Assam SIR | ನವೆಂಬರ್ 22 ರಿಂದ ಆಸ್ಸಾಂನಲ್ಲಿ ಎಸ್​ಐಆರ್​; ಎಲ್ಲ ರೀತಿಯ ನೆರವು ನೀಡುತ್ತೇವೆ ಎಂದ ಸಿಎಂ ಹಿಮಂತ ಬಿಸ್ವಾ ಶರ್ಮಾ

Assam SIR | ಮತದಾರರ ಪಟ್ಟಿ ಪರಿಷ್ಕರಿಸುತ್ತಿರುವ ಅಧಿಕಾರಿಗಳು ( ಕೃಪೆ ಪಿಟಿಐ)
Assam SIR | ಮತದಾರರ ಪಟ್ಟಿ ಪರಿಷ್ಕರಿಸುತ್ತಿರುವ ಅಧಿಕಾರಿಗಳು ( ಕೃಪೆ ಪಿಟಿಐ)
Published on
ದಿಸ್ಪುರ್: ಮುಂದಿನ ವರ್ಷ ನಡೆಯಲಿರುವ ಈಶಾನ್ಯ ರಾಜ್ಯದ ವಿಧಾನಸಭಾ ಚುನಾವಣೆಗೆ ಮುನ್ನ ಅಸ್ಸಾಂನಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ ( ನ.17) ಆದೇಶಿಸಿದೆ ಎಂದು ವರದಿಯಾಗಿದೆ.
ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಹೊರಡಿಸಿರುವ ಸೂಚನೆಗಳ ಪ್ರಕಾರ, ಅಸ್ಸಾಂನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ನವೆಂಬರ್ 22 ರಿಂದ ಡಿಸೆಂಬರ್ 20 ರವರೆಗೆ ಮನೆ-ಮನೆಗೆ ಪರಿಶೀಲನೆ ನಡೆಸಲಿದ್ದಾರೆ. ಅಂತಿಮ ಮತದಾರರ ಪಟ್ಟಿಯನ್ನು 2026 ಫೆಬ್ರವರಿ 10 ರಂದು ಪ್ರಕಟಿಸಲಿದೆ. ಬಿಹಾರದಲ್ಲಿ ಎರಡು ಹಂತದ ವಿಧಾನಸಭಾ ಚುನಾವಣೆಗಳು ಯಶಸ್ವಿಯಾಗಿ ಮುಕ್ತಾಯಗೊಂಡ ಬಳಿಕ ಈ ಆದೇಶ ಹೊರಬಿದ್ದಿದೆ.
ಮತದಾರರ ಪಟ್ಟಿಯ ಪರಿಷ್ಕರಣೆಯು ಕರಡು ಪ್ರಕಟಣೆಯೊಂದಿಗೆ ಪ್ರಾರಂಭವಾಗುವುದರಿಂದ, ನೈಜ ಮತದಾರರನ್ನು ಮಾತ್ರ ಪಟ್ಟಿಯಲ್ಲಿ ಉಳಿಸುವ, ಮರಣ ಹೊಂದಿದ, ಬೇರೆ ರಾಜ್ಯಕ್ಕೆ ವಲಸೆ ಹೋಗಿರುವವರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಈ ಪಟ್ಟಿಯ ಪರಿಷ್ಕರಣೆ ಪ್ರಾರಂಭವಾಗುವ ಮುನ್ನ ವಿವಿಧ ಪರಿಷ್ಕರಣಾ ಪೂರ್ವ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಆಸ್ಸಾಂದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕೈಗೊಳ್ಳುವ ಆಯೋಗದ ನಿರ್ಧಾರವನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ವಾಗತಿಸಿದ್ದು, ಈ ಪರಿಷ್ಕರಣೆಯನ್ನು ಪಾರದರ್ಶಕ ಮತ್ತು ಸಮಯಕ್ಕೆ ಅನುಗುಣವಾಗಿ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ನೆರವನ್ನು ತಮ್ಮ ಸರ್ಕಾರ ಒದಗಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಸಿಎಂ ಶರ್ಮಾ, ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಅಸ್ಸಾಂ ಸರ್ಕಾರ ಸ್ವಾಗತಿಸುತ್ತದೆ, ಇದು ಎಲ್ಲಾ ಅರ್ಹ ನಾಗರಿಕರಿಗೆ ಸ್ವಚ್ಛ, ನವೀಕರಿಸಿದ ಮತ್ತು ನಿಖರವಾದ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಚುನಾವಣಾ ಆಯೋಗ ಕಳೆದ ತಿಂಗಳು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪ)ಗಳಲ್ಲಿ ಎಸ್​​ಐಆರ್​ ಪ್ರಕ್ರಿಯೆ ನಡೆಸುವುದಾಗಿ ಘೋಷಿಸಿತ್ತು. ಮುಂದಿನ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net