ಲೋಕಸಭೆಯಲ್ಲಿ 20 ಸಂಸದರ ಸೀಟಿಂಗ್ ಪ್ಲಾನ್!...ಸ್ಪೀಕರ್ ಓಂ ಬಿರ್ಲಾ ಭೇಟಿಯಾದ್ರಾ ಬಂಡೋಪಾಧ್ಯಾಯ, ಕಾಕೋಲಿ ಘೋಷ್..? | TMC

TMC | ಲೋಕಸಭೆಯಲ್ಲಿ 20 ಸಂಸದರ ಸೀಟಿಂಗ್ ಪ್ಲಾನ್!
TMC | ಲೋಕಸಭೆಯಲ್ಲಿ 20 ಸಂಸದರ ಸೀಟಿಂಗ್ ಪ್ಲಾನ್!
Published on
ನವದೆಹಲಿ: ತೃಣಮೂಲ ಕಾಂಗ್ರೆಸ್ ತೊರೆದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಸೇರ್ಪಡೆಯಾಗಿರುವ ಲೋಕಸಭಾ ಸಂಸದರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಕಾಕೋಲಿ ಘೋಷ್ ದಸ್ತಿದಾರ್ ಅವರು ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ತಮ್ಮ ಪಕ್ಷದ 20 ಸಂಸದರಿಗೆ ಆಸನ ವ್ಯವಸ್ಥೆ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಈ ಭೇಟಿಯ ಸಂದರ್ಭದಲ್ಲಿ, ನೂತನ ಸಂಸತ್ ಭವನದಲ್ಲಿ ಪಕ್ಷದ ಕಚೇರಿ ಹಂಚಿಕೆ ಕುರಿತು ಕೂಡ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರಪಕ್ಷವಾಗಿ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾಗೆ ಸಂಸದೀಯ ಮಾನ್ಯತೆ ನೀಡುವ ಪ್ರಕ್ರಿಯೆಯ ನಡುವೆಯೇ ಈ ಭೇಟಿ ನಡೆದಿದೆ.
ಬಂಡೋಪಾಧ್ಯಾಯ ಇತ್ತೀಚೆಗೆ ಗೃಹ ಸಚಿವ ಅಮಿತ್ ಷಾ ಅವರನ್ನು ಸಹ ಭೇಟಿಯಾಗಿದ್ದರು ಎಂದು ಮೂಲವೊಂದು ತಿಳಿಸಿದೆ. ಎನ್‌ಸಿಪಿಐಗೆ ಸಂಸದೀಯ ಮಾನ್ಯತೆ ನೀಡಲು ಸ್ಪೀಕರ್ ಕಚೇರಿಗೆ ಅಧಿಕೃತ ಮನವಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಅಲ್ಲದೆ ಜುಲೈ 19 ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಈ ನಾಯಕರು ಭಾಗವಹಿಸುವ ಸಾಧ್ಯತೆಯಿದೆ.

20 ಸಂಸದರ ಅನರ್ಹತೆ ಕೋರಿ ಟಿಎಂಸಿಯಿಂದ ಅರ್ಜಿ ಸಲ್ಲಿಕೆ

ಪಕ್ಷ ತೊರೆದು ಎನ್‌ಸಿಪಿಐಗೆ ಸೇರಿರುವ 20 ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ತೃಣಮೂಲ ಕಾಂಗ್ರೆಸ್ ಅರ್ಜಿಗಳನ್ನು ಸಲ್ಲಿಸಿರುವುದರಿಂದ ಸ್ಪೀಕರ್ ಜೊತೆಗಿನ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಲೋಕಸಭೆಯ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಓಂ ಬಿರ್ಲಾ ಅವರನ್ನು ಭೇಟಿಯಾಗಿ ಸಂವಿಧಾನದ 10ನೇ ವೇಳಾಪಟ್ಟಿಯಡಿ ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ 20 ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಸಂಸದರು ಮತ್ತೊಂದು ಪಕ್ಷಕ್ಕೆ ಸೇರುವ ಮೂಲಕ ತೃಣಮೂಲ ಕಾಂಗ್ರೆಸ್ ಸದಸ್ಯತ್ವವನ್ನು ಸ್ವಯಂಪ್ರೇರಿತರಾಗಿ ತೊರೆದಿದ್ದಾರೆ, ಆದ್ದರಿಂದ ಅವರನ್ನು ಅನರ್ಹಗೊಳಿಸಬೇಕೆಂದು ಎಂದು ಮಮತಾ ಬ್ಯಾನರ್ಜಿ ಸಹ ವಾದಿಸಿದ್ದರು. ಅಲ್ಲದೆ, ಪಕ್ಷದ ಪ್ರತ್ಯೇಕ ಬಣ ಎಂದು ಹೇಳಿಕೊಳ್ಳುವ ಯಾವುದೇ ಗುಂಪಿಗೆ ಯಾವುದೇ ಮಾನ್ಯತೆ, ಸ್ಥಾನಮಾನ ಅಥವಾ ಸೌಲಭ್ಯವನ್ನು ನೀಡಬಾರದು ಎಂದು ಅವರು ಸ್ಪೀಕರ್ ಅವರನ್ನು ಒತ್ತಾಯಿಸಿದ್ದರು.

ಕಲ್ಯಾಣ್ ಬ್ಯಾನರ್ಜಿ ಉಚ್ಚಾಟನೆಗೆ ಕಾಕೋಲಿ ಘೋಷ್ ಆಗ್ರಹ

ಇದಕ್ಕೂ ಮೊದಲು, ಕಾಕೋಲಿ ಘೋಷ್ ದಸ್ತಿದಾರ್ ಅವರು ಮಹಿಳಾ ವಿರೋಧಿ ಹೇಳಿಕೆಗಳು ಹಾಗೂ ದುರ್ವರ್ತನೆ ನಡೆಸಿದ ಆಧಾರದ ಮೇಲೆ ಮಮತಾ ಬ್ಯಾನರ್ಜಿ ಬೆಂಬಲಿಗ ಕಲ್ಯಾಣ್ ಬ್ಯಾನರ್ಜಿಯನ್ನು ಉಚ್ಚಾಟಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಈ ವಿಷಯವಾಗಿ ಮಾತನಾಡಿದ್ದ ಘೋಷ್​, ಕಲ್ಯಾಣ್ ಬ್ಯಾನರ್ಜಿ ಸದನದ ಕಲಾಪಗಳ ಸಮಯದಲ್ಲಿ ನನ್ನ ಮತ್ತು ಇತರ ಮಹಿಳಾ ಸದಸ್ಯರ ವಿರುದ್ಧ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ. ಇಂತಹ ನಡವಳಿಕೆಯು ಸಂಸದನಿಗೆ ಶೋಭೆಯಲ್ಲ ಮತ್ತು ಜನಪ್ರತಿನಿಧಿಗಳಿಂದ ನಿರೀಕ್ಷಿಸುವ ಸಂಸದೀಯ ಚರ್ಚೆಯ ಘನತೆ, ಸೌಜನ್ಯ ಮತ್ತು ಮಾನದಂಡಗಳನ್ನು ಕುಗ್ಗಿಸುತ್ತದೆ ಎಂದು ಹೇಳಿ ಸ್ಪೀಕರ್ ಮಧ್ಯಪ್ರವೇಶಕ್ಕಾಗಿ ಮನವಿ ಮಾಡಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net