ಎಲ್ಲರೂ ಸತ್ತರೂ ಅಭಿಷೇಕ್ ಮಾತ್ರ ಬದುಕಬೇಕೆಂಬ ಹಠ!...ಟಿಎಂಸಿಯ ಎಲ್ಲಾ ಹುದ್ದೆಗಳಿಗೂ ಮದನ್ ಮಿತ್ರಾ ರಾಜೀನಾಮೆ | Madan Mitra

Madan Mitra | ಟಿಎಂಸಿ ಶಾಸಕ ಮದನ್ ಮಿತ್ರ
Madan Mitra | ಟಿಎಂಸಿ ಶಾಸಕ ಮದನ್ ಮಿತ್ರ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನಡೆಯ ನಂತರ ಆಂತರಿಕ ಕಲಹದಿಂದ ಬಸವಳಿದು ಹೋಗಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಪಕ್ಷದ ಪ್ರಭಾವಿ ನಾಯಕ ಮದನ್​ ಮಿತ್ರಾ (Madan Mitra) ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಗುಡ್​ ಬೈ ಹೇಳಿ, ರಿತಬ್ರತಾ ಬ್ಯಾನರ್ಜಿ ನೇತೃತ್ವದ ರೆಬೆಲ್​ ಟೀಮ್​ನೊಂದಿಗೆ ಕೈಜೋಡಿಸಿದ್ದಾರೆ.
ಬುಧವಾರ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಮದನ್ ಮಿತ್ರಾ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನೊಂದಿಗೆ ದಶಕಗಳ ಕಾಲ ಹೊಂದಿದ್ದ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಅಧಿಕೃತವಾಗಿ ಘೋಷಿಸಿದರು.
ಇತ್ತೀಚಿನ ಕೆಲ ವಾರಗಳಲ್ಲಿ ಟಿಎಂಸಿಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದು, ಹಲವು ಪ್ರಮುಖ ನಾಯಕರು ಪಕ್ಷದ ಅಧಿನಾಯಕಿಯಾಗಿದ್ದ ಮಮತಾರನ್ನು ತೊರೆದು ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ. ಈಗ ಅವರ ಸಾಲಿಗೆ ಮದನ್ ಮಿತ್ರಾ ಹೊಸ ಮತ್ತು ದೊಡ್ಡ ಸೇರ್ಪಡೆಯಾಗಿದೆ. ತಾವು ತೃಣಮೂಲ ಕಾಂಗ್ರೆಸ್‌ನ ಎಲ್ಲಾ ಸಾಂಸ್ಥಿಕ ಹುದ್ದೆಗಳಿಗೂ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ ಅವರು, ಪಕ್ಷದ ಹೈಕಮಾಂಡ್‌ನೊಂದಿಗೆ ಸಂಪೂರ್ಣವಾಗಿ ಸಂಬಂಧ ಕಡಿದುಕೊಂಡಿರುವುದಾಗಿ ಸ್ಪಷ್ಟಪಡಿಸಿದರು.

ಅಭಿಷೇಕ್ ಬ್ಯಾನರ್ಜಿ ವಿರುದ್ಧ ಮಿತ್ರಾ ಕಿಡಿ

ತಮ್ಮ ಈ ಕಠಿಣ ರಾಜಕೀಯ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟ ಮದನ್ ಮಿತ್ರಾ, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಪುನರ್ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಮತ್ತು ಸ್ವಲ್ಪ ದಿನಗಳ ಕಾಲ ನಾಯಕತ್ವದಿಂದ ದೂರವಿರುವಂತೆ ತಾವು ಅಭಿಷೇಕ್​​ಗೆ ಸಲಹೆ ನೀಡಿದ್ದಾಗಿ ಬಹಿರಂಗಪಡಿಸಿದರು.
ನಾನು ಅಭಿಷೇಕ್ ಬ್ಯಾನರ್ಜಿಗೆ ಕನಿಷ್ಠ ಆರು ತಿಂಗಳು ಅಥವಾ ಒಂದು ವರ್ಷದ ಮಟ್ಟಿಗೆ ನಾಯಕತ್ವದಿಂದ ಪಕ್ಕಕ್ಕೆ ಸರಿಯುವಂತೆ ಸಲಹೆ ನೀಡಿದ್ದೆ. ನಾವೆಲ್ಲರೂ ಸೇರಿ ಪಕ್ಷವನ್ನು ಮತ್ತೆ ಕಟ್ಟುತ್ತೇವೆ, ಆಮೇಲೆ ಬಂದು ನಿಮ್ಮ ಅಧಿಕಾರದ ಸೀಟಿನಲ್ಲಿ ಕೂತ್ಕೊಳ್ಳಿ ಎಂದು ಹೇಳಿದ್ದೆ. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ನಾನು ಪಕ್ಷ ಬಿಟ್ಟು ಹೋಗಲ್ಲ ಎಂದರು. ಆದರೆ ಇಂದು ಬಂಗಾಳದಲ್ಲಿ ಟಿಎಂಸಿ ಎಂಬ ದೋಣಿ ಸಂಪೂರ್ಣವಾಗಿ ಮುಳುಗುತ್ತಿದೆ, ಪಕ್ಷದ ಕಾರ್ಯಕರ್ತರು ಬೀದಿಗೆ ಬಿದ್ದಿದ್ದಾರೆ ಎಂದು ಮಿತ್ರಾ ಕಳವಳ ವ್ಯಕ್ತಪಡಿಸಿದರು.

