ಎಥೆನಾಲ್ ಸ್ಥಾವರ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ ಕರೆ, ತೀವ್ರ ಉದ್ವಿಗ್ನತೆ; ಹನುಮಾನ್​ಗಢದಲ್ಲಿ ಇಂಟರ್ನೆಟ್ ಸ್ಥಗಿತ | Hanumangarh

ಎಥೆನಲ್ ಸ್ಥಾವರ ವಿರೋಧಿಸಿ ಪ್ರತಿಭಟನೆ
ಎಥೆನಲ್ ಸ್ಥಾವರ ವಿರೋಧಿಸಿ ಪ್ರತಿಭಟನೆ
Published on
ಜೈಪುರ: ರಾಜಸ್ಥಾನದ ಹನುಮಾನಗಢ(Hanumangarh) ಜಿಲ್ಲೆಯಲ್ಲಿ ಪ್ರಸ್ತಾವಿತ ಎಥೆನಾಲ್ ಸ್ಥಾವರ ಸ್ಥಾಪನೆ ವಿರೋಧಿಸಿ ಇಂದು(ಡಿ. 17) ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಲು ಮಹಾಪಂಚಾಯತ್ ಕರೆ ನೀಡಿದ್ದಾರೆ. ಜಿಲ್ಲೆಯಲ್ಲಿ ಉದ್ವಿಗ್ನತೆಯ ವಾತಾವರಣ ಹಿನ್ನೆಲೆ ಇಂಟರ್ನೆಟ್​ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಟಿಬ್ಬಿ ತಹಸಿಲ್‌ನ ರಥಿ ಖೇಡಾ ಗ್ರಾಮದಲ್ಲಿ ಕಾರ್ಖಾನೆಯನ್ನು ನಿರ್ಮಿಸಲಾಗುತ್ತಿದೆ. ಕಳೆದ ವಾರ ಈ ವಿಷಯವಾಗಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ರೈತರು, ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ವಿಫಲವಾದ ನಂತರ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಹನುಮಾನ್‌ಗಢ ಜಂಕ್ಷನ್‌ನಲ್ಲಿರುವ ಧಾನ್ಯ ಮಾರುಕಟ್ಟೆಯಲ್ಲಿ ಬುಧವಾರ ದೊಡ್ಡ ಮಹಾಪಂಚಾಯತ್ ಕರೆಯಲಾಗಿದೆ ಎನ್ನಲಾಗಿದೆ.
ಎಥೆನಾಲ್ ಕಾರ್ಖಾನೆ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ವಾಯು ಮತ್ತು ಜಲ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಸ್ಥಳೀಯ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ರೈತರ ಆರೋಪ. ಕಾರ್ಖಾನೆಯ ನಿರ್ಮಾಣ ನಿಲ್ಲಿಸುವವರೆಗೆ ಹೋರಾಟ ಮಾಡುವುದಾಗಿ ರೈತ ಹೋರಾಟಗಾರರು ಹೇಳಿದ್ದಾರೆ.
ಇನ್ನೂ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಜಿಲ್ಲಾಡಳಿತ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ. ಶಿಸ್ತು ಕಾಯ್ದುಕೊಳ್ಳುವ ಸಲುವಾಗಿ, ಹನುಮಾನ್‌ಗಢದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಖುಶಾಲ್ ಯಾದವ್ ಅವರು ಜಿಲ್ಲೆಯ ಕಂದಾಯ ಮಿತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇದಲ್ಲದೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 163 ಅನ್ನು ಜಾರಿಗೊಳಿಸಲಾಗಿದೆ ಮತ್ತು ಅನಧಿಕೃತ ಸಭೆಗಳು ಮತ್ತು ಮೆರವಣಿಗೆಗಳ ಮೇಲೆ ನಿಷೇಧ ಹೇರಲಾಗಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಕೋಲುಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಪ್ರಚೋದನಕಾರಿ ಘೋಷಣೆಗಳು, ಭಾಷಣಗಳು ಮತ್ತು ಪ್ರಚಾರವನ್ನು ಸಹ ನಿಷೇಧಿಸಲಾಗಿದೆ.
ವದಂತಿಗಳು ಹರಡುವುದನ್ನು ತಡೆಯುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಇಂದು ಮತ್ತು ನಾಳೆ ಜಿಲ್ಲಾ ಕೇಂದ್ರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಯಾವುದೇ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇರುವುದರಿಂದ, ಆಡಳಿತವು ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿದೆ.
ಚಂಡೀಗಢ ಮೂಲದ ಡ್ಯೂನ್ ಎಥೆನಾಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯೂ ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಭಾಗವಾಗಿ, ರಥಿ ಖೇಡಾದಲ್ಲಿ 40 ಮೆಗಾವ್ಯಾಟ್ ಧಾನ್ಯ ಆಧಾರಿತ ಎಥೆನಾಲ್ ಸ್ಥಾವರವನ್ನು ಸ್ಥಾಪಿಸುತ್ತಿದೆ ಎನ್ನಲಾಗಿದೆ.
ಕಾರ್ಖಾನೆಯ ಸ್ಥಾಪನೆಯ ವಿರುದ್ಧ ಆರಂಭದಿಂದಲೂ ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರು ಶಾಂತಿಯುತ ಪ್ರತಿ ಪ್ರತಿಭಟನೆ ನಡೆಸಿದ್ದಾರೆ. 2024 ಸೆಪ್ಟೆಂಬರ್​ನಿಂದ ಜೂನ್ 2025 ರವರೆಗೆ ಸುಮಾರು 10 ತಿಂಗಳುಗಳ ಕಾಲ ಶಾಂತಿಯುತ ಪ್ರತಿಭಟನೆ ನಡೆದಿತ್ತು. ಆದರೆ 2025 ಜುಲೈನಲ್ಲಿ ಕಂಪನಿಯು ಸ್ಥಳದಲ್ಲಿ ಗಡಿ ಗೋಡೆಯನ್ನು ನಿರ್ಮಿಸಲು ಪ್ರಾರಂಭಿಸಿದ ನಂತರ ತೀವ್ರಗೊಂಡಿತು. ಹಿಂಸಾಚಾರ ಸ್ವರೂಪ ಪಡೆದು ಲಾಠಿ ಚಾರ್ಜ್​ ನಡೆದಿತ್ತು. ಸುಮಾರು 12 ರೈತ ಮುಖಂಡರನ್ನು ಬಂಧಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net