ಕೊಲೆ ಕೇಸ್​ ಬೆನ್ನಲ್ಲೆ ಸಿಯಾಗೆ ಮತ್ತೊಂದು ಶಾಕ್​: ಅಂಗಡಿ ಸೀಲ್​ ಡೌನ್​; 8 ಲಕ್ಷ ಮೌಲ್ಯದ ಪದಾರ್ಥಗಳು ಜಫ್ತಿ! Siya Goel

ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಕೇಸ್ ಬೆನ್ನಲ್ಲೇ ಆರೋಪಿ ಸಿಯಾ ಗೋಯಲ್ ಕುಟುಂಬಕ್ಕೆ ಮತ್ತೊಂದು ಶಾಕ್!
ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಕೇಸ್ ಬೆನ್ನಲ್ಲೇ ಆರೋಪಿ ಸಿಯಾ ಗೋಯಲ್ ಕುಟುಂಬಕ್ಕೆ ಮತ್ತೊಂದು ಶಾಕ್!
Published on

ಪ್ರಮುಖ ಮುಖ್ಯಾಂಶಗಳು

  • ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಕೇಸ್ ಬೆನ್ನಲ್ಲೇ ಆರೋಪಿ ಸಿಯಾ ಗೋಯಲ್ ಕುಟುಂಬಕ್ಕೆ ಮತ್ತೊಂದು ಶಾಕ್!
  • FDA ದಾಳಿಯಲ್ಲಿ ಅಂಗಡಿ ಸೀಲ್ ಡೌನ್, 8 ಲಕ್ಷ ಮೌಲ್ಯದ ಕಳಪೆ ವಸ್ತುಗಳು ಜಪ್ತಿ
  • ಸುಮಾರು 4 ಸಾವಿರ ಕಿ.ಲೋ ಪದಾರ್ಥಗಳನ್ನು ಜಫ್ತಿ ಮಾಡಿದ ಅಧಿಕಾರಿಗಳು
ಪುಣೆ: ಕಳೆದ ತಿಂಗಳು ಪುಣೆಯ ಯುವ ಉದ್ಯಮಿ ಕೇತನ್​ ಅಗರ್​ವಾಲ್​ ಎಂಬಾತನನ್ನು ಆತನ ಭಾವಿ ಪತ್ನಿ ಸಿಯಾ ಗೋಯಲ್​ (Siya Goel) ಹಾಗೂ ಆಕೆಯ ಪ್ರಿಯಕರ ಚೇತನ್​ ಚೌಧರಿ ಸೇರಿಕೊಂಡು ಕೊಲೆ ಮಾಡಿದ ಘಟನೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇದರ ಬೆನ್ನಲ್ಲೆ ಸಿಯಾಗೆ ಸಂಬಂಧಿಸಿದ ಇನ್ನೊಂದು ಘಟನೆ ಈಗ ಬೆಳಕಿಗೆ ಬಂದಿದೆ.

ಸಿಯಾಳ ಅಂಗಡಿ ಮೇಲೆ ರೈಡ್​!

ಕೊಲೆ ಆರೋಪಿ ಸಿಯಾ ಗೋಯಲ್​ ಕುಟುಂಬಕ್ಕೆ ಸೇರಿದ ಡ್ರೈಪ್ರೂಟ್ಸ್ ಹಾಗೂ ಸಾಂಬಾರ್​ ಪದಾರ್ಥಗಳ ಅಂಗಡಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆಂದು ವರದಿಯಾಗಿದೆ. ಮಾಹಿತಿ ಪ್ರಕಾರ, ಅಂಗಡಿಗೆ ನೀಡಲಾಗಿದ್ದ ಪರವಾನಗಿಯನ್ನು ನವೀಕರಿಸದ ಹಿನ್ನಲೆಯಲ್ಲಿ ಈ ದಾಳಿ ನಡೆದಿದ್ದು, ಸದ್ಯ ಅಂಗಡಿಗೆ ಬೀಗ ಜಡಿಯಲಾಗಿದೆ ಎಂದು ತಿಳಿದು ಬಂದಿದೆ.
8 ಲಕ್ಷದ ಮಾಲು ಜಫ್ತಿ!
ಎಫ್​​ಡಿಎ ಅಧಿಕಾರಿಗಳು ನಡೆಸಿರುವ ಈ ದಾಳಿಯಲ್ಲಿ ಬಿ.ಜಿ. ಗೋಯಲ್​ ಮತ್ತು ಕಂಪನಿಗೆ ಸೇರಿದ ಅಂಗಡಿಯಿಂದ ಸುಮಾರು 8 ಲಕ್ಷ ಮೌಲ್ಯದ 4,172 ಕಿ.ಲೋ ಸಾಮಾಗ್ರಿಗಳನ್ನು ಜಫ್ತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅಂಗಡಿಯಲ್ಲಿ ಜಫ್ತಿ ಮಾಡಿರುವ ಪದಾರ್ಥಗಳ ಲೇಬಲಿಂಗ್​ ಹಾಗೂ ಕಲಬೆರಿಕೆ ನಡೆದಿರುವ ಹಿನ್ನಲೆ ಈ ಜಫ್ತಿ ಕಾರ್ಯ ನಡೆದಿದೆ ಎನ್ನಲಾಗಿದೆ. ಇದರಲ್ಲಿ ಎರಡು ಪ್ರತ್ಯೇಕ ಬ್ರ್ಯಾಂಡಿನ 598 ಹಾಗೂ 1,258 ಕಿ.ಲೋ ಅರಶಿಣ ಪೌಡರ್​, 538 ಕೆಜಿ ಎಳ್ಳು ಮತ್ತು 1,778 ಕೆಜಿ ಸೋಯಾ ಮಿನಿ ಚಂಕ್ಸ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಏನಿದು ಕೇತನ್​ ಅಗರ್​ವಾಲ್​ ಪ್ರಕರಣ?

ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ್​ ಅಗರವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರಮನೆಯೊಂದರಲ್ಲಿ ನವೆಂಬರ್​ನಲ್ಲಿ ಅದ್ದೂರಿ ವಿವಾಹವನ್ನು ಯೋಜಿಸಲಾಗಿತ್ತು. ಆದರೆ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ್​ನನ್ನು ಕಣಿವೆಗೆ ತಳ್ಳಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ.
22 ವರ್ಷದ ಚೇತನ್ ಬಬುಲಾಲ್ ಚೌಧರಿ ಎಂಬಾತನೊಂದಿಗೆ ಸಿಯಾ ಕಳೆದ ವರ್ಷ ಸಭೆಯೊಂದರಲ್ಲಿ ಪರಿಚಯವಾಗಿದ್ದಳು. ಸಿಯಾ ಬೇಕರಿ ವ್ಯವಹಾರ ನಡೆಸುತ್ತಿದ್ದರೆ, ಚೇತನ್ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದನು. ಇವರಿಬ್ಬರ ಸಂಬಂಧ 2025ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಅದೇ ವೇಳೆಗೆ ಸಿಯಾ ಮತ್ತು ಕೇತನ್​ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದವು.
ಪೊಲೀಸರ ಪ್ರಕಾರ, ಸಿಯಾ ಮತ್ತು ಕೇತನ ನಡುವಿನ ಸಂಬಂಧದಿಂದ ಚೇತನ್ ಅಸಮಾಧಾನಗೊಂಡಿದ್ದನು. ಕೇತನ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು. ಸಿಯಾ, ಪ್ರವಾಸದ ನೆಪದಲ್ಲಿ ಕೇತನನನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಚೇತನ್ ಸ್ಥಳಕ್ಕೆ ಆಗಮಿಸಿದ್ದಾನೆ. ಇಬ್ಬರೂ ಸೇರಿ ಕೇತನ್​ನನ್ನು ಹಿಂಬದಿಯಿಂದ ತಳ್ಳಿದ ಪರಿಣಾಮ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net