ನಕಲಿ ದಾಖಲೆ ಸೃಷ್ಟಿಸಿ ವಂಚನೆ; ಸಚಿವ ಮಾಣಿಕ್​ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್; ರಾಜೀನಾಮೆ ಸಾಧ್ಯತೆ | Manikrao Kokate

ಮಹಾರಾಷ್ಟ್ರದ ಕ್ರೀಡಾ ಸಚಿವ ಮಾಣಿಕ್​ರಾವ್ ಕೊಕಾಟೆ
ಮಹಾರಾಷ್ಟ್ರದ ಕ್ರೀಡಾ ಸಚಿವ ಮಾಣಿಕ್​ರಾವ್ ಕೊಕಾಟೆ
Published on
ಮುಂಬೈ: ಮಹಾರಾಷ್ಟ್ರದ ಕ್ರೀಡಾ ಸಚಿವ ಮತ್ತು ಎನ್​ಸಿಪಿ ಶಾಸಕ ಮಾಣಿಕ್​ರಾವ್ ಕೊಕಾಟೆ(Manikrao Kokate) ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿದ ಆರೋಪ ಪ್ರಕರಣದಲ್ಲಿ ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಬುಧವಾರ(ಡಿ. 17) ಬಂಧನ ವಾರಂಟ್ ಹೊರಡಿಸಿದೆ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿಗಳ ಶೇ.10 ರಷ್ಟು ವಸತಿ ಕೋಟಾದಡಿ ಎರಡು ಅಪಾರ್ಟ್‌ಮೆಂಟ್‌ಗಳನ್ನು ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ(ಡಿ. 16) ಜೂನಿಯರ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಇಂದು ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದು ಬಂಧನ ವಾರಂಟ್ ಜಾರಿಗೊಳಿಸಿದೆ.
ನಾಸಿಕ್ ಜಿಲ್ಲೆಯ ಸಿನ್ನಾರ್‌ನ 68 ವರ್ಷದ ಶಾಸಕ ಕೊಕಟೆ, ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ ಕ್ರೀಡಾ, ಯುವಜನ ಕಲ್ಯಾಣ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದಾರೆ. ನ್ಯಾಯಾಲಯದ ತೀರ್ಪಿನ ಬಳಿ ಅವರ ಸ್ಥಾನ ಅನರ್ಹವಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಅವರು ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ.
1951ರ ಜನತಾ ಪ್ರಾತಿನಿಧ್ಯ ಕಾಯ್ದೆಯು ಕ್ರಿಮಿನಲ್ ಪ್ರಕರಣದಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದ ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸಲು ಆದೇಶಿಸುತ್ತದೆ.
ಮಾಣಿಕ್‌ರಾವ್ ಮತ್ತು ಅವರ ಸಹೋದರ ವಿಜಯ್ ಕೊಕಾಟೆ, 1995ರಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾದ ಸರ್ಕಾರಿ ಕೋಟಾದಡಿಯಲ್ಲಿ ಎರಡು ಫ್ಲಾಟ್‌ಗಳನ್ನು ತಮ್ಮ ಆದಾಯವನ್ನು ಮುಚ್ಚಿಹಾಕುವ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಖರೀದಿಸಿದ್ದರು. ಈ ಕುರಿತು ಶಿವಸೇನಾ ನಾಯಕ ಮತ್ತು ಆಗಿನ ಸಚಿವ ತುಕಾರಾಮ್ ದಿಘೋಲೆ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net