ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಕಂಪನದ ಮುನ್ಸೂಚನೆ: ಶಿವಸೇನಾ ಬೆನ್ನಲ್ಲೇ ಶರದ್ ಪವಾರ್ ಪಕ್ಷಕ್ಕೂ ಒಡಕಿನ ಭೀತಿ! Sharad Pawar NCP split

ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಕಂಪನದ ಮುನ್ಸೂಚನೆ: ಶಿವಸೇನಾ ಬೆನ್ನಲ್ಲೇ ಶರದ್ ಪವಾರ್ ಪಕ್ಷಕ್ಕೂ ಒಡಕಿನ ಭೀತಿ!
ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಕಂಪನದ ಮುನ್ಸೂಚನೆ: ಶಿವಸೇನಾ ಬೆನ್ನಲ್ಲೇ ಶರದ್ ಪವಾರ್ ಪಕ್ಷಕ್ಕೂ ಒಡಕಿನ ಭೀತಿ!
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಹಳೆ ದ್ವೇಷ ಮತ್ತು ಮೈತ್ರಿಗಳ ಆಟ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಪಕ್ಷದಲ್ಲಿ ಸಂಸದರ ಬಂಡಾಯದ ಬಿರುಗಾಳಿ ಎದ್ದಿರುವ ಬೆನ್ನಲ್ಲೇ, ಈಗ ಮತ್ತೊಂದು ಪ್ರಾದೇಶಿಕ ಪ್ರಬಲ ಪಕ್ಷವಾದ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (Sharad Pawar NCP split) ಪಕ್ಷಕ್ಕೂ ಒಡೆಯುವ ಭೀತಿ ಎದುರಾಗಿದೆ. ಶರದ್ ಪವಾರ್ ಬಣದ ಹಲವು ಸಂಸದರು ಮತ್ತು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣದ ನಾಯಕರು ಗಂಭೀರ ಹಕ್ಕು ಮಂಡಿಸಿದ್ದಾರೆ.

ಅಜಿತ್ ಪವಾರ್ ಬಣದ ನಾಯಕರ ಸ್ಫೋಟಕ ಹೇಳಿಕೆ

ಅಜಿತ್ ಪವಾರ್ ಬಣದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಾಬಾ ಧರ್ಮರಾವ್ ಆತ್ರಾಮ್ ಅವರು ಈ ಕುರಿತು ಸುಳಿವು ನೀಡಿದ್ದಾರೆ. ಶರದ್ ಪವಾರ್ ಬಣದ ಹಲವು ಪ್ರಮುಖ ಸಂಸದರು ಮತ್ತು ಶಾಸಕರು ಸದ್ದಿಲ್ಲದೆ ಅಜಿತ್ ಪವಾರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬದಲಾವಣೆಗಳು ನಡೆಯಲಿವೆ ಎಂದು ಅಜಿತ್ ಬಣದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಶರದ್ ಪವಾರ್ ಬಣದ ಯಾವುದೇ ಸಂಸದರು ಈ ವರೆಗೆ ಈ ಬಗ್ಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಪಕ್ಷ ಒಡೆಯಲು ಬೇಕು 6 ಸಂಸದರ ಬಲ!: ಸಂಖ್ಯೆಗಳ ಆಟವೇನು?

ಸದ್ಯದ ಪರಿಸ್ಥಿತಿಯಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷವು ಒಟ್ಟು 9 ಸಂಸದರನ್ನು ಹೊಂದಿದೆ (8 ಲೋಕಸಭೆ ಮತ್ತು 1 ರಾಜ್ಯಸಭೆ). ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅನರ್ಹತೆಯಿಂದ ಪಾರಾಗಬೇಕಾದರೆ, ಶರದ್ ಪವಾರ್ ಬಣದಿಂದ ಕನಿಷ್ಠ ಮೂರನೇ ಎರಡರಷ್ಟು ಸಂಸದರು ಒಟ್ಟಿಗೆ ಹೊರಬರಬೇಕಾಗುತ್ತದೆ.
ಅಂದರೆ, ಲೋಕಸಭೆಯ 8 ಸಂಸದರ ಪೈಕಿ ಕನಿಷ್ಠ 6 ಸಂಸದರು ಒಟ್ಟಾಗಿ ಬಂಡಾಯವೆದ್ದು ಅಜಿತ್ ಪವಾರ್ ಬಣದೊಂದಿಗೆ ವಿಲೀನವಾಗಬೇಕಾಗುತ್ತದೆ. ಸುಪ್ರಿಯಾ ಸುಳೆ, ಅಮೋಲ್ ಕೋಲ್ಹೆ, ಬಜರಂಗ್ ಸೋನವಾನೆ, ನೀಲೇಶ್ ಲಂಕೆ, ಸುರೇಶ್ ಮ್ಹಾತ್ರೆ, ಅಮರ್ ಕಾಳೆ, ಭಾಸ್ಕರ್ ಭಾಗರೆ ಮತ್ತು ಧೈರ್ಯಶೀಲ್ ಮೋಹಿತೆ-ಪಾಟೀಲ್ ಅವರು ಶರದ್ ಪವಾರ್ ಬಣದ ಪ್ರಮುಖ ಲೋಕಸಭಾ ಸಂಸದರಾಗಿದ್ದು, ಇವರಲ್ಲಿ ಯಾರು ಕೈಕೊಡಲಿದ್ದಾರೆ ಎಂಬ ಆತಂಕ ಪವಾರ್ ಕ್ಯಾಂಪ್‌ನಲ್ಲಿ ಶುರುವಾಗಿದೆ.

ಇತ್ತ ಶಿವಸೇನೆಯಲ್ಲೂ ಬಿಕ್ಕಟ್ಟು ತೀವ್ರ; 2022ರ ಇತಿಹಾಸ ಮರುಕಳಿಸುತ್ತಾ?

ಶರದ್ ಪವಾರ್ ಪಕ್ಷ ಒಡೆಯುವ ಸುದ್ದಿ ಹೊರಬೀಳುವ ಮುನ್ನವೇ, ಉದ್ಧವ್ ಠಾಕ್ರೆ ಅವರ ಶಿವಸೇನಾ (ಯುಬಿಟಿ) ಪಕ್ಷದ 6 ಸಂಸದರು ಈಗಾಗಲೇ ಬಂಡಾಯದ ಬಾವುಟ ಹಾರಿಸಿದ್ದಾರೆ. ತಮಗೆ ಲೋಕಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡಬೇಕು ಮತ್ತು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು ಎಂದು ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಇವರು ಶೀಘ್ರದಲ್ಲೇ ಡಿಸಿಎಂ ಏಕನಾಥ್ ಶಿಂದೆ ನೇತೃತ್ವದ ಅಸಲಿ ಶಿವಸೇನೆಗೆ ಬೆಂಬಲ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳು 2022ರಲ್ಲಿ ಮಹಾರಾಷ್ಟ್ರ ಸರ್ಕಾರ ಪತನಗೊಂಡಿದ್ದ ಭೀಕರ ರಾಜಕೀಯ ನಾಟಕವನ್ನು ನೆನಪಿಸುತ್ತಿವೆ.

ಜನಪ್ರತಿನಿಧಿಗಳ ಖರೀದಿ ಮಾರ್ಕೆಟ್' ಎಂದು ರೋಹಿತ್ ಪವಾರ್ ಆಕ್ರೋಶ

ಈ ಎಲ್ಲಾ ಬೆಳವಣಿಗೆಗಳ ಕುರಿತು ಶರದ್ ಪವಾರ್ ಅವರು ಸದ್ಯಕ್ಕೆ ಮೌನವಾಗಿದ್ದರೂ, ಅವರ ಮೊಮ್ಮಗ ಹಾಗೂ ಎನ್‌ಸಿಪಿ ಶಾಸಕ ರೋಹಿತ್ ಪವಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ರಾಜಕಾರಣಿಗಳು ನಿರುದ್ಯೋಗ, ರೈತರ ಕಷ್ಟ, ನೀರಿನ ಅಭಾವ ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡಬೇಕೇ ಹೊರತು ಶಾಸಕ-ಸಂಸದರನ್ನು ಖರೀದಿ ಮಾಡುವ ಮಾರ್ಕೆಟ್ ನಡೆಸಬಾರದು. ಸಾರ್ವಜನಿಕರ ನಂಬಿಕೆಗೆ ದ್ರೋಹ ಬಗೆಯುವ ಇಂತಹ ನಾಯಕರಿಗೆ ಮುಂಬರುವ ದಿನಗಳಲ್ಲಿ ಮತದಾರರೇ ಪ್ರಜಾಪ್ರಭುತ್ವದ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net