

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿದ್ದು, ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಹಿರಿಯ ನಾಯಕ ಆನಂದ್ ದುಬೆ (Anand Dubey) ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಮತ್ತೊಂದು ಬಣಕ್ಕೆ ಸೇರ್ಪಡೆಯಾದರು. ಈಗಾಗಲೇ ಚುನಾವಣಾ ಸೋಲಿನಿಂದ ರಾಜ್ಯದಲ್ಲಿ ಕಂಗೆಟ್ಟು ಹೋಗಿರುವ ಉದ್ಧವ್ ಬಣಕ್ಕೆ ಈ ಬೆಳವಣಿಗೆ ದೊಡ್ಡ ಶಾಕ್ ನೀಡಿದೆ.
ಕಳೆದ ಕೆಲವು ದಿನಗಳ ಹಿಂದೆಯೇ ಆನಂದ್ ದುಬೆ ಅವರು ಉದ್ಧವ್ ಬಣದ ಪ್ರಾಥಮಿಕ ಸದಸ್ಯತ್ವ ಹಾಗೂ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಉದ್ಧವ್ ಠಾಕ್ರೆ ಬಣದ ನೀತಿ-ನಿರೂಪಣೆಗಳನ್ನು ಸಮರ್ಥಿಸಿಕೊಳ್ಳುವಲ್ಲಿ ಆನಂದ್ ದುಬೆ ಮುಂಚೂಣಿಯಲ್ಲಿದ್ದರು. ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಹಿಂದಿ ಮಾತನಾಡುವ ಮತದಾರರನ್ನು ಸೆಳೆಯುವಲ್ಲಿ ಮತ್ತು ಪಕ್ಷದ ಸಿದ್ಧಾಂತವನ್ನು ಜನರಿಗೆ ತಲುಪಿಸುವಲ್ಲಿ ದುಬೆ ಪಾತ್ರ ಅತ್ಯಂತ ನಿರ್ಣಾಯಕವಾಗಿತ್ತು ಎನ್ನಲಾಗಿದ್ದು, ಪಕ್ಷದೊಳಗಿನ ಆಂತರಿಕ ಬೆಳವಣಿಗೆಗಳು ಮತ್ತು ನಾಯಕತ್ವದ ಧೋರಣೆಯಿಂದ ಬೇಸತ್ತು ಅವರು ಪಕ್ಷ ತೊರೆಯುವ ಗಂಭೀರ ನಿರ್ಧಾರ ಕೈಗೊಂಡಿದ್ದಾರೆ.
ರಾಜೀನಾಮೆ ಘೋಷಣೆ ವೇಳೆ ತೀವ್ರ ಭಾವೋದ್ವೇಗಕ್ಕೊಳಗಾಗಿದ್ದ ದುಬೆ, ನಾನು ನನ್ನ ಇಷ್ಟದ ಶಿವಸೇನೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ರಾಷ್ಟ್ರೀಯ ವಕ್ತಾರ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ಪಕ್ಷದೊಂದಿಗೆ ನನ್ನ ಎಲ್ಲಾ ನಂಟನ್ನು ಕಡಿದುಕೊಳ್ಳುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಮ್ಮ ನಿರ್ಗಮನದ ಹಿಂದಿನ ಅಂತರಂಗದ ನೋವನ್ನು ತೋಡಿಕೊಂಡ ಆನಂದ್ ದುಬೆ, ಈ ನಿರ್ಧಾರವು ಯಾವುದೇ ಆತುರದ ಅಥವಾ ಹಠಾತ್ ಬೆಳವಣಿಗೆಯಲ್ಲ, ಬದಲಿಗೆ ಕಳೆದ ಕೆಲವು ವರ್ಷಗಳಿಂದ ತಮ್ಮೊಳಗೇ ನಡೆಯುತ್ತಿದ್ದ ಆಂತರಿಕ ಹೋರಾಟದ ಫಲ ಎಂದು ಸ್ಪಷ್ಟಪಡಿಸಿದರು. ಕಳೆದ ನಾಲ್ಕೈದು ವರ್ಷಗಳಿಂದ ನಾನು ರಾಜ್ಯಮಟ್ಟದ ವಿಷಯಗಳಿಂದ ಹಿಡಿದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರಗಳವರೆಗೆ ಪಕ್ಷದ ನಿಲುವನ್ನು ಬಲವಾಗಿ ಪ್ರತಿಪಾದಿಸುತ್ತ ಬಂದಿದ್ದೇನೆ. ಆದರೆ, ಕಳೆದ ಕೆಲವು ತಿಂಗಳುಗಳಿಂದ ನಾನು ತೀವ್ರ ಮೌನ ವೇದನೆ ಅನುಭವಿಸುತ್ತಿದ್ದೆ ಎಂದು ದುಬೆ ಬಹಿರಂಗಪಡಿಸಿದ್ದಾರೆ.
ಪಕ್ಷವು ತನ್ನ ಮೂಲ ಸಿದ್ಧಾಂತ ಹಾಗೂ ತಾತ್ವಿಕ ನೆಲೆಗಟ್ಟಿನಿಂದ ವಿಮುಖವಾಗುತ್ತಿದೆ ಎಂದು ನೇರವಾಗಿ ಆರೋಪಿಸಿದ ದುಬೆ, ನನಗೆ ಪ್ರಾಣಕ್ಕಿಂತ ಹೆಚ್ಚಾಗಿರುವ ಹಿಂದುತ್ವ ಮತ್ತು ಸನಾತನ ಧರ್ಮದ ಮೂಲಭೂತ ಆದರ್ಶಗಳನ್ನು ಪಕ್ಷದಲ್ಲಿದ್ದುಕೊಂಡು ಮುಕ್ತವಾಗಿ ಪ್ರತಿಪಾದಿಸಲು ನನಗೆ ಅವಕಾಶ ಸಿಗುತ್ತಿರಲಿಲ್ಲ. ನನ್ನ ನಂಬಿಕೆಗಳಿಗೆ ಧಕ್ಕೆಯಾಗುತ್ತಿದ್ದ ಕಾರಣ ನಾನು ಈ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಹೇಳಿದರು. ಸ್ವಾಮಿ ವಿವೇಕಾನಂದ, ವೀರ ಸಾವರ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ವಿಚಾರಧಾರೆಗಳನ್ನು ಎತ್ತಿಹಿಡಿಯುವ ಕಾರ್ಯಕರ್ತನಿಗೆ ಇಂದಿನ ಪಕ್ಷದ ರಾಜಕೀಯ ದಿಕ್ಕು ಸರಿಹೋಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಉದ್ಧವ್ ಬಣದ ಪ್ರಮುಖ ಹಿಂದಿ ಮಾತನಾಡುವ ನಾಯಕ ಹಾಗೂ ಪ್ರಭಾವಿ ವಕ್ತಾರರೊಬ್ಬರು ಹೀಗೆ ಪಕ್ಷಾಂತರಗೊಂಡಿರುವುದು ಏಕನಾಥ್ ಶಿಂಧೆ ಬಣಕ್ಕೆ ದೊಡ್ಡ ಬಲ ತಂದುಕೊಟ್ಟಿದೆ. ಥಾಣೆಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಶಿಂಧೆ ಆನಂದ್ ದುಬೆಯನ್ನು ಪಕ್ಷಕ್ಕೆ ಸ್ವಾಗತಿಸಿದರು(ಏಜೆನ್ಸೀಸ್).