂಸಿ ನೀಡುತ್ತಿರುವ ಕಿರುಕುಳವನ್ನು ಬಂಗಾಳದ ಪ್ರತಿಯೊಬ್ಬ ನಾಗರಿಕನೂ ಅನುಭವಿಸುತ್ತಿದ್ದಾನೆ. ಆ ಆಕ್ರೋಶ ಎಲ್ಲೋ ಒಂದು ಕಡೆ ಹೊರಬರಲೇಬೇಕಲ್ಲವೇ ಎಂದು ಘೋಷ್ ಪ್ರಶ್ನಿಸಿದ್ದಾರೆ.
ಚುನಾವಣಾ ಫಲಿತಾಂಶಗಳನ್ನು ನೋಡಿದ ಮೇಲಾದರೂ ಅಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿತ್ತು ಎಂದಿರುವ ಘೋಷ್, 22 ಕಾರುಗಳ ಬೆಂಗಾವಲು ಪಡೆಯೊಂದಿಗೆ ಓಡಾಡುವ ನೀವು ಅಲ್ಲಿ ಹೀರೋ ತರ ಆಡಲು ಯಾಕೆ ಹೋದಿರಿ ಎಂದಿದ್ದಾರೆ. ಅಲ್ಲದೆ, ಸಾರ್ವಜನಿಕರು ಎಲ್ಲವನ್ನೂ ನೋಡುತ್ತಿದ್ದಾರೆ ಮತ್ತು ಅವರು ಕೇವಲ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ನೀವೇಕೆ ಜನರಿಗೆ ಅಂತಹ ಅವಕಾಶಗಳನ್ನು ಮಾಡಿಕೊಡುತ್ತಿದ್ದೀರಿ ಎಂದು ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದು ನನ್ನನ್ನು ಕೊಲ್ಲುವ ಬಿಜೆಪಿ ಪ್ರಾಯೋಜಿತ ಸಂಚು! - ಕಣ್ಣಿಗೆ ಗಾಯವಾದ ಆಕ್ರೋಶ

ಇನ್ನೊಂದೆಡೆ, ಈ ದಾಳಿಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಅವರು ನನ್ನ ಇಟ್ಟಿಗೆಯಿಂದ ಹೊಡೆದರು, ನನ್ನ ಕಣ್ಣು ತೆರೆಯಲು ಸಾಧ್ಯವಾಗುತ್ತಿಲ್ಲ. ನಾನು ಹೆಲ್ಮೆಟ್ ಧರಿಸಿದ್ದೆ, ಇಲ್ಲದಿದ್ದರೆ ನನ್ನ ತಲೆ ಎರಡು ಭಾಗವಾಗುತ್ತಿತ್ತು. ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಹೈಕೋರ್ಟ್ ಮತ್ತು ರಾಜ್ಯಪಾಲರಿಗೆ ದೂರು ನೀಡಿ ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಈ ದಾಳಿಯ ಹಿಂದೆ ಸಂಪೂರ್ಣವಾಗಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಸುಸ್ಮಿತಾ ದತ್ತಾ ಎಂಬ ಬಿಜೆಪಿ ಕಾರ್ಯಕರ್ತೆಯು ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಆಧಾರಗಳನ್ನು ಬಿಡುಗಡೆ ಮಾಡಿರುವ ಮೊಯಿತ್ರಾ, ಬಿಜೆಪಿಯ ಅಸಭ್ಯ ಮತ್ತು ಜಂಗಲಿ ಸಂಸ್ಕೃತಿ ಇದು. ಸಾಮಾನ್ಯ ಜನರು ದಾಳಿ ನಡೆಸುತ್ತಿಲ್ಲ, ಇದು ಬಿಜೆಪಿ ಪ್ರಾಯೋಜಿತ ಗೂಂಡಾಗಿರಿ ಎಂದು ಎಕ್ಸ್​ನಲ್ಲಿ ಕಿಡಿಕಾರಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ಗಾಯಗೊಂಡಿರುವ ಅಭಿಷೇಕ್ ಅವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡದಂತೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಹತ್ಯೆಗಳು ಮತ್ತು ಹಿರಿಯ ನಾಯಕರ ಮೇಲಿನ ಭೌತಿಕ ದಾಳಿಗಳು ಹೆಚ್ಚುತ್ತಿರುವುದು ಇಡೀ ದೇಶದ ರಕ್ಷಣಾ ವಲಯದಲ್ಲಿ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭೀಕರ ಆತಂಕವನ್ನು ಸೃಷ್ಟಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net