

ಮುಂಬೈ: ಚುನಾವಣಾ ಆಯೋಗದ ವಿರುದ್ಧ ತಮ್ಮ ಪಕ್ಷ ತಳೆದಿರುವ ನಿಲುವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಿವಸೇನೆ (UBT) ವಕ್ತಾರ ಆನಂದ್ ದುಬೆ (Anand Dubey) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದುಬೆ, ನನ್ನ ಆದರ್ಶಗಳು ಸ್ಮಿತ್ ಮಚ್ಚಾರ್, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ವೀರ್ ಸಾವರ್ಕರ್ ಹೊರತು ಶರ್ಜೀಲ್ ಇಮಾಮ್, ಉಮರ್ ಖಾಲಿದ್ ಅಥವಾ ಧ್ರುವ್ ರಾಠಿ ಅಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಚಳವಳಿಗೆ ತಮ್ಮ ಪಕ್ಷ ಬೆಂಬಲ ನೀಡುತ್ತಿರುವುದನ್ನು ಅವರು ಬಹಿರಂಗವಾಗಿ ಖಂಡಿಸಿದ್ದು, ನನಗೆ ಮೊದಲು ದೇಶ, ನಂತರ ಪಕ್ಷ ಹಾಗೂ ಆನಂದ್ ದುಬೆ ಎಂದು ಸ್ಪಷ್ಟಪಡಿಸಿದ್ದಾರೆ
ಇದಕ್ಕೂ ಮುನ್ನ, ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಿಜೆಪಿ ಸಂಘಟನೆಯು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಹಾಗೂ ಎಂಎನ್‌ಎಸ್ ನಾಯಕ ಅಮಿತ್ ಠಾಕ್ರೆ ಭಾಗವಹಿಸಿದ್ದರು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದರು.
ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಆದಿತ್ಯ ಠಾಕ್ರೆ, ಮಹಿಳಾ ಕಾರ್ಯಕರ್ತೆಯರು ಸೇರಿದಂತೆ ಶಿವಸೇನೆ ನಾಯಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಹಾಗೂ ಪ್ರತಿಭಟನೆಯಲ್ಲಿ ನಿರತರಾಗಿದ್ದ ಮಹಿಳೆಯೊಬ್ಬರ ಸೀರೆಯನ್ನು ಹರಿಯಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಮುಂಬೈನ ಮೂಲೆಮೂಲೆಯಿಂದ ಜನರು ಶಿವಾಜಿ ಪಾರ್ಕ್‌ಗೆ ಬರಬೇಕು. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ದೇಶದ್ರೋಹಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಮ್ಮ ಚಳವಳಿ ತೀವ್ರಗೊಳ್ಳಲಿದೆ ಎಂದು ಕರೆ ನೀಡಿದರು.
ಮತ್ತೊಂದೆಡೆ, ಮತಗಳ ಕಳ್ಳತನ ಆರೋಪ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕೆಂದು ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್‌ಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ವಿರುದ್ಧ ಹರಿದಾಯ್ದ ರಾಹುಲ್ ಗಾಂಧಿ, ಯಾರಿಂದಲೂ ಭಾರತದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ದೆಹಲಿ ಪೊಲೀಸರ ಮೂಲಕ ಪ್ರತಿಭಟನಾಕಾರರನ್ನು ಹತೋಟಿಗೆ ತರಲು ಸರ್ಕಾರ ಯತ್ನಿಸುತ್ತಿದೆ. ಆದರೆ ವಿರೋಧ ಪಕ್ಷದ ನಾಯಕರು ಪ್ರೀತಿ, ಸೌಹಾರ್ದತೆ ಮತ್ತು ದೇಶಭಕ್ತಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ತಲುಪಲಿದ್ದಾರೆ ಎಂದರು.
ಈ ಎಲ್ಲಾ ಗೊಂದಲಗಳ ನಡುವೆ, ದೇಶದ ರಾಜಧಾನಿಯಲ್ಲಿ ಪ್ರತಿಭಟನೆಗೆ ಹೆಸರಾಗಿದ್ದ ಜಂತರ್ ಮಂತರ್ ಅನ್ನು ಧರಣಿ ಸ್ಥಳವೆಂದು ಪರಿಗಣಿಸುವುದನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರು ಈ ಹೊಸ ಆದೇಶಕ್ಕೆ ಸಹಿ ಹಾಕಿದ್ದು, ಪ್ರತಿಭಟನೆಗಳನ್ನು ನಡೆಸಲು ಮೂರು ಹೊಸ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
ರಾಮಲೀಲಾ ಮೈದಾನ
ಬುರಾರಿ ಮೈದಾನ
ಸಿಬಿಡಿ ಮೈದಾನ
ಕೇಂದ್ರ ಗೃಹ ಸಚಿವಾಲಯವು ರಚಿಸಿದ್ದ ಸಮಿತಿಯ ಶಿಫಾರಸಿನಂತೆ ಈ ಹೊಸ ಸ್ಥಳಗಳನ್ನು ಅಂತಿಮಗೊಳಿಸಲಾಗಿದ್ದು, ಸಾರ್ವಜನಿಕರ ಹಕ್ಕುಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ(ಏಜೆನ್ಸೀಸ್).