ನೀವು ತಿನ್ನುತ್ತಿರೋದು ಹಣ್ಣೋ ಅಥವಾ ಸ್ಲೋ ಪಾಯ್ಸನ್ನೋ? ಹಣ್ಣಿಗೆ ಇಲಿ ಪಾಷಾಣ ಬಳಿಯುತ್ತಿದ್ದವನ ವಿಡಿಯೋ ವೈರಲ್​! Rat Poison

ಮುಂಬೈನ ಮಲಾಡ್​ನ ಕಲಬೆರಿಕೆ ಹಣ್ಣಿನ ವ್ಯಾಪಾರಿ ವಿಡಿಯೋ ವೈರಲ್​
ಮುಂಬೈನ ಮಲಾಡ್​ನ ಕಲಬೆರಿಕೆ ಹಣ್ಣಿನ ವ್ಯಾಪಾರಿ ವಿಡಿಯೋ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ಹಣ್ಣು ಖರೀದಿಸುವ ಮುನ್ನ ಹತ್ತು ಬಾರಿ ಯೋಚಿಸಿ
  • ಕಾಯನ್ನು ಬೇಗ ಹಣ್ಣು ಮಾಡಲು ಇಲಿ ಪಾಷಾಣ ಬಳಸುತ್ತಿದ್ದ ವ್ಯಾಪಾರಿ
  • ಮುಂಬೈನ ಮಲಾಡ್​ನ ಕಲಬೆರಿಕೆ ಹಣ್ಣಿನ ವ್ಯಾಪಾರಿ ವಿಡಿಯೋ ವೈರಲ್​
ಮುಂಬೈ: ಮಾರುಕಟ್ಟೆಗೆ ಹೋದಾಗ ಹಣ್ಣುಗಳು ಫ್ರೆಶ್ ಆಗಿ, ಹಳದಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದರೆ ನಾವು ಮುಲಾಜಿಲ್ಲದೆ ಖರೀದಿಸುತ್ತೇವೆ. ಆದರೆ ಆ ಬಣ್ಣದ ಹಿಂದೆ ಅಡಗಿರುವ ಕರಾಳ ಸತ್ಯ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ.
ಇತ್ತೀಚೆಗೆ ಮುಂಬೈನ ಮಾಲಾಡ್‌ನಲ್ಲಿ ಹಣ್ಣಿನ ವ್ಯಾಪಾರಿಯೊಬ್ಬ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಈಗ ಬಯಲಾಗಿದೆ. ಹಣ್ಣುಗಳನ್ನು ಬೇಗ ಮಾಗಿಸಲು ಈತ ಇಲಿಗಳನ್ನು ಕೊಲ್ಲಲು ಬಳಸುವ ರಾಟೋಲ್ (Rat Poison) ಎಂಬ ವಿಷವನ್ನು ಬಳಸುತ್ತಿದ್ದ ಎಂದು ತಿಳಿದುಬಂದಿದೆ.

ವಿಡಿಯೋದಲ್ಲಿ ಬಯಲಾಯ್ತು ವ್ಯಾಪಾರಿಯ ವಿಕೃತಿ

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ (X) ನಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ವ್ಯಾಪಾರಿಯೊಬ್ಬ ತನ್ನ ಗಾಡಿಯಲ್ಲಿರುವ ಬಾಳೆಹಣ್ಣುಗಳಿಗೆ ಅತ್ಯಂತ ವಿಷಕಾರಿ ಇಲಿ ಪಾಷಾಣವಾದ ರಾಟೋಲ್ ಕ್ರೀಮ್ ಅನ್ನು ಹಚ್ಚುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಇದನ್ನು ನೋಡಿದ ಸಾರ್ವಜನಿಕರು ಆತನನ್ನು ತರಾಟೆಗೆ ತೆಗೆದುಕೊಂಡಾಗ, ಇವು ಕೊಳೆತ ಹಣ್ಣುಗಳು, ಅದಕ್ಕೆ ಹಚ್ಚುತ್ತಿದ್ದೇನೆ ಎಂದು ಕುಂಟು ನೆಪ ಹೇಳಿದ್ದಾನೆ.
ಆದರೆ, ವಿಡಿಯೋ ಮಾಡಿದ ವ್ಯಕ್ತಿ ಗಾಡಿಯಲ್ಲಿದ್ದ ದಾಳಿಂಬೆ ಹಣ್ಣುಗಳನ್ನು ಪರೀಕ್ಷಿಸಿದಾಗ ಅವುಗಳಿಗೂ ಈ ವಿಷಕಾರಿ ಕ್ರೀಮ್ ಹಚ್ಚಿರುವುದು ಪತ್ತೆಯಾಗಿದೆ. ನೋಡಿ, ಇದನ್ನೇ ನಮ್ಮ ಮಕ್ಕಳು ತಿನ್ನುವುದು, ಈ ಹಣ್ಣುಗಳನ್ನು ನಾನು ಖರೀದಿಸಲು ಬಂದಿದೆ ಸದ್ಯ ಬಚಾವಾದೆ ಎಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೇಳಿದ್ದಾನೆ.