ಎಲ್ಲರೂ ಸತ್ತರೂ ಅಭಿಷೇಕ್ ಮಾತ್ರ ಬದುಕಬೇಕೆಂಬ ಹಠ

ತಮ್ಮ ಆಕ್ರೋಶವನ್ನು ಮುಂದುವರಿಸಿದ ಮದನ್ ಮಿತ್ರಾ, ಪಕ್ಷದಲ್ಲಿ ಇತರ ಯಾರು ಬೇಕಾದರೂ ಸಾಯಬಹುದು, ಆದರೆ ಅಭಿಷೇಕ್ ಬ್ಯಾನರ್ಜಿಯನ್ನು ಮಾತ್ರ ಯಾವುದೇ ಬೆಲೆ ತೆತ್ತಾದರೂ ರಕ್ಷಿಸಲೇಬೇಕು ಎಂಬ ಹಠಕ್ಕೆ ಪಕ್ಷ ಬಿದ್ದಿರುವುದು ಅತ್ಯಂತ ವಿಷಾದನೀಯ ಸಂಗತಿ. ಟಿಎಂಸಿ ಪಕ್ಷವು ಎಲ್ಲರಿಗೂ ಸೇರಿದ್ದು, ಆದರೆ ಈಗ ಅದು ಕೇವಲ ಒಬ್ಬ ವ್ಯಕ್ತಿಯ (ಅಭಿಷೇಕ್) ಸೇವೆಗೆ ಮಾತ್ರ ಸೀಮಿತವಾಗಿರುವಂತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಮಮತಾ ಜಿ ಅವರಲ್ಲಿ ವಿನಂತಿಸುತ್ತೇನೆ ಬನ್ನಿ, ಇದನ್ನು ನಾವು ಮ್ಯಾರಥಾನ್ ಓಟ ಎಂದು ಭಾವಿಸೋಣ. ಈ ರಾಜಕೀಯ ಹಾದಿಯಲ್ಲಿ ನಾವಿಬ್ಬರೂ ಮುಖಾಮುಖಿಯಾಗಲಿದ್ದೇವೆ. ಯಾವ ಕುದುರೆ ಮುನ್ನಡೆಯುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ನಾನು ಸದ್ಯಕ್ಕೆ ಶಾಸಕನಾಗಿ ಮುಂದುವರಿದಿದ್ದರೂ, ತೃಣಮೂಲ ಕಾಂಗ್ರೆಸ್‌ಗೆ ಸಂಬಂಧಿಸಿದ ಎಲ್ಲವನ್ನೂ ತೊರೆದಿದ್ದೇನೆ. ಹೀಗಾಗಿ ನಾನು ಕೇವಲ ತಾಂತ್ರಿಕವಾಗಿ ಶಾಸಕನಾಗಿದ್ದೇನೆಯೇ ಹೊರತು, ಕ್ರಿಯಾತ್ಮಕವಾಗಿ ಇನ್ನು ಮುಂದೆ ಟಿಎಂಸಿ ಶಾಸಕನಲ್ಲ ಎಂದು ಘೋಷಿಸಿದರು.

ಬಂಗಾಳ ರಾಜಕೀಯದಲ್ಲಿ ಸಂಚಲನ

ಮದನ್ ಮಿತ್ರಾ ಅವರ ಈ ಬಂಡಾಯವು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಲೋಕಸಭೆ ಹಾಗೂ ಇತ್ತೀಚಿನ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವ ಮಮತಾ ಬ್ಯಾನರ್ಜಿ ಅವರಿಗೆ, ತಮ್ಮದೇ ಹಳೇ ಸಹುದ್ಯೋಗಿಗಳು ಈಗ ಎದುರಾಳಿಯಾಗಿ ನಿಲ್ಲುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net