

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಡೆದ ಉಪಚುನಾವಣೆಗಳು ಹಾಗೂ ರಾಜಸ್ಥಾನ ಮತ್ತು ತ್ರಿಪುರಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಜನರಿಂದ ಮತ್ತಷ್ಟು ಬೆಂಬಲ ಸಿಕ್ಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮಿತ್ ಷಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ಒಕ್ಕೂಟವು ಸುಳ್ಳುಗಳು, ಗೊಂದಲ ಮತ್ತು ದುರುದ್ದೇಶಪೂರಿತ ಅಪಪ್ರಚಾರವನ್ನು ಹರಡುತ್ತಿದೆ ಎಂದು ಆರೋಪಿಸಿ, ಮತದಾರರು ಇಂಡಿಯಾ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸತತವಾಗಿ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತ ಬಂದಿದೆ ಎಂದು ಹೇಳಿದ್ದಾರೆ.
ಸೋಲಿನ ಬಳಿಕ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುತ್ತಿರುವ ವಿರೋಧ ಪಕ್ಷಗಳ ಕುರಿತು ಮಾತನಾಡಿದ ಅಮಿತ್ ಷಾ, ಪ್ರತಿಪಕ್ಷಗಳು ತಮ್ಮ ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿರುವುದರಿಂದಲೇ ಚುನಾವಣಾ ಸೋಲುಗಳ ಬಳಿಕ ಸಂಸ್ಥೆಗಳನ್ನು ಪ್ರಶ್ನಿಸುತ್ತವೆ ಎಂದು ಆರೋಪಿಸಿದರು. ತಮ್ಮ ಸಾರ್ವಜನಿಕ ನೆಲೆಯನ್ನು ಕಳೆದುಕೊಂಡಿರುವ ಈ ಪಕ್ಷಗಳು ಪ್ರತಿ ಸೋಲಿನ ನಂತರ ಸಂಸ್ಥೆಗಳನ್ನು ಪ್ರಶ್ನಿಸುತ್ತವೆ, ಆದರೆ ಜನರು ಇವರ ಈ ನಡವಳಿಕೆಯನ್ನು ಕಂಡುಹಿಡಿದಿದ್ದಾರೆ, ಬಿಜೆಪಿಗೆ ಪ್ರಚಂಡ ಜನಾದೇಶ ನೀಡುವ ಮೂಲಕ ಮತ್ತೊಮ್ಮೆ ತಮ್ಮ ಅಚಲ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದ ಅಮಿತ್ ಷಾ ಅವರು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ವಿಶ್ವ ಶರ್ಮಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಮತ್ತು ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ. ಆಯಾ ರಾಜ್ಯಗಳ ಪಕ್ಷದ ಅಧ್ಯಕ್ಷರು ಮತ್ತು ಪಕ್ಷದ ಕಾರ್ಯಕರ್ತರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.
ಉಪಚುನಾವಣೆ ಗೆಲುವಿನ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಜನರ ನಿರಂತರ ಆಶೀರ್ವಾದಕ್ಕೆ ಧನ್ಯವಾದಗಳು!, ಅಸ್ಸಾಂನ ನಾಗಾಂವ್ ಲೋಕಸಭಾ ಫಲಿತಾಂಶ ಹಾಗೂ ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಫಲಿತಾಂಶಗಳು, ಬಿಜೆಪಿ-ಎನ್‌ಡಿಎಯ ಉತ್ತಮ ಆಡಳಿತದ ಅಜೆಂಡಾದೊಂದಿಗೆ ಜನರಿಗೆ ಆಳವಾದ ನಂಟಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ.
ಈ ಚುನಾವಣೆಯಲ್ಲಿ ವಿಜಯಶಾಲಿಯಾದ ಬಿಜೆಪಿ ಅಭ್ಯರ್ಥಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತೇನೆ. ಹಾಗೆಯೇ, ಪುದುಚೇರಿಯ ಥಟ್ಟಂಚವಾಡಿಯ ಉಪಚುನಾವಣೆಯಲ್ಲಿ ಜಯಗಳಿಸಿದ ನಮ್ಮ ಎನ್‌ಡಿಎ ಮಿತ್ರಪಕ್ಷವಾದ ಎಐಎನ್‌ಆರ್‌ಸಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜನರ ಕಲ್ಯಾಣಕ್ಕಾಗಿ ಮತ್ತು ಉಜ್ವಲ ಹಾಗೂ ಹೆಚ್ಚು ಸಮೃದ್ಧ ಭವಿಷ್ಯದ ಅವರ ಆಕಾಂಕ್ಷೆಗಳನ್ನು ಈಡೇರಿಸಲು ನಾವು ದಣಿವರಿಯಿಲ್ಲದೆ ಕೆಲಸ ಮಾಡುವಾಗ ಈ ಜನಾದೇಶ ನಮಗೆ ಹೆಚ್ಚಿನ ಬಲವನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ(ಏಜೆನ್ಸೀಸ್).