ಯಾಕೆ ಈ ವಿಷ ಹಚ್ಚುತ್ತಾರೆ?

ಸಾಮಾನ್ಯವಾಗಿ ಹಣ್ಣುಗಳನ್ನು ಬೇಗ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸುವುದನ್ನು ಕೇಳಿದ್ದೇವೆ. ಆದರೆ ಈಗ ವ್ಯಾಪಾರಿಗಳು ಒಂದು ಹೆಜ್ಜೆ ಮುಂದೆ ಹೋಗಿ ರಾಟೋಲ್ ಬಳಸುತ್ತಿದ್ದಾರೆ. ಇದು ಅಸಿಟಿಲಿನ್ ಅನಿಲವನ್ನು ಬಿಡುಗಡೆ ಮಾಡುವ ಮೂಲಕ ಹಣ್ಣುಗಳನ್ನು ಅತಿ ವೇಗವಾಗಿ ಮೃದುಗೊಳಿಸುತ್ತದೆ ಮತ್ತು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಹೊರಗಿನಿಂದ ನೋಡಲು ಹಣ್ಣುಗಳು ತಾಜಾವಾಗಿ ಕಂಡರೂ, ಒಳಗಡೆ ಅವು ವಿಷವಾಗಿ ಪರಿವರ್ತಗೊಂಡಿರುತ್ತದೆ.

ಆರೋಗ್ಯದ ಮೇಲೆ ಏನಿದರ ಪರಿಣಾಮ?

ರಾಟೋಲ್ ಎಂಬುದು ಇಲಿಗಳನ್ನು ಸಾಯಿಸಲು ಬಳಸುವ ಕೆಮಿಕಲ್. ಇದರ ಸಣ್ಣ ಅಂಶ ನಮ್ಮ ಹೊಟ್ಟೆ ಸೇರಿದರೂ ತೀವ್ರವಾದ ವಾಂತಿ ಮತ್ತು ಹೊಟ್ಟೆ ನೋವು, ಕಿಡ್ನಿ ಮತ್ತು ಲಿವರ್ (ಯಕೃತ್ತು) ವೈಫಲ್ಯ ಮತ್ತು ಆಂತರಿಕ ರಕ್ತಸ್ರಾವದ ಮೂಲಕ ಸಾವು ಕೂಡ ಸಂಭವಿಸಬಹುದು.

ಗ್ರಾಹಕರೇ ಎಚ್ಚರ!

ಬಣ್ಣಕ್ಕೆ ಮರುಳಾಗಿ ಹಣ್ಣುಗಳನ್ನು ಖರೀದಿಸಬೇಡಿ. ಅತಿಯಾದ ಹಳದಿ ಬಣ್ಣವಿರುವ ಅಥವಾ ಯಾವುದೇ ಕಲೆಗಳಿಲ್ಲದ ಪರ್ಫೆಕ್ಟ್ ಹಣ್ಣುಗಳನ್ನು ಖರೀದಿಸುವಾಗ ಹತ್ತು ಬಾರಿ ಯೋಚಿಸಿ. ಹಣ್ಣುಗಳನ್ನು ಮನೆಗೆ ತಂದ ತಕ್ಷಣ ಉಪ್ಪಿನ ನೀರು ಅಥವಾ ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದೇ ಬಳಸಿ ಎನ್ನುವುದು ವೈದ್ಯರ ಸಲಹೆಯಾಗಿದೆ.
ಈ ಘಟನೆ ಈಗ ಮುಂಬೈ ಮಾತ್ರವಲ್ಲದೆ ದೇಶಾದ್ಯಂತ ಸಂಚಲನ ಮೂಡಿಸುತ್ತಿದ್ದು, ಜನರ ಪ್ರಾಣದ ಜೊತೆ ಆಟವಾಡುವ ಇಂತಹ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಹಾರ ಸುರಕ್ಷತಾ ಇಲಾಖೆಗೆ ಆಗ್ರಹಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net