CM Siddaramaiah | ಬಿಜೆಪಿಯ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ: ಸಿಎಂ ಸಿದ್ದರಾಮಯ್ಯ

ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಂ  ಸಿದ್ದರಾಮಯ್ಯ
ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ
Published on
ಬೆಂಗಳೂರು: ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋಲನುಭವಿಸಿದ್ದು, ಕೇಂದ್ರ ಅಥವಾ ರಾಜ್ಯಗಳಾಗಲಿ, ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ನವರನ್ನು ಗುರಿಯಾಗಿಸಿ, ಅವರನ್ನು ಅಪರಾಧಿಗಳಾಗಿ ಬಿಂಬಿಸಿ, ನ್ಯಾಯಾಲಯಕ್ಕೆ ಎಡತಾಕುವಂತೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಎನ್‌ಡಿಎ ಸರ್ಕಾರದ ದ್ವೇಷ ರಾಜಕೀಯವನ್ನು ಖಂಡಿಸಿ ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಂ, ಇಂತಹ ಅಸತ್ಯವಾದ ವಿಚಾರವನ್ನು ಮುನ್ನಲೆಗೆ ತಂದು ಬಿಜೆಪಿಯವರು ಸ್ವಾರ್ಥ ಸಾಧನೆಯಲ್ಲಿ ತೊಡಗಿದ್ದಾರೆ. ತಮ್ಮ ತಪ್ಪುಗಳನ್ನು ಮರೆಮಾಚಲು ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಣದುಬ್ಬರ ಹೆಚ್ಚಿದ್ದು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜನರ ಮೇಲೆ ತೆರಿಗೆಗಳನ್ನು ಮನಬಂದಂತೆ ಹೇರಲಾಗುತ್ತಿದೆ, ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ದೇಶದ ಸಾಲ ಸುಮಾರು 53.11 ಲಕ್ಷ ಕೋಟಿ ರೂಪಾಯಿಷ್ಟಿತ್ತು, ಆದರೆ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಲದ ಮೊತ್ತ ಸುಮಾರು 200 ಲಕ್ಷ ಕೋಟಿಯನ್ನೂ ಮೀರಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 11 ವರ್ಷಗಳಲ್ಲಿ ಈ ಸಾಲದ ಮೊತ್ತವು 148 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಬಿಜೆಪಿಯವರು ತಮ್ಮ ಈ ತಪ್ಪನ್ನು ಮರೆಮಾಚಲು ಇಂತಹ ಸುಳ್ಳು ಪ್ರಕರಣಗಳ ಮೊರೆಹೋಗುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ವಿದೇಶದಲ್ಲಿನ ಕಪ್ಪುಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದ್ದರು. ಈ ಯಾವುದೇ ಭರವಸೆಗಳನ್ನು ಇಲ್ಲಿಯವರೆಗೂ ಈಡೇರಿಸಲಿಲ್ಲ. ಇತ್ತೀಚೆಗೆ ದೈನಂದಿನ ಬಳಕೆಯ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಗಗನಕ್ಕೇರಿವೆ. ಬಿಜೆಪಿಯವರು ತಮ್ಮ ಇಂತಹ ತಪ್ಪುಗಳನ್ನು ಮರೆಮಾಚಲು, ಸುಳ್ಳು ಪ್ರಕರಣಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
1937 ರಲ್ಲಿ ಜವಾಹರ್ ಲಾಲ್ ನೆಹರೂರವರು ದೇಶದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಆ ಬಳಿಕ ಪತ್ರಿಕೆಯನ್ನು ಯಂಗ್ ಇಂಡಿಯನ್ ಸಂಸ್ಥೆ ವಹಿಸಿಕೊಂಡಿತು. ಸಂಸ್ಥೆಗೆ ಸೇರಿದ್ದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಮೇಲೆ ಪ್ರಕರಣ ದಾಖಲಿಸಿ, ಇಡಿ ತನಿಖೆಯನ್ನು ಮಾಡಿಸಲಾಯಿತು. 2012 ರಲ್ಲಿ ಸುಬ್ರಮಣ್ಯಂಸ್ವಾಮಿಯವರು ಈ ಎಲ್ಲರ ವಿರುದ್ಧ ದಾವೆ ಹೂಡಿದ್ದರು. ಪ್ರಸ್ತುತ ಇ.ಡಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣವನ್ನು ಸುಳ್ಳು ಎಂದು ನ್ಯಾಯ ಎತ್ತಿಹಿಡಿದಿದೆ ಎಂದು ಹೇಳಿದರು.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯನ್ನು ಬದಲಿಸಿ VB-G RAM G ಯೋಜನೆಯೆಂದು ಬದಲಿಸಿದ್ದಾರೆ. ರಾಜಭವನವನ್ನು ಇಂದು ಲೋಕಭವನ ಎಂದು ಬದಲಾಯಿಸಿದ್ದಾರೆ. ಇದು ಸರ್ಕಾರದ ಆಸ್ತಿಯಾಗಿದ್ದು, ಇದರ ಹೆಸರನ್ನು ಬದಲಾವಣೆ ಮಾಡಿದ್ದು ಸರಿಯಲ್ಲ. ಕೇಂದ್ರ ಹೆಸರು ಬದಲಾಯಿಸುವ ಕಾರ್ಯದಲ್ಲಿ ನಿರತವಾಗಿದೆಯೇ ಹೊರತು ಬಡವರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಮಹಾತ್ಮಾಗಾಂಧಿ ಹಾಗೂ ಅಂಬೇಡ್ಕರ್​​​ರವರ ಚಿಂತನೆಗಳನ್ನು ಇಷ್ಟಪಡದ ಬಿಜೆಪಿಯವರಿಗೆ ಬಡವರನ್ನೂ ಕಂಡರೆ ಆಗುವುದಿಲ್ಲ. ದೇಶದ ಬಡವರಿಗೆಂದು ತಂದಿರುವ ಯಾವುದೇ ಯೋಜನೆಗಳಿಗೆ ಬಿಜೆಪಿಯವರ ಸಹಮತಿಯಿಲ್ಲ. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಕಡೆಗಣಿಸುವ ಬಿಜೆಪಿಯವರು, ಕರ್ನಾಟಕದಲ್ಲಿ ತಂದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದರು. ಆದರೆ ಈ ಜನಪರ ಯೋಜನೆಯನ್ನು ದೇಶದೆಲ್ಲೆಡೆ ಬಿಜೆಪಿ ಅನುಸರಿಸುತ್ತಿದೆ.
ಇಂದು ನ್ಯಾಯಾಲಯದ ತೀರ್ಪಿನ ಪರವಾಗಿ ಪ್ರತಿಭಟನೆಯನ್ನು ಕೈಗೊಂಡಿದ್ದು, ಸದನದ ಒಳಗೆ ಮತ್ತು ಹೊರಗೆ ಈ ಪ್ರತಿಭಟನೆಯನ್ನು ಮುಂದುವರೆಸಲಿದ್ದೇವೆ. ರಾಜ್ಯ ಹಾಗೂ ದೇಶದುದ್ದಕ್ಕೂ ಬಿಜೆಪಿಯ ಕುತಂತ್ರ ನೀತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತೇವೆ. ಕಾಂಗ್ರೆಸ್ ಎಂದಿಗೂ ಕೈಕಟ್ಟಿ ಕೂರುವ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಈಗ ದ್ವೇಷ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